ಹೈದರಾಬಾದ್:ಟೆಸ್ಟ್ ಆಟದ ಸೊಬಗನ್ನೇ ಬದಲಿಸಿ ತನ್ನದೇ ಆದ 'ಬೇಸ್ಬಾಲ್' ತಂತ್ರ ಬಳಸಿ ಆಡಲು ಹೋದ ಪ್ರವಾಸಿ ಇಂಗ್ಲೆಂಡ್ಗೆ ಭಾರತ ತಂಡ ಸಖತ್ ಗುನ್ನಾ ನೀಡಿದೆ. ಇಂದಿನಿಂದ ಆರಂಭವಾದ ಮೊದಲ ಟೆಸ್ಟ್ನ ಪ್ರಥಮ ಇನಿಂಗ್ಸ್ನಲ್ಲಿ ಆಂಗ್ಲರು 246 ರನ್ಗಳಿಗೆ ಗಂಟೆಮೂಟೆ ಕಟ್ಟಿದರು. ಇದಕ್ಕುತ್ತರವಾಗಿ ಭಾರತ ಮೊದಲ ದಿನದಾಂತ್ಯಕ್ಕೆ 1 ವಿಕೆಟ್‌ಗೆ 119 ರನ್ ಗಳಿಸಿತು. ಮುನ್ನಡೆ ಸಾಧಿಸಲು ಇನ್ನೂ 127 ರನ್ ಬೇಕಾಗಿದೆ.
ಹೈದರಾಬಾದ್ನ ಉಪ್ಪಲ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಆಂಗ್ಲ ತಂಡದ ನಾಯಕ ಬೆನ್ ಸ್ಟೋಕ್ಸ್ ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದರು. ನಾಯಕನ ನಿರ್ಧಾರ ಸರಿ ಎಂಬಂತೆ ಬ್ಯಾಟ್ ಮಾಡಿದ ಆರಂಭಿಕ ಜೋಡಿಯಾದ ಝಾಕ್ ಕ್ರಾಲಿ ಮತ್ತು ಬೆನ್ ಡಕೆಟ್ ಆಕ್ರಮಣಕಾರಿ ಆಟವಾಡಿದರು. ಮೊದಲ ವಿಕೆಟ್‌ಗೆ 55 ರನ್ ಗಳಿಸಿದರು. ಬಿಡುಬೀಸಾಗಿ ಬ್ಯಾಟ್ ಮಾಡುತ್ತಿದ್ದ ಡಕೆಟ್ (35)ರನ್ನು 12ನೇ ಓವರ್‌ನಲ್ಲಿ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಪೆವಿಲಿಯನ್ಗೆ ಅಟ್ಟಿದರು.
ಓಲಿ ಪೋಪ್ (1) ಬಂದಷ್ಟೇ ವೇಗದಲ್ಲಿ ಜಡೇಜಾ ಬೌಲಿಂಗ್ನಲ್ಲಿ ವಾಪಸ್ ಆದರು. ಇದರ ಬೆನ್ನಲ್ಲೇ ಝಾಕ್ ಕ್ರಾಲಿ (20) ವಿಕೆಟ್ ನೀಡಿದರು. ತಂಡದ ಶಕ್ತಿಯಾದ ಜೋ ರೂಟ್ (29), ಜಾನಿ ಬೈರ್ಸ್ಟೋವ್ (37) ಇನಿಂಗ್ಸ್ ಕಟ್ಟಲು ಆರಂಭಿಸಿದರು. ಇದಕ್ಕೆ ಅಕ್ಷರ್ ಪಟೇಲ್ ಅವಕಾಶ ನೀಡಲಿಲ್ಲ. ಹಿರಿಯ ಆಟಗಾರ ಬೈರ್ಸ್ಟೋವ್ ಅವರನ್ನು ಕ್ಲೀನ್ಬೌಲ್ಡ್ ಮಾಡಿದರು. ಎರಡೇ ಓವರ್ ಅಂತರದಲ್ಲಿ ರೂಟ್ ಕೂಡ ಜಡೇಜಾ ಬೌಲಿಂಗ್ನಲ್ಲಿ ಔಟಾದರು.
ನಾಯಕ ಬೆನ್ ಅರ್ಧಶತಕದಾಟ:ರವೀಂದ್ರ ಜಡೇಜಾ, ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಬೌಲಿಂಗ್ ದಾಳಿಗೆ ಆಂಗ್ಲ ಬ್ಯಾಟರ್ಗಳು ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದರು. ಇತ್ತ ನಾಯಕ ಬೆನ್ ಸ್ಟೋಕ್ಸ್ ದೃಢವಾಗಿ ನಿಂತು ರನ್ ಕಲೆಹಾಕಿದರು. ಬಾಲಂಗೋಚಿಗಳ ಜೊತೆ ಸೇರಿ 106 ರನ್ ತಂಡದ ಮೊತ್ತಕ್ಕೆ ಸೇರಿಸಿದರು. 70 ರನ್ಗಳನ್ನು ಗಳಿಸಿ ಆಡುತ್ತಿದ್ದಾಗ ಬೂಮ್ರಾ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ತಂಡದ ಮೊದಲ ಇನಿಂಗ್ಸ್ಗೆ ತೆರೆ ಬಿತ್ತು. ಇದರಿಂದ ಆಂಗ್ಲ ಪಡೆ 64.3 ಓವರ್ಗಳಲ್ಲಿ 246 ರನ್ ಗಳಿಸಿತು. ಭಾರತದ ಪರವಾಗಿ ಜಡೇಜಾ, ಅಶ್ವಿನ್ ತಲಾ ಮೂರು, ಅಕ್ಷರ್, ಬೂಮ್ರಾ ತಲಾ 2 ವಿಕೆಟ್ ಕಿತ್ತರು.
'ಯಶಸ್ವಿ' ಇನಿಂಗ್ಸ್ ಕಟ್ಟಿದ ಜೈಸ್ವಾಲ್:ಮೊದಲ ಇನಿಂಗ್ಸ್ ಆರಂಭಿಸಿದ ಭಾರತಕ್ಕೆ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಭರ್ಜರಿ ಆರಂಭ ನೀಡಿದರು. ಇಂಗ್ಲೆಂಡ್ನ ಬೇಸ್ಬಾಲ್ ತಂತ್ರವನ್ನೇ ಬಳಸಿಕೊಂಡ ಆಟಗಾರ ಹೊಡಿಬಡಿ ಆಟವಾಡಿದರು. 9 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಸಿಡಿಸಿದರು. ಇದೇ ವೇಳೆ, ನಾಯಕ ರೋಹಿತ್ ಶರ್ಮಾ (24) ಕೂಡ ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದಾಗ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ನೀಡಿದರು. ಇಬ್ಬರೂ ಮೊದಲ ವಿಕೆಟ್‌ಗೆ 80 ರನ್ ಸೇರಿಸಿದರು.
ರೋಹಿತ್ ಔಟಾದ ಬಳಿಕ ಜೈಸ್ವಾಲ್ ಕೂಡಿಕೊಂಡ ಶುಭ್ಮನ್ ಗಿಲ್ ನಿಧಾನಗತಿ ಬ್ಯಾಟಿಂಗ್ ನಡೆಸಿದರು. ಜೈಸ್ವಾಲ್ 70 ಎಸೆತಗಳಲ್ಲಿ 76 ರನ್ ಗಳಿಸಿದ್ದು, ಗಿಲ್ 14 ರನ್ನಿಂದ ನಾಳೆ ವಿಕೆಟ್ ಕಾದಿರಿಸಿಕೊಂಡಿದ್ದಾರೆ. ಈ ಜೋಡಿ ಮುರಿಯದ ಎರಡನೇ ವಿಕೆಟ್‌ಗೆ 39 ರನ್ ಸೇರಿಸಿದೆ. ಭಾರತ ಇನ್ನೂ 127 ರನ್‌ಗಳಿಂದ ಇಂಗ್ಲೆಂಡ್‌ಗಿಂತ ಹಿಂದಿದೆ. ಬೌಲಿಂಗ್ನಲ್ಲಿ ಮಿಂಚಿದ ಭಾರತ ತಂಡದ ಬ್ಯಾಟಿಂಗ್ನಲ್ಲೂ ಹಿಡಿತ ಸಾಧಿಸಿ ಮೊದಲ ದಿನದಾಟದಲ್ಲಿ ಪ್ರಾಬಲ್ಯ ಸಾಧಿಸಿತು.
ಇದನ್ನೂ ಓದಿ:ಪ್ರಥಮ ಬಾರಿಗೆ ಆಸ್ಟ್ರೇಲಿಯನ್ ಓಪನ್ ಡಬಲ್ಸ್ ಫೈನಲ್ ಪ್ರವೇಶಿಸಿದ ರೋಹನ್ ಬೋಪಣ್ಣ