ನವದೆಹಲಿ: ಭಾರತ ತಂಡದ ವೇಗದ ಬೌಲರ್ ಇಶಾಂತ್ ಶರ್ಮಾ ಇಂದು 36ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸದ್ಯ ಅಂತಾರಾಷ್ಟ್ರೀಯ ಪಂದ್ಯಗಳಿಂದ ದೂರ ಉಳಿದರುವ ಇಶಾಂತ್ ಶರ್ಮಾ ದೇಶಿ ಕ್ರಿಕೆಟನಲ್ಲಿ ಮಾತ್ರ ಆಡುತ್ತಿದ್ದಾರೆ. ಈ ಹಿಂದೆ 2021ರಲ್ಲಿ ಕೊನೆಯದಾಗಿ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು. ಹಲವು ಪ್ರಮುಖ ಸಂದರ್ಭಗಳಲ್ಲಿ ತಮ್ಮ ಮಾರಕ ಬೌಲಿಂಗ್ ಮೂಲಕ ತಂಡವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಚೊಚ್ಚಲ ಪಂದ್ಯದಲ್ಲೇ ತಮ್ಮ ಬೌಲಿಂಗ್‌ನಿಂದ ಮಿಂಚಿದ್ದ ಈಶಾಂತ್ ರಿಕಿ ಪಾಂಟಿಂಗ್‌ನಂತಹ ದಿಗ್ಗಜ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ್ದರು. ಇವೆಲ್ಲ ಒಂದೆಡೆಯಾದರೇ ಕೂದಲು ಮೇಲಿನ ಪ್ರೀತಿಯಿಂದಾಗಿ ದಂಡಕ್ಕೂ ಒಳಗಾಗಿದ್ದಾರೆ.
ಹೌದು, ಇಶಾಂತ್ ಶಾಲಾ ದಿನಗಳಿಂದಲೂ ಉದ್ದನೆಯ ಕೂದಲನ್ನು ಇಷ್ಟಪಡುತ್ತಾರೆ, ಇದಕ್ಕಾಗಿ ಅವರು ದಂಡಕ್ಕೂ ಗುರಿಯಾಗಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಸ್ವತಃ ಇಶಾಂತ್ ತಿಳಿಸಿದ್ದಾರೆ. "ನಾನು ಶಾಲೆಯಲ್ಲಿದ್ದಾಗ, ಅಂಡರ್-19 ಕ್ರಿಕೆಟ್ ಆಡುವ ಹೊತ್ತಿಗೆ, ನನ್ನ ಉಪ ಪ್ರಾಂಶುಪಾಲರು ಉದ್ದ ಕೂದಲು ಹೊಂದಿದ್ದಕ್ಕಾಗಿ ಶಿಕ್ಷಿಸಿದ್ದರು. ಅಂದು ನನ್ನ ಕೂದಲನ್ನು ಹಿಡಿದು ಮೈದಾನಕ್ಕೆ ಎಳೆದೊಯ್ದಿದ್ದರು. ಇಷ್ಟಾದರು ನಾನು ಕೂದಲನ್ನು ಕತ್ತರಿಸಿರಲಿಲ್ಲ ಎಂದ ಅವರು ಭಾರತದ ಅಂಡರ್-19 ಸರಣಿಯ ವೇಳೆ ನಡೆದ ಮತ್ತೊಂದು ಘಟನೆಯ ಬಗ್ಗೆ ತಿಳಿಸಿದರು.
ಅಂದು ಲಾಲು (ಲಾಲಚಂದ್ ರಜಪೂತ್) ಸರ್ ನಮ್ಮ ಕೋಚ್ ಆಗಿದ್ದರು. ನ್ಯೂಜಿಲೆಂಡ್ ಪ್ರವಾಸದ ವೇಳೆ ನನಗೆ 'ಇಶಾಂತ್, ನೀವು ಸಾಕಷ್ಟು ಕೂದಲು ಬಿಟ್ಟು ಫ್ಯಾಷನ್ ಮಾಡ್ತಿದ್ದೀಯಾ. ನೀನಿಲ್ಲಿ ಮಾಡೆಲ್ ಕಾಂಪಿಟೇಶನ್ಗಾಗಿ ಬಂದಿಲ್ಲ, ಹಾಗಾಗಿ ಈ ಉದ್ದನೆಯ ಕೂದಲನ್ನು ಕತ್ತರಿಸಬೇಕು. ಇಲ್ಲದಿದ್ದರೆ ನೀನು $100 ದಂಡವಾಗಿ ಪಾವತಿಸಬೇಕಾಗುತ್ತದೆ ಎಂದಿದ್ದರು.