ಅಹಮದಾಬಾದ್:ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂದಿನ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು ಗುಜರಾತ್ ಟೈಟನ್ಸ್ 200 ರನ್ ಕಲೆ ಹಾಕಿದೆ. ಶುಭ್ಮನ್ ಗಿಲ್ ಅವರ ಜವಾಬ್ದಾರಿಯುತ ಆಟದ ಫಲವಾಗಿ ಜಿಟಿ ಹೆಚ್ಚು ರನ್ ಗಳಿಸಲು ಸಾಧ್ಯವಾಯಿತು. ಪಂಜಾಬ್ ತಂಡದಿಂದ ಉತ್ತಮ ಬೌಲಿಂಗ್ ಪ್ರದರ್ಶನ ಕಂಡುಬರಲಿಲ್ಲ.
ಟಾಸ್ ಗೆದ್ದ ಪಂಜಾಬ್ ನಾಯಕ ಶಿಖರ್ ಧವನ್ ಗುಜರಾತ್ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ಶುಭ್ಮನ್ ಗಿಲ್ ಮತ್ತು ಅನುಭವಿ ಆಟಗಾರ ವೃದ್ದಿಮಾನ್ ಸಹಾ ಇನಿಂಗ್ಸ್ ಆರಂಭಿಸಿದರು. ಆದರೆ ಈ ಜೋಡಿಯಿಂದ ಹೇಳಿಕೊಳ್ಳುವಂತಹ ಆಟ ಮೂಡಿಬರಲಿಲ್ಲ.
11 ರನ್ ಗಳಿಸಿ ವೃದ್ದಿಮಾನ್ ಸಹಾ ವಿಕೆಟ್ ಕಳೆದುಕೊಂಡರು. ಬಳಿಕ ಜಿಟಿ ಪರ ಈ ಋತುವಿನಲ್ಲಿ ಮೊದಲ ಪಂದ್ಯವಾಡಿದ ಕ್ಲಾಸಿಕ್ ಬ್ಯಾಟರ್ ಕೇನ್ ವಿಲಿಯಮ್ಸನ್ ಆಕರ್ಷಕ ನಾಲ್ಕು ಬೌಂಡರಿ ಸಿಡಿಸಿ ಔಟಾದರು. ಮೊದಲೆರಡು ವಿಕೆಟ್ ಕಳೆದುಕೊಂಡ ಜಿಟಿಗೆ ಗಿಲ್ ಹಾಗು ಭರವಸೆಯ ಆಟಗಾರ ಸಾಯಿ ಸುದರ್ಶನ್ ಆಸರೆಯಾದರು. ಪಂಜಾಬ್ ಬೌಲರ್ಗಳನ್ನು ಬೆಂಡೆತ್ತಿದ ಈ ಜೋಡಿ ತಂಡದ ಮೊತ್ತ ನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.
ಈ ಹಂತದಲ್ಲಿ ಜಿಟಿ ರನ್ ವೇಗಕ್ಕೆ ಬ್ರೇಕ್ ಹಾಕಲು ಬಂದ ಹರ್ಷಲ್ ಪಟೇಲ್, ಸಾಯಿ ಸುದರ್ಶನ್ ವಿಕೆಟ್ ಪಡೆದರು. ಹೀಗಾಗಿ 19 ಎಸೆತಗಳಲ್ಲಿ 6 ಬೌಂಡರಿಗಳೊಂದಿಗೆ 33 ರನ್ಗಳಿಗೆ ಆಟ ನಿಲ್ಲಿಸಬೇಕಾಯಿತು. ನಂತರ ಬಂದ ಮಾಧ್ಯಮ ಕ್ರಮಾಂಕದ ಬ್ಯಾಟರ್ ವಿಜಯ್ ಶಂಕರ್ ಸಿಕ್ಕ ಅವಕಾಶವನ್ನು ಕೈ ಚೆಲ್ಲಿ 8 ರನ್ಗಳಿಗೆ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು.