Ind vs Aus, 4th Test: ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್ರೌಂಡರ್ ಆರ್.ಅಶ್ವಿನ್ ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಮಧ್ಯೆ ನಡೆಯುತ್ತಿರುವ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದ ಅವರು, ಮೂರನೇ ಟೆಸ್ಟ್ ಪಂದ್ಯದ ನಂತರ ದಿಢೀರ್ ನಿವೃತ್ತಿ ಘೋಷಿಸಿ ಅಚ್ಚರಿಗೊಳಿಸಿದ್ದರು.
ಈ ಸರಣಿಯಲ್ಲಿ ಅಶ್ವಿನ್ ಕೇವಲ ಒಂದು ಪಂದ್ಯ ಮಾತ್ರ ಆಡಿದ್ದರು. ಅಡಿಲೇಡ್ನ ಓವೆಲ್ ಮೈದಾನದಲ್ಲಿ ನಡೆದಿದ್ದ ಪಿಂಕ್ ಬಾಲ್ ಟೆಸ್ಟ್ನಲ್ಲಿ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಂಡಿದ್ದ ಅಶ್ವಿನ್, ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಬೌಲಿಂಗ್ನಲ್ಲಿ 1 ವಿಕೆಟ್ ಪಡೆದಿದ್ದು ಬ್ಯಾಟಿಂಗ್ನಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ 22 ರನ್, ಎರಡನೇ ಇನ್ನಿಂಗ್ಸ್ನಲ್ಲಿ 7 ರನ್ ಮಾತ್ರ ಕಲೆಹಾಕಿದ್ದರು. ಬಳಿಕ ಗಾಬಾದಲ್ಲಿ ಮೂರನೇ ಟೆಸ್ಟ್ನಿಂದ ಅಶ್ವಿನ್‌ರನ್ನು ತಂಡದಿಂದ ಹೊರಗಿಡಲಾಗಿತ್ತು. ಈ ಪಂದ್ಯದ ಬೆನ್ನಲ್ಲೇ ತಮ್ಮ 14 ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದರು.
ಅಶ್ವಿನ್ ನಿವೃತ್ತಿಯ ನಂತರ ಉಳಿದ ಟೆಸ್ಟ್ ಪಂದ್ಯಗಳಿಗೆ ಅವರ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂದು ಟೀಂ ಇಂಡಿಯಾದಲ್ಲಿ ಭಾರೀ ಚರ್ಚೆ ನಡೆಯುತ್ತಿತ್ತು. ಹಲವಾರು ಆಟಗಾರರ ಹೆಸರು ಕೂಡ ಕೇಳಿ ಬಂದಿತ್ತು. ಆದ್ರೆ ಅವರ ಸ್ಥಾನಕ್ಕೆ ಮುಂಬೈನ ಯುವ ಆಟಗಾರ ಮತ್ತು ಉಡುಪಿ ಮೂಲದ ತನುಷ್ ಕೋಟ್ಯಾನ್ ಅವರನ್ನು ಆಯ್ಕೆ ಮಾಡಲಾಗಿದೆ.