ನವದೆಹಲಿ: ಪೋರ್ಚುಗೀಸ್ ಫುಟ್ಬಾಲ್ ದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ಹೆಸರಿನಲ್ಲಿ ಮೊತ್ತೊಂದು ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಒಟ್ಟು 100 ಕೋಟಿ ಪಾಲೋವರ್ಸ್ಗಳನ್ನು ಪಡೆಯುವ ಮೂಲಕ ಯಾವ ಆಟಗಾರರೂ ಮಾಡದ ಸಾಧನೆ ಮಾಡಿದ್ದಾರೆ.
ಈ ಬಗ್ಗೆ ರೊನಾಲ್ಡೊ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಅದರಲ್ಲಿ ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. "100 ಕೋಟಿ ಅನುಯಾಯಿಗಳನ್ನು ಪಡೆದ ನಾವು ಇಂದು ಹೊಸ ಇತಿಹಾಸ ನಿರ್ಮಿಸಿದ್ದೇವೆ. ಇದು ಕೇವಲ ಸಂಖ್ಯೆ ಅಷ್ಟೇ ಅಲ್ಲ, ಇದು ನಿಮ್ಮ ಪ್ರೀತಿಯ ಸಂಕೇತ. ಮಡೈರಾ ಬೀದಿಗಳಿಂದ ಹಿಡಿದು ವಿಶ್ವದ ದೊಡ್ಡ ಮೈದಾನಗಳ ವರೆಗೆ ನಿಮಗಾಗಿ ಆಡಿದ್ದೇನೆ. ಇದೀಗ ನೂರು ಕೋಟಿ ಜನರು ನನ್ನ ಪರವಾಗಿ ನಿಂತಿದ್ದಾರೆ. ನನ್ನ ಜೀವನದ ಭಾಗವಾಗಿದ್ದಕ್ಕಾಗಿ ನಾನು ನಿಮ್ಮೆಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ರೊನಾಲ್ಡೊ ತಮ್ಮ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ.
ನಿರೀಕ್ಷೆಗೆ ಮೀರಿದ ಪ್ರತಿಕ್ರಿಯೆ:ಇತ್ತೀಚೆಗೆ ತನ್ನ ಯೂಟ್ಯೂಬ್ ಚಾನೆಲ್ ಆರಂಭಿಸಿರುವ ರೊನಾಲ್ಡೊ ಚಾನೆಲ್ ಆರಂಭಗೊಂಡ ಆರು ದಿನಗಳಲ್ಲಿ 50 ಮಿಲಿಯನ್ ಚಂದಾದಾರರನ್ನು ಪಡೆದುಕೊಂಡಿತ್ತು. ಈ ಅನುಕ್ರಮದಲ್ಲಿ, ಕಡಿಮೆ ಸಮಯದಲ್ಲಿ 50 ಮಿಲಿಯನ್ ಚಂದಾದಾರರ ಮೈಲಿಗಲ್ಲನ್ನು ಪಡೆದ ಯೂಟ್ಯೂಬರ್ ಎಂಬ ದಾಖಲೆಯನ್ನು ರೊನಾಲ್ಡೊ ನಿರ್ಮಿಸಿದ್ದಾರೆ. ಆಗಸ್ಟ್ 21 ರಂದು ರೊನಾಲ್ಡೊ ಯುವರ್ ಕ್ರಿಸ್ಟಿಯಾನೋ ಎಂಬ ಹೆಸರಿನೊಂದಿಗೆ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದರು. ಅದಕ್ಕೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಸಿಕ್ಕಿದೆ.