ಬೆಂಗಳೂರು:ಐಪಿಎಲ್‌ನ ಆಟಗಾರರ ಹರಾಜಿನಲ್ಲಿ ಆರ್ಸಿಬಿ ತಂಡ ನನ್ನನ್ನು ಖರೀದಿಸುವ ಮುನ್ನ ನಾನು ನಿವೃತ್ತಿ ಹೊಂದುವುದರ ಕುರಿತು ಯೋಚಿಸುತ್ತಿದ್ದೆ ಎಂದು ಸ್ವಪ್ನಿಲ್ ಸಿಂಗ್ ತಿಳಿಸಿದ್ದಾರೆ. ಆರ್ಸಿಬಿ ಫ್ರಾಂಚೈಸಿ ಆಯ್ಕೆ ಮಾಡಿಕೊಂಡಿದ್ದು, ನನಗೆ ಮತ್ತು ನನ್ನ ಕುಟುಂಬಕ್ಕೆ ಭಾವನಾತ್ಮಕ ಕ್ಷಣವಾಗಿತ್ತು ಎಂದು ಈ ಬಾರಿಯ ಐಪಿಎಲ್‌ನಲ್ಲಿ ಆರ್ಸಿಬಿ ತಂಡದ ಇಂಪ್ಯಾಕ್ಟ್ ಆಟಗಾರನಾಗಿ ಮಿಂಚುತ್ತಿರುವ ಸ್ಪಿನ್ ಆಲ್ರೌಂಡರ್ ಸ್ವಪ್ನಿಲ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.
2006ರಲ್ಲೇ ದೇಶಿ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿ, ವಿರಾಟ್ ಕೊಹ್ಲಿಯೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದರೂ ನಂತರ ತಾನು ಸವೆಸಿದ ಹಾದಿ ಕುರಿತು ಆರ್ಸಿಬಿ ಫ್ರಾಂಚೈಸಿಯ ಬೋಲ್ಡ್ ಡೈರೀಸ್ ಸರಣಿಯಲ್ಲಿ ಅವರು ಮನಬಿಚ್ಚಿ ಮಾತನಾಡಿದ್ದಾರೆ.
ಹರಾಜು ಪ್ರಕ್ರಿಯೆ: ಆರ್ಸಿಬಿ ತಂಡ ಪ್ಲೇ ಆಫ್ ಹಂತಕ್ಕೇರಿದ ಬಳಿಕ ಬೋಲ್ಡ್ ಡೈರೀಸ್ ಸರಣಿಯಲ್ಲಿ ಮಾತನಾಡಿದ ಸ್ವಪ್ನಿಲ್ ಸಿಂಗ್, ಐಪಿಎಲ್ ಆಟಗಾರರ ಹರಾಜಿನ ದಿನ ನಾನು ಧರ್ಮಶಾಲಾಗೆ ಪ್ರಯಾಣಿಸುತ್ತಿದ್ದೆನು. ಸಂಜೆ 7-8 ಗಂಟೆಗೆ ಧರ್ಮಶಾಲಾ ತಲುಪುತ್ತಿದ್ದೆ. ಅಲ್ಲಿಯವರೆಗೂ ನಡೆದ ಹರಾಜು ಪ್ರಕ್ರಿಯೆಯಲ್ಲಿ ಯಾವುದೇ ಫ್ರಾಂಚೈಸಿ ನನ್ನತ್ತ ಒಲವು ತೋರಿರಲಿಲ್ಲ, ಕೊನೆಯ ಸುತ್ತಿನ ಹರಾಜು ನಡೆಯುತ್ತಿತ್ತು. ನಿರಾಶೆಯಲ್ಲಿದ್ದ ನಾನು ಅಷ್ಟೇ ಇಲ್ಲಿಗೆ ಮುಗಿಯಿತು, ಈಗ ನಡೆಯುತ್ತಿರುವ ದೇಶಿಯ ಕ್ರಿಕೆಟ್ ಆಡುವುದು ನಂತರ ತಂಡ ಬಯಸಿದರೆ ಇನ್ನೊಂದು ವರ್ಷ ಆಡುವುದು. ಬಳಿಕ ನಿವೃತ್ತಿ ಪಡೆಯೋಣ ಎಂದುಕೊಂಡಿದ್ದೆ. ಅಂತಿಮ ಕ್ಷಣದಲ್ಲಿ ಆರ್ಸಿಬಿ ತಂಡ ಖರೀದಿಸಿದೆ ಎಂದು ನನಗೆ ನನ್ನ ಕುಟುಂಬದವರಿಂದ ಕರೆ ಬಂತು ಎಂಬುದನ್ನ ಹೇಳುವಾಗ ಸ್ವಪ್ನಿಲ್ ಭಾವುಕರಾದರು.
ಆರ್ಸಿಬಿಯೊಳಗೆ ಸ್ಥಾನ ಪಡೆಯಲು ಆ್ಯಂಡಿ ಫ್ಲವರ್ ಕಾರಣ:ಆರ್ಸಿಬಿ ತಂಡದಲ್ಲಿ ತಾನು ಸ್ಥಾನ ಪಡೆಯಲು ತಂಡದ ಹೆಡ್ ಕೋಚ್ ಆ್ಯಂಡಿ ಫ್ಲವರ್ ಕಾರಣ ಎಂದು ಇದೇ ಸಂದರ್ಭದಲ್ಲಿ ಸ್ವಪ್ನಿಲ್ ತಿಳಿಸಿದ್ದಾರೆ. ಆ್ಯಂಡಿ ಫ್ಲವರ್ ಲಕ್ನೋ ತಂಡದ ಕೋಚ್ ಆಗಿದ್ದ ಅವಧಿಯಲ್ಲಿ ನೆಟ್ ಬೌಲರ್ ಆಗಿದ್ದ ತನಗೆ ಅವರು ಆರ್ಸಿಬಿ ಕೋಚ್ ಆದ ಬಳಿಕ ತರಬೇತಿ ಶಿಬಿರಗಳಲ್ಲಿ ಭಾಗಿಯಾಗಲು ತಿಳಿಸಿದ್ದರು. ಆಟಗಾರರ ಟ್ರಯಲ್ಸ್ ಕ್ಯಾಂಪ್ ನಡೆದಾಗ ನಾನು ನನ್ನ ದೇಶಿ ಕ್ರಿಕೆಟ್ ಋತು ಹೇಗೆ ಮುಗಿಯಿತು ಎಂದು ಆ್ಯಂಡಿ ಫ್ಲವರ್ ಅವರಿಗೆ ತಿಳಿಸಿದ್ದೆನು. 'ನನಗೆ ಒಂದು ಅವಕಾಶ ನೀಡಿ, ಅದೇ ನನ್ನ ಕೊನೆಯ ಅವಕಾಶವೂ ಆಗಬಹುದು ನನ್ನ ಮೇಲೆ ನಂಬಿಕೆಯಿಡಿ' ಎಂದಿದ್ದೆ. ಆಗ ಅವರು 'ನಿನ್ನ ಮೇಲೆ ನಂಬಿಕೆಯಿದೆ' ಎಂದಿದ್ದರು'' ಎಂದು ಸ್ವಪ್ನಿಲ್ ಹೇಳಿದರು.