ಕರ್ನಾಟಕ

karnataka

Watch: ಮೊನಫಿಲ್ಸ್‌ ವಿರುದ್ಧ ಸೋಲಿನ ಹತಾಶೆಯಲ್ಲಿ ರಾಕೆಟ್ ಮುರಿದುಹಾಕಿದ ಕಾರ್ಲೋಸ್ ಅಲ್ಕರಾಜ್ - Carlos Alcaraz Smashes Racket

By ETV Bharat Karnataka Team

Published : Aug 17, 2024, 10:29 AM IST

Updated : Aug 17, 2024, 3:35 PM IST

ಸಿನ್ಸಿನಾಟಿ ಓಪನ್‌ ಟೆನ್ನಿಸ್​ ಟೂರ್ನಿಯಲ್ಲಿ ಪರಾಭವಗೊಂಡ ನಂ.3 ಆಟಗಾರ ಸ್ಪೇನ್​ನ ಕಾರ್ಲೋಸ್ ಅಲ್ಕರಾಜ್, ಸೋಲಿನ ಹತಾಶೆಯಲ್ಲಿ ​ಕೋರ್ಟ್‌ನಲ್ಲೇ ರಾಕೆಟ್ ಮುರಿದು ತೀವ್ರ ಬೇಸರ ಹೊರಹಾಕಿದರು. ತಾನು ಆಡಿದ ಅತ್ಯಂತ ಕೆಟ್ಟ ಪಂದ್ಯವಿದು ಎಂದು ಅವರು ಪ್ರತಿಕ್ರಿಯಿಸಿದರು.

Carlos Alcaraz
ಕಾರ್ಲೋಸ್ ಅಲ್ಕರಾಜ್ (AFP)

ಸಿನ್ಸಿನಾಟಿ:ಸಿನ್ಸಿನಾಟಿ ಓಪನ್‌ನಲ್ಲಿ ಸೋಲಿನ ಹತಾಶೆಯಲ್ಲಿ ಸ್ಪೇನ್​ನ ಯುವತಾರೆ ಕಾರ್ಲೋಸ್ ಅಲ್ಕರಾಜ್ ​ಕೋರ್ಟ್‌ನಲ್ಲಿಯೇ ತಮ್ಮ ರಾಕೆಟ್ ಮುರಿದು ಹಾಕಿ ಆಕ್ರೋಶ ಹೊರಹಾಕಿದರು. ನಾಲ್ಕು ಬಾರಿಯ ಗ್ರ್ಯಾಂಡ್‌ಸ್ಲಾಮ್ ವಿಜೇತ ಕಾರ್ಲೋಸ್, ಸಿನ್ಸಿನಾಟಿ ಓಪನ್‌ ಟೆನ್ನಿಸ್​ ಟೂರ್ನಿಯಲ್ಲಿ ಗೇಲ್ ಮೊನಫಿಲ್ಸ್‌ ವಿರುದ್ಧ 4-6, 7-6 (7-5), 6-4 ಸೆಟ್‌ಗಳಿಂದ ಸೋತರು.

ಗುರುವಾರ ರಾತ್ರಿ ಮಳೆಯಿಂದಾಗಿ ಎರಡನೇ ಸೆಟ್ ಟೈಬ್ರೇಕರ್‌ನಲ್ಲಿ ಸ್ಥಗಿತಗೊಂಡಿದ್ದ ಪಂದ್ಯವು ಮರು ಆರಂಭವಾದ ಬಳಿಕ 37 ವರ್ಷದ ಮೊನಫಿಲ್ಸ್ ಅದ್ಭುತ ಆಟ ತೋರಿದರು. ಕೊನೆಯ ಎರಡು ಸೆಟ್‌ಗಳಲ್ಲಿಯೂ ಅಲ್ಕರಾಜ್‌ ವಿರುದ್ಧ ಮೇಲುಗೈ ಸಾಧಿಸಿದರು.

ಪಂದ್ಯದ ಬಳಿಕ ಪ್ರತಿಕ್ರಿಯಿಸಿದ ಕಾರ್ಲೋಸ್ ಅಲ್ಕರಾಜ್, ''ನನ್ನ ವೃತ್ತಿಜೀವನದಲ್ಲಿ ನಾನು ಆಡಿದ ಅತ್ಯಂತ ಕೆಟ್ಟ ಪಂದ್ಯ ಎಂದು ನಾನು ಭಾವಿಸುತ್ತೇನೆ. ಚೆನ್ನಾಗಿ ಅಭ್ಯಾಸ ಮಾಡಿದ್ದೆ. ಆದರೆ ಅದಕ್ಕೆ ತಕ್ಕಂತೆ ನನಗೆ ಆಡಲು ಸಾಧ್ಯವಾಗಲಿಲ್ಲ. ಈ ಸೋಲನ್ನು ಮರೆತು ನ್ಯೂಯಾರ್ಕ್‌ಗೆ ತೆರಲು ಪ್ರಯತ್ನಿಸುತ್ತೇನೆ'' ಎಂದರು. ಯುಎಸ್​​ ಓಪನ್ ಟೆನ್ನಿಸ್​ ಟೂರ್ನಿಯು ಆಗಸ್ಟ್ 26ರಂದು ಪ್ರಾರಂಭವಾಗಲಿದೆ.

ಪಂದ್ಯ ಸ್ಥಗಿತಗೊಂಡಾಗ ಟೈಬ್ರೇಕರ್‌ನಲ್ಲಿ 3-1 ಹಿನ್ನಡೆಯಲ್ಲಿದ್ದ ಅಲ್ಕರಾಜ್ ಶುಕ್ರವಾರ ಆಟ ಪುನರಾರಂಭಗೊಂಡಾಗ ಮರುಹೋರಾಟದ ನಿರೀಕ್ಷೆಯಲ್ಲಿದ್ದರು. ಆದರೆ, ನಂ. 3 ಎಟಿಪಿ ಶ್ರೇಯಾಂಕದ ಕಾರ್ಲೋಸ್​ಗೆ ಅದು ಸಾಧ್ಯವಾಗಲಿಲ್ಲ.

ಕಳೆದ ವರ್ಷ ಸಿನ್ಸಿನಾಟಿ ಫೈನಲ್‌ನಲ್ಲಿ ಅಲ್ಕರಾಜ್ ನೊವಾಕ್ ಜೊಕೊವಿಕ್‌ ವಿರುದ್ಧ ಸೋತಿದ್ದರು. ಇತ್ತೀಚೆಗೆ, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿಯೂ ಕೂಡ ಜೊಕೊವಿಕ್‌ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರು.

ಇನ್ನೊಂದೆಡೆ, ಅಲ್ಕರಾಜ್ ಸೋಲಿಸಿದ ಮೊನ್‌ಫಿಲ್ಸ್‌ ಕೂಡ ಮುಂದಿನ ಸುತ್ತಿನಲ್ಲಿ 15ನೇ ಶ್ರೇಯಾಂಕದ ಹೋಲ್ಗರ್ ರೂನ್ ವಿರುದ್ಧ 3-6, 6-3, 6-4ರಲ್ಲಿ ಸೋತರು.

23ನೇ ಹುಟ್ಟುಹಬ್ಬದಂದು ಜೋರ್ಡಾನ್ ಥಾಂಪ್ಸನ್ ವಿರುದ್ಧ ವಾಕ್ ಓವರ್ ಪಡೆದ ನಂ. 1 ಜಾನಿಕ್ ಸಿನ್ನರ್, ನಂ. 3 ಅಲೆಕ್ಸ್ ಜ್ವೆರೆವ್, ನಂ. 5 ಹಬರ್ಟ್ ಹರ್ಕಾಕ್ಜ್, ನಂ. 6 ಆಂಡ್ರೆ ರುಬ್ಲೆವ್ ಮತ್ತು 12ನೇ ಶ್ರೇಯಾಂಕದ ಅಮೆರಿಕನ್ ಬೆನ್ ಶೆಲ್ಟನ್ ಸೇರಿದಂತೆ ಅಗ್ರಗಣ್ಯರು ಮುಂದಿನ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಇಗಾ ಸ್ವಿಟೆಕ್ ಅವರು ಮಾರ್ಟಾ ಕೊಸ್ಟ್ಯುಕ್ ವಿರುದ್ಧ 6-2, 6-2 ಅಂತರದಲ್ಲಿ ಭರ್ಜರಿ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಬುಧವಾರದಂದು ಎರಡನೇ ಸೆಟ್‌ನ ಟೈಬ್ರೇಕ್‌ನಲ್ಲಿ ಫ್ರಾನ್ಸ್‌ನ ವರ್ವಾರಾ ಗ್ರಾಚೆವಾ ಅವರನ್ನು ಸೋಲಿಸಿದ್ದ ಸ್ವಿಯಾಟೆಕ್, ಉತ್ತಮ ಪ್ರದರ್ಶನ ಮುಂದುವರೆಸಿದರು.

3ನೇ ಶ್ರೇಯಾಂಕಿತೆ ಅರೀನಾ ಸಬಲೆಂಕಾ ಕೂಡ ಎಲಿನಾ ಸ್ವಿಟೋಲಿನಾ ವಿರುದ್ಧ 7-5, 6-2 ಅಂತರದಲ್ಲಿ ಜಯ ಸಾಧಿಸಿದರು. ಆದರೆ ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್‌ನಲ್ಲಿ ರನ್ನರ್ ಅಪ್ ಆಗಿದ್ದ 5ನೇ ಶ್ರೇಯಾಂಕದ ಜಾಸ್ಮಿನ್ ಪಾವೊಲಿನಿ, ಮಿರ್ರಾ ಆಂಡ್ರೀವಾ ವಿರುದ್ಧ 3-6, 6-3 ಸೆಟ್‌ಗಳಿಂದ ಪರಾಭವಗೊಂಡರು.

ಅನಸ್ತಾಸಿಯಾ ಪಾವ್ಲ್ಯುಚೆಂಕೋವಾ 7-ನೇ ಶ್ರೇಯಾಂಕ ಮತ್ತು ಒಲಿಂಪಿಕ್ ಚಿನ್ನದ ಪದಕ ವಿಜೇತ ಝೆಂಗ್ ಕಿನ್ವೆನ್ ಅವರನ್ನು 7-5, 6-1 ರಿಂದ ಸೋಲಿಸಿದರು. ಗುರುವಾರ ನಡೆದ ಪಂದ್ಯದಲ್ಲಿ ಕೊಕೊ ಗೌಫ್ ಅವರನ್ನು 6-4, 6-4 ಸೆಟ್‌ಗಳಿಂದ ಮಣಿಸಿದ್ದ ಯೂಲಿಯಾ ಪುತಿಂಟ್ಸೆವಾ ಅವರನ್ನು ಸ್ಪೇನ್ ಆಟಗಾರ್ತಿ ಪೌಲಾ ಬಡೋಸಾ ಮಣಿಸಿದರು.

ಇದನ್ನೂ ಓದಿ:ಪ್ಯಾರಿಸ್​ ಒಲಿಂಪಿಕ್ಸ್​ ಬಳಿಕ ನೀರಜ್​ ಚೋಪ್ರಾ ಬ್ರ್ಯಾಂಡ್​ ಮೌಲ್ಯ ಮತ್ತೆ ಹೆಚ್ಚಳ - Neeraj Chopra Brand Value

Last Updated : Aug 17, 2024, 3:35 PM IST

ABOUT THE AUTHOR

...view details