ಕರ್ನಾಟಕ

karnataka

By ETV Bharat Karnataka Team

Published : Jun 20, 2024, 2:51 PM IST

Updated : Jun 20, 2024, 3:34 PM IST

ETV Bharat / sports

ಬೆಂಗಳೂರು: ಭಾರತದ ಮಾಜಿ ಕ್ರಿಕೆಟಿಗ ಡೇವಿಡ್ ಜಾನ್ಸನ್ 4ನೇ ಮಹಡಿಯಿಂದ ಬಿದ್ದು ಸಾವು - David Johnson

ಅಪಾರ್ಟ್​ಮೆಂಟ್​ನ ನಾಲ್ಕನೇ ಮಹಡಿಯಿಂದ ಬಿದ್ದು ಭಾರತದ ಮಾಜಿ ಕ್ರಿಕೆಟಿಗ ಡೇವಿಡ್ ಜಾನ್ಸನ್ ಮೃತಪಟ್ಟಿದ್ದಾರೆ.

david-johnson
ಡೇವಿಡ್ ಜಾನ್ಸನ್ (ಫೋಟೋ- KSCA)

ಬೆಂಗಳೂರು: ಭಾರತದ ಮಾಜಿ ಕ್ರಿಕೆಟಿಗ ಡೇವಿಡ್ ಜಾನ್ಸನ್ (52) ಅವರು ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ. ಕೊತ್ತನೂರು ಠಾಣಾ ವ್ಯಾಪ್ತಿಯ ಎಸ್.ಎಲ್.ವಿ ಪ್ಯಾರಡೈಸ್ ಅಪಾರ್ಟ್​ಮೆಂಟ್‌ನಲ್ಲಿ ಇಂದು ಘಟನೆ ನಡೆದಿದೆ.

ತಾವು ವಾಸವಿದ್ದ ಕಟ್ಟಡದ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಅವರು ಬಿದ್ದಿದ್ದರು. ತಕ್ಷಣವೇ ಜಾನ್ಸನ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. ಸ್ಥಳಕ್ಕೆ ಕೊತ್ತನೂರು ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಘಟನೆ ಆಕಸ್ಮಿಕವೋ ಅಥವಾ ಆತ್ಮಹತ್ಯೆಯೋ ಎಂಬುದರ ಕುರಿತು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಹಾಸನ ಜಿಲ್ಲೆಯ ಅರಸಿಕೆರೆ ಮೂಲದವರಾದ ಡೇವಿಡ್ ಜಾನ್ಸನ್ ಬಲಗೈ ಮಧ್ಯಮ ವೇಗಿಯಾಗಿದ್ದರು. ಕರ್ನಾಟಕ ರಾಜ್ಯ ತಂಡದ ಪರ ದೇಶಿ ಕ್ರಿಕೆಟ್ ಆಡಿದ್ದ ಡೇವಿಡ್ 1996ರಲ್ಲಿ ಭಾರತದ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಆದರೆ ಕೇವಲ 2 ಟೆಸ್ಟ್ ಪಂದ್ಯಗಳಲ್ಲಷ್ಟೇ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಪಯಣ ಅಂತ್ಯವಾಗಿತ್ತು. ನಂತರ ರಾಜ್ಯ ತಂಡದ ಪರ ಕ್ರಿಕೆಟ್ ಜರ್ನಿ ಮುಂದುವರೆಸಿದ್ದರು. ಬಳಿಕ ಕರ್ನಾಟಕ ಪ್ರೀಮಿಯರ್‌ ಲೀಗ್‌‌ನಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡದ ಪರ ಕಣಕ್ಕಿಳಿದಿದ್ದರು.

ಕ್ರಿಕೆಟ್​ನಲ್ಲಿ ನನ್ನ ಸಹ ಆಟಗಾರರಾಗಿದ್ದ ಡೇವಿಡ್ ಜಾನ್ಸನ್ ಸಾವಿನ ಸುದ್ದಿ ಕೇಳಿ ದುಃಖವಾಯಿತು. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಕಂಬನಿ ಮಿಡಿದಿದ್ದಾರೆ.

ಡೇವಿಡ್ ಜಾನ್ಸನ್ ಅವರ ಅಕಾಲಿಕ ನಿಧನಕ್ಕೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹಾಗೂ ಹಾಲಿ ಕ್ರಿಕೆಟಿಗರು ಸಂತಾಪ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ:ಒಂದೇ ದಿನ ಇಬ್ಬರು ಮಾಜಿ ಕ್ರಿಕೆಟಿಗರ ಸಾವು; ಇಬ್ಬರಿಗೂ ಬ್ರೈನ್ ಟ್ಯೂಮರ್

Last Updated : Jun 20, 2024, 3:34 PM IST

ABOUT THE AUTHOR

...view details