ಕಾನ್ಪುರ್ (ಉತ್ತರ ಪ್ರದೇಶ):ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯ ಕಾನ್ಪುರದಲ್ಲಿ ನಡೆಯುತ್ತಿದೆ. ಮಳೆಯಿಂದಾಗಿ ಮೊದಲ ದಿನ ಕೇವಲ 35 ಓವರ್‌ಗಳ ಪಂದ್ಯ ನಡೆಸಲು ಮಾತ್ರ ಸಾಧ್ಯವಾಗಿತ್ತು. ಇದಾದ ಬಳಿಕ ಎರಡು ಮತ್ತು ಮೂರನೇ ದಿನದಾಟ ಮಳೆಗೆ ಆಹುತಿಯಾಗಿತ್ತು. ಇಂದು ನಾಲ್ಕನೇ ದಿನದಾಟ ನಡೆಯುತ್ತಿದ್ದು ಬಾಂಗ್ಲಾದೇಶದ ಮೊದಲ ಇನಿಂಗ್ಸ್ನಲ್ಲಿ ಕೇವಲ 233 ರನ್‌ಗಳಿಸಲಷ್ಟೇ ಸೀಮಿತವಾಗಿದೆ. ಭಾರತೀಯ ಬೌಲರ್ಗಳ ದಾಳಿಗೆ ಸಿಲುಕಿದ ಬಾಂಗ್ಲಾ ಪಡೆ ಪೆವಿಲಿಯನ್ ಪರೇಡ್ ಮಾಡಿತು. ಇನ್ನು ಈ ಇನ್ನಿಂಗ್ಸ್ನಲ್ಲಿ ರೋಹಿತ್ ಶರ್ಮಾ ಮತ್ತು ಮೊಹ್ಮದ್ ಸಿರಾಜ್ ಸ್ಟನ್ನಿಂಗ್ ಕ್ಯಾಚ್ ಹಿಡಿಯುವ ಮೂಲಕ ನೆರೆದಿದ್ದ ಅಭಿಮಾನಿಗಳನ್ನು ಬೆರಗುಗೊಳಿಸಿದ್ದಾರೆ.
ಹೌದು, 50ನೇ ಓವರ್‌ನಲ್ಲಿ ವೇಗಿ ಮೊಹಮ್ಮದ್ ಸಿರಾಜ್ ಬೌಲಿಂಗ್ ಮಾಡುತ್ತಿದ್ದರು. ಈ ಓವರ್‌ನ ನಾಲ್ಕನೇ ಎಸೆತದಲ್ಲಿ ಲಿಟನ್ ದಾಸ್ ಮಿಡ್ ಆಫ್‌ನಿಂದ ಚೆಂಡನ್ನು ಬೌಂಡರಿಗೆ ಬಾರಿಸಲು ಬಲವಾಗಿ ಹೊಡೆದರು. ಚೆಂಡು ಮಿಡ್-ಆಫ್ ಫೀಲ್ಡರ್ ಅನ್ನು ದಾಟಿ ಬೌಂಡರಿ ಹೋಗಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಅಲ್ಲೆ ಫಿಲ್ಡಿಂಗ್ಗೆ ನಿಂತಿದ್ದ ನಾಯಕ ರೋಹಿತ್ ಶರ್ಮಾ ಮೇಲಕ್ಕೆ ಜಿಗಿದು ಅಚ್ಚರಿಯ ಕ್ಯಾಚ್ ಪಡೆದು ಲಿಟನ್ ಅವರಿಗೆ ಪೆವಿಲಿಯನ್ ದಾರಿ ತೋರಿಸಿದ್ದಾರೆ.