ಕರ್ನಾಟಕ

karnataka

ETV Bharat / sports

ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 184 ರನ್​​ಗಳ ಹೀನಾಯ ಸೋಲು: WTC ಫೈನಲ್​ ಕನಸು ಭಗ್ನ? - AUSTRALIA BEAT INDIA

ಆಸ್ಟ್ರೇಲಿಯಾ ವಿರುದ್ಧ ನಡೆದ ಬಾಕ್ಸಿಂಗ್​ ಡೇ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ 184 ರನ್​ಗಳ ಹೀನಾಯ ಸೋಲು ಅನುಭವಿಸಿದೆ.

BOXING DAY TEST  IND VS AUS 4TH TEST
ಆಸ್ಟ್ರೇಲಿಯಾ ತಂಡ (AP)

By ETV Bharat Sports Team

Published : Dec 30, 2024, 12:13 PM IST

Updated : Dec 30, 2024, 1:15 PM IST

Ind vs Aus 4th test: ಬಾರ್ಡರ್ ಗವಾಸ್ಕರ್ ಟ್ರೋಫಿ ಭಾಗವಾಗಿ ಮೆಲ್ಬೋರ್ನ್ ಕ್ರಿಕೆಟ್​ ಮೈದಾನದಲ್ಲಿ ನಡೆದ ನಾಲ್ಕನೇ ಟೆಸ್ಟ್​ ಪಂದ್ಯದಲ್ಲಿ ಭಾರತ ಹೀನಾಯವಾಗಿ ಸೋಲನುಭವಿಸಿದೆ. ಈ ರೋಚಕ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ ಸಾಂಘಿಕ ಪ್ರದರ್ಶನ ತೋರಿದ್ದರೂ ಅಂತಿಮವಾಗಿ 184ರನ್ ಗಳಿಂದ ಸೋಲನ್ನು ಕಂಡಿದೆ. ಇದರೊಂದಿಗೆ ಐದು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಆಸ್ಟ್ರೇಲಿಯಾ 2-1 ಅಂತರದಿಂದ ಮುನ್ನಡೆ ಸಾಧಿಸಿದೆ.

ಎರಡನೇ ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ 228/9 ಓವರ್‌ನೈಟ್ ಸ್ಕೋರ್‌ನೊಂದಿಗೆ ಐದನೇ ದಿನದಾಟವನ್ನು ಪ್ರಾರಂಭಿಸಿ 234 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್‌ನಲ್ಲಿ 105 ರನ್‌ಗಳ ಮುನ್ನಡೆಯೊಂದಿಗೆ ಭಾರತಕ್ಕೆ 340 ರನ್‌ಗಳ ಗುರಿಯನ್ನು ನೀಡಿತು. ಈ ಬೃಹರ್​ ಗುರಿಯನ್ನು ಬೆನ್ನಟ್ಟಿದ ಭಾರತ ಆರಂಭದಲ್ಲಿ ಹಿನ್ನಡೆ ಅನುಭವಿಸಿತು.

ನಾಯಕ ರೋಹಿತ್ ಶರ್ಮಾ (9), ವಿರಾಟ್ ಕೊಹ್ಲಿ (5) ಮತ್ತು ಕೆಎಲ್ ರಾಹುಲ್ (0) ಎರಡನೇ ಇನ್ನಿಂಗ್ಸ್​ನಲ್ಲೂ ವಿಫಲರಾದರು. ಇದರಿಂದಾಗಿ ಭಾರತ ಭೋಜನ ವಿರಾಮದ ವೇಳೆಗೆ 33ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇನ್ನೂ 70 ಓವರ್‌ಗಳು ಬಾಕಿ ಇರುವಾಗಲೇ ಭಾರತ ಸೋಲುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು.

ಆದರೆ ಹಿರಿಯ ಬ್ಯಾಟ್ಸ್‌ಮನ್‌ಗಳು ವಿಫಲರಾದರೂ ಯುವ ಬ್ಯಾಟರ್​ಗಳಾದ ಯಶಸ್ವಿ ಜೈಶ್ವಾಲ್ ಮತ್ತು ರಿಷಭ್​ ಪಂತ್ ಕಾಂಗರೂ ಪಡೆ ವಿರುದ್ಧ ಹೋರಾಟ ನಡೆಸಿದರು. ಎರಡನೇ ಸೆಷನ್‌ನಲ್ಲಿ ಇಬ್ಬರೂ ಭರ್ಜರಿ ಬ್ಯಾಟಿಂಗ್​ ಪ್ರದರ್ಶನ ತೋರಿದರು. ಇದರಿಂದಾಗಿ ಎರಡನೇ ಸೆಷನ್​ನಲ್ಲಿ ಆಸ್ಟ್ರೇಲಿಯಾಗೆ ಒಂದೂ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.

ಇದರಿಂದಾಗಿ ಐದನೇ ದಿನದ ಎರಡನೇ ಸೆಷನ್‌ನಲ್ಲಿ ಭಾರತ 27.5 ಓವರ್‌ಗಳಲ್ಲಿ ಯಾವುದೇ ವಿಕೆಟ್​ ನಷ್ಟವಿಲ್ಲದೇ 79 ರನ್ ಕಲೆಹಾಕಿತು. ಐದನೇ ದಿನದ ಚಹಾ ವಿರಾಮದ ವೇಳೆಗೆ 112/3 ರನ್​ ಕಲೆಹಾಕಿ ಪಂದ್ಯದ ಮೇಲೂ ಹಿಡಿತ ಸಾಧಿಸಲಾರಂಭಿಸಿತು.

ಆದರೆ, ಮೂರನೇ ಸೆಷನ್​ ಆರಂಭವಾಗುತ್ತಿದ್ದಂತೆ, ಭಾರತಕ್ಕೆ ಕಾಂಗರೂ ಪಡೆ ಶಾಕ್​ ನೀಡಿತು. 30 ರನ್​ ಗಳಿಸಿದ್ದ ರಿಷಭ್​ ಪಂತ್​ ಟ್ರಾವಿಸ್​ ಹೆಡ್​ ಬೌಲಿಂಗ್​ನಲ್ಲಿ ಬೌಂಡರಿ ಬಾರಿಸಲು ಯತ್ನಿಸಿ ಕ್ಯಾಚೌಟ್​ ಆಗಿ ಪೆವಿಲಿಯನ್​ ಸೇರಿದರು. ಇಲ್ಲಿಂದ ಭಾರತದ ಪತನ ಆರಂಭವಾಯ್ತು.

ನಂತರ ಬಂದ ಜಡೇಜಾ, ಮೊದಲ ಇನಿಂಗ್ಸ್‌ನ ಶತಕವೀರ ನಿತೀಶ್ ರೆಡ್ಡಿ, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಒಂದೇ ಅಂಕೆಗೆ ಪೆವಿಲಿಯನ್​ ದಾರಿ ಹಿಡಿದರು. ಅಂಪೈರ್ ವಿವಾದಾತ್ಮಕ ತೀರ್ಪಿನಿಂದಾಗಿ ಜೈಶ್ವಾಲ್ (84) ಕೂಡ ಪೆವಿಲಿಯನ್ ಸೇರಿದರು. ಇದರೊಂದಿಗೆ ಭಾರತ 155 ರನ್‌ಗಳಿಗೆ ಆಲೌಟ್ ಆಯಿತು.

ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಬಾರ್ಡರ್​​ ಗವಾಸ್ಕರ್​ ಟ್ರೋಫಿ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ಮತ್ತೊಂದೆಡೆ ಭಾರತ 4ನೇ ಪಂದ್ಯದಲ್ಲಿ ಸೋಲಿನ ಬೆನ್ನಲ್ಲೇ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ಗೆ​ ನೇರವಾಗಿ ಫೈನಲ್​ ಪ್ರವೇಶಿಸುವ ಅವಕಾಶವನ್ನು ಕಳೆದುಕೊಂಡಿದೆ. ಟೀಂ ಇಂಡಿಯಾ WTC ಫೈನಲ್​ ಪ್ರವೇಶದ ಹಣೆ ಬರಹ ನಿರ್ಧಾರ, ಶ್ರೀಲಂಕಾ ತಂಡದ ಸೋಲು - ಗೆಲುವಿನ ಮೇಲೆ ಅವಲಂಬಿತವಾಗಿದೆ.

ಇದನ್ನೂ ಓದಿ:ಬುಮ್ರಾ, ಸಿರಾಜ್​ ಮಾಡಿದ ಆ ಒಂದು ತಪ್ಪಿನಿಂದ ಸಂಕಷ್ಟಕ್ಕೆ ಸಿಲುಕಿದ ಟೀಂ ಇಂಡಿಯಾ!

Last Updated : Dec 30, 2024, 1:15 PM IST

ABOUT THE AUTHOR

...view details