ಹೈದರಾಬಾದ್:ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ತಿಳಿಸಿದೆ ಎಂದು ವರದಿಯಾಗಿದೆ.
ಪಾಕಿಸ್ತಾನಕ್ಕೆ ಕ್ರಿಕೆಟ್ ತಂಡವನ್ನು ಕಳುಹಿಸದಂತೆ ಭಾರತ ಸರ್ಕಾರ ಸಲಹೆ ನೀಡಿದೆ. ಹೀಗಾಗಿ ಭಾರತ ಆ ದೇಶಕ್ಕೆ ಪ್ರಯಾಣ ಮಾಡುವುದಿಲ್ಲ ಎಂದು ಬಿಸಿಸಿಐ ಐಸಿಸಿಗೆ ಸ್ಪಷ್ಟವಾಗಿ ತಿಳಿಸಿದೆ ಎಂದು ತಿಳಿದುಬಂದಿದೆ.
ಭದ್ರತೆ, ರಾಜಕೀಯ ಬಿಕ್ಕಟ್ಟಿನಿಂದ ಭಾರತ ಹಿಂದೇಟು: ಪಂದ್ಯಾವಳಿಯು ಫೆಬ್ರವರಿ 19 ಮತ್ತು ಮಾರ್ಚ್ 9 ರ ನಡುವೆ ಪಾಕಿಸ್ತಾನದಲ್ಲಿ ನಡೆಯಲಿ. ಭಾರತ ಸೇರಿದಂತೆ ವಿಶ್ವದ ಎಂಟು ದೇಶಗಳ ತಂಡಗಳು ಪ್ರವಾಸ ಕೈಗೊಳ್ಳಬೇಕಿದೆ. ಆದರೆ, ಭದ್ರತಾ ಸಮಸ್ಯೆ, ರಾಜಕೀಯ ಬಿಕ್ಕಟ್ಟಿನ ಕಾರಣ ಭಾರತ ತಂಡವು ಅಲ್ಲಿಗೆ ತೆರಳಲು ನಿರಾಕರಿಸಿದೆ. ಹೀಗಾಗಿ ಪಾಕ್ಗೆ ಮತ್ತೊಂದು ಪ್ರತಿಷ್ಠಿತ ಟೂರ್ನಿ ಆತಿಥ್ಯ ಕೈತಪ್ಪುವ ಅಥವಾ ಹೈಬ್ರಿಡ್ ಪಂದ್ಯ ಆಡಿಸುವುದೊಂದೇ ದಾರಿಯಾಗಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಡಿಸಲು ನಿರಾಕರಿಸಿದ್ದಾರೆ. ಆದರೆ, ಭಾರತ ತಂಡ ಪ್ರವಾಸ ಕೈಗೊಳ್ಳಲು ಸುತಾರಾಂ ಒಪ್ಪದೇ ಹೋದಲ್ಲಿ ಇದಕ್ಕೆ ಒಪ್ಪದೆ ಬೇರೆ ಗತಿಯಿಲ್ಲ ಎಂದು ವರದಿಯಾಗಿದೆ.