ಕರ್ನಾಟಕ

karnataka

ETV Bharat / sports

5ನೇ ಟೆಸ್ಟ್​: ಕುಲದೀಪ್​ ಯಾದವ್​ಗೆ 5 ವಿಕೆಟ್​ ಗೊಂಚಲು, ಇಂಗ್ಲೆಂಡ್​ 218ಕ್ಕೆ ಆಲೌಟ್​

ಮಣಿಕಟ್ಟು ಬೌಲರ್​ ಕುಲದೀಪ್​ ಯಾದವ್​ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ನಲ್ಲಿ 4ನೇ ಬಾರಿಗೆ 5 ವಿಕೆಟ್​ ಗೊಂಚಲು ಪಡೆದರು. ಇಂಗ್ಲೆಂಡ್​ 218 ರನ್​ಗೆ ಆಲೌಟ್​ ಆಯಿತು.

ಕುಲದೀಪ್​ ಯಾದವ್​
ಕುಲದೀಪ್​ ಯಾದವ್​

By ETV Bharat Karnataka Team

Published : Mar 7, 2024, 3:36 PM IST

Updated : Mar 7, 2024, 5:45 PM IST

ಧರ್ಮಶಾಲಾ:ನಿಧಾನಗತಿಯ ಪಿಚ್​ನಲ್ಲೂ ಭಾರತೀಯ ಸ್ಪಿನ್​ ತಂತ್ರ ಕೆಲಸ ಮಾಡುತ್ತೆ ಎಂಬುದನ್ನು ಕುಲದೀಪ್​ ಯಾದವ್​ ಮತ್ತು ಆರ್​ ಅಶ್ವಿನ್​ ತೋರಿಸಿಕೊಟ್ಟರು. ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿ ನಡೆಯುತ್ತಿರುವ ಐದನೇ ಮತ್ತು ಅಂತಿಮ ಟೆಸ್ಟ್​ನಲ್ಲಿ ಯಾದವ್​ 5 ವಿಕೆಟ್​​ಗಳ ಗೊಂಚಲು ಪಡೆದರು. ಜೊತೆಗೆ ಟೆಸ್ಟ್​ ಕ್ರಿಕೆಟ್​ನಲ್ಲಿ 50 ವಿಕೆಟ್​ಗಳನ್ನೂ ಪೂರೈಸಿದರು.

ಉತ್ತಮ ಆರಂಭದ ಹೊರತಾಗಿಯೂ ನೂರನೇ ಟೆಸ್ಟ್​ ಆಡುತ್ತಿರುವ ಅಶ್ವಿನ್​ ಮತ್ತು ಕುಲದೀಪ್​ ಯಾದವ್​ ಸ್ಪಿನ್​ ದಾಳಿಗೆ ಸಿಲುಕಿದ ಆಂಗ್ಲರು 57.4 ಓವರ್​ಗಳಲ್ಲಿ 218 ರನ್​ಗಳಿಗೆ ಆಲೌಟ್​ ಆದರು. ಆರಂಭಿಕರಾದ ಬೆನ್​ ಡಕೆಟ್​, ಜಾಕ್​ ಕ್ರಾಲಿ ಮೊದಲ ವಿಕೆಟ್​ಗೆ 64 ರನ್​ ಸೇರಿಸಿದರು. ಡಕೆಟ್​ 27 ರನ್​ಗೆ ವಿಕೆಟ್ ನೀಡಿದರೆ, ಜಾಕ್​ ಸರಣಿಯಲ್ಲಿ 4ನೇ ಅರ್ಧಶತಕ ಬಾರಿಸಿದರು. ಇದಾದ ಬಳಿಕ ವಿಕೆಟ್​ ಕಳೆದುಕೊಳ್ಳುತ್ತಾ ಸಾಗಿತು.

100ನೇ ಟೆಸ್ಟ್​ ಆಡುತ್ತಿರುವ ಜಾನಿ ಬೈರ್​ಸ್ಟೋವ್​ 29, ಜೋ ರೂಟ್​ 26, ಬೆನ್​ಫೋಕ್ಸ್​ 24 ಬಿಟ್ಟರೆ ಉಳಿದೆಲ್ಲಾ ಆಟಗಾರರು ಬಂದಷ್ಟೇ ವೇಗವಾಗಿ ಪೆವಿಲಿಯನ್​ ಸೇರಿದರು. 175 ರನ್​ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡ ಉಳಿದ ವಿಕೆಟ್​ಗಳನ್ನು 43 ರನ್​ಗೆ ಕಳೆದುಕೊಂಡು ಸರ್ವಪತನ ಕಂಡಿತು.

ಅವಳಿಗಳ ಸ್ಪಿನ್​ ಬ್ರಹ್ಮಾಸ್ತ್ರ:ಕುಲದೀಪ್​ ಯಾದವ್​ ಮತ್ತು ರವಿಚಂದ್ರನ್​ ಅಶ್ವಿನ್​ ಸ್ಪಿನ್​ ಅಸ್ತ್ರದ ಮುಂದೆ ಆಂಗ್ಲರು ತರಗೆಲೆಯಂತೆ ಉದುರಿದರು. ಯಾದವ್​ 15 ಓವರ್​ಗಳಲ್ಲಿ 4.48 ರ ಎಕಾನಮಿಯಲ್ಲಿ 72 ರನ್​ ನೀಡಿ ಪ್ರಮುಖ 5 ವಿಕೆಟ್​ ಕಿತ್ತರು. ಇದರೊಂದಿಗೆ ಟೆಸ್ಟ್​ ಕ್ರಿಕೆಟ್​ನಲ್ಲಿ 50 ವಿಕೆಟ್​ ಸಾಧನೆ ಮಾಡಿದರು. ಇದು ಯಾದವ್​ಗೆ 4ನೇ ಐದು ವಿಕೆಟ್​ ಗೊಂಚಲಾಗಿದೆ. ತಾನೇನು ಕಮ್ಮಿ ಇಲ್ಲ ಎಂಬಂತೆ ಬೌಲ್​ ಮಾಡಿದ 100 ಪಂದ್ಯಗಳ ಸರದಾರ ಅಶ್ವಿನ್ 4 ವಿಕೆಟ್​ ಪಡೆದು ಇಂಗ್ಲೆಂಡ್​ನ ಬೆನ್ನೆಲುಬು ಮುರಿದರು. ರವೀಂದ್ರ ಜಡೇಜಾ 1 ವಿಕೆಟ್ ಕಿತ್ತರು.

ಬೆಸ್ಟ್​ ಸ್ಟ್ರೈಕ್​ ರೇಟ್​​:ಟೆಸ್ಟ್​​ ಕ್ರಿಕೆಟ್​ನಲ್ಲಿ ಕುಲದೀಪ್​ ಯಾದವ್​ ಉತ್ತಮ ಸ್ಟ್ರೈಕ್​ ರೇಟ್​ ಕಾಯ್ದುಕೊಂಡಿದ್ದಾರೆ. ಆಡಿದ 12 ಟೆಸ್ಟ್​ಗಳಲ್ಲಿ 50 ವಿಕೆಟ್​ ಪೂರೈಸಿದ್ದು, ಅವರ ಸ್ಟ್ರೈಕ್​ರೇಟ್​ 36.64. ಎಕಾನಮಿ 3.44 ರಷ್ಟು ಇದೆ. ಮೊದಲ 50 ವಿಕೆಟ್​ಗಳಲ್ಲಿ ಇಷ್ಟು ಪ್ರಭಾವಿಯಾಗಿದ್ದು, ಇಂಗ್ಲೆಂಡ್​ನ ಮಾಜಿ ಬೌಲರ್​ ಜಾರ್ಜ್​ ಲೋಮನ್​ (34.1) ಬಳಿಕ ಕುಲದೀಪ್​ ಇದ್ದಾರೆ. ಬಳಿಕ ಆಸ್ಟ್ರೇಲಿಯಾದ ಜಾನ್​ ಫೆರ್ರಿಸ್​ 37.7, ನ್ಯೂಜಿಲ್ಯಾಂಡ್​​ನ ಶೇನ್​ ಬಾಂಡ್​ 38.7 ಸ್ಟ್ರೈಕ್​ರೇಟ್​ನೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ:ಐಪಿಎಲ್​-2024 ಬಳಿಕ ಕ್ರಿಕೆಟ್​ನಿಂದ ದಿನೇಶ್​ ಕಾರ್ತಿಕ್​ ನಿವೃತ್ತಿ

Last Updated : Mar 7, 2024, 5:45 PM IST

ABOUT THE AUTHOR

...view details