ಹೈದರಾಬಾದ್:ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ನಡೆಯುತ್ತಿದೆ. ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಟೀಂ ಇಂಡಿಯಾ ಎರಡನೇ ಟೆಸ್ಟ್‌ನಲ್ಲಿ ಹೀನಾಯವಾಗಿ ಸೋಲನುಭವಿಸಿತು. ಇದರ ಬೆನ್ನಲ್ಲೇ ಅಭಿಮಾನಿಗಳು ಸ್ಟಾರ್ ಕ್ರಿಕೆಟರ್ಗಳ ವಿರುದ್ಧ ಆಕ್ರೋಶ ಹೊರಹಾಕಿ 'ಟೆಸ್ಟ್ಗೆ ನಿವೃತ್ತಿ ಘೋಷಿಸಿ' ಎಂದು ಆಗ್ರಹಿಸಿದ್ದಾರೆ.
ಅಡಿಲೇಡ್ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಕಾಂಗರೂ ಪಡೆ ಪಾರಮ್ಯ ಸಾಧಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ 180 ರನ್ಗಳಿಗೆ ಸರ್ವಪತನ ಕಂಡಿದ್ದ ಭಾರತ 157 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿತು. ಇದರಲ್ಲೂ ಭಾರತೀಯ ಬ್ಯಾಟರ್ಗಳು ರನ್ ಗಳಿಸುವಲ್ಲಿ ವಿಫಲರಾದರು. ಇದರಿಂದಾಗಿ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 175ರನ್ ಗಳಿಸಲಷ್ಟೇ ಶಕ್ತವಾಯಿತು. ಆಸ್ಟ್ರೇಲಿಯಾಗೆ 19ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಆತಿಥೇಯ ತಂಡ ಸುಲಭವಾಗಿ ಸಾಧಿಸಿ 10 ವಿಕೆಟ್‌ಗಳಿಂದ ಗೆಲುವು ಸಾಧಿಸಿತು. ಇದರೊಂದಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 1-1 ಅಂತರದಿಂದ ಕಾಂಗರೂ ಪಡೆ ಸಮಬಲ ಸಾಧಿಸಿತು.
ಈ ಪಂದ್ಯದಲ್ಲಿ ಹಿರಿಯ ಆಟಗಾರರಾದ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಮೇಲೆ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಈ ಎಲ್ಲಾ ನಿರೀಕ್ಷೆಗಳು ಹುಸಿಯಾದವು. ಇದರ ಬೆನ್ನಲ್ಲೇ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.
ಟೆಸ್ಟ್‌ನಲ್ಲಿ ಕಳಪೆ ಫಾರ್ಮ್‌ನಲ್ಲಿರುವ ನಾಯಕ ರೋಹಿತ್ ಶರ್ಮಾ, ಅಂತಾರಾಷ್ಟ್ರೀಯ ಶತಕ ಬಾರಿಸಿ 10 ತಿಂಗಳು ಕಳೆದಿದೆ. ಕೊನೆಯ 12 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ರೋಹಿತ್ 11.83 ಸರಾಸರಿಯಲ್ಲಿ ಕೇವಲ 142 ರನ್ ಗಳಿಸಿದ್ದಾರೆ. ಎರಡನೇ ಟೆಸ್ಟ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದಿದ್ದ ರೋಹಿತ್ ಸಾಮಾನ್ಯ ಆಟಗಾರನಂತೆ ಕಾಣುತ್ತಿದ್ದರು. ಎರಡೂ ಇನ್ನಿಂಗ್ಸ್‌ಗಳಲ್ಲಿ ತಂಡ ಸಂಕಷ್ಟದಲ್ಲಿರುವಾಗ ರೋಹಿತ್ ಬ್ಯಾಟಿಂಗ್‌ಗೆ ಬಂದರು. ಆದರೆ, ಕ್ರೀಸ್ನಲ್ಲಿ ನಿಂತು ತಂಡಕ್ಕೆ ಆಸರೆಯಾಗುವ ಆಸೆ ಅವರಿಗಿರಲಿಲ್ಲ. ಅಲ್ಲದೇ ಅವರು ಆರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವುದು ತಪ್ಪು ನಿರ್ಧಾರ ಎಂದು ಮಾಜಿ ಆಟಗಾರರು ಹೇಳಿದ್ದಾರೆ.