ಹೈದರಾಬಾದ್/ಮುಂಬೈ:ಟಿ-20 ವಿಶ್ವಕಪ್ನಲ್ಲಿ ಅಚ್ಚರಿಯ ಫಲಿತಾಂಶವೆಂದರೆ ಅದು ಭಾನುವಾರ ಆಸ್ಟ್ರೇಲಿಯಾ ವಿರುದ್ಧ ಅಫ್ಘಾನಿಸ್ತಾನ ಗೆಲುವು ಸಾಧಿಸಿದ್ದು. ಸೂಪರ್-8 ನಂತಹ ಮಹತ್ವದ ಹಂತದಲ್ಲಿ ಅಫ್ಘನ್ ತಂಡ ತೋರಿದ ಪ್ರದರ್ಶನ ಕಾಂಗರೂಗಳಿಗೆ ನಿಜಕ್ಕೂ ಶಾಕ್ ನೀಡಿದೆ. ಮಾಜಿ ಚಾಂಪಿಯನ್ ತಂಡ ಸೆಮಿಫೈನಲ್ಗೆ ತಲುಪಲು ಬಾಕಿ ಉಳಿದ ಭಾರತ ವಿರುದ್ಧದ ಪಂದ್ಯದಲ್ಲಿ ದೊಡ್ಡ ಅಂತರದಲ್ಲಿ ಗೆಲ್ಲಲೇಬೇಕು. ಇಲ್ಲವಾದರಲ್ಲಿ ಮನೆಯ ಹಾದಿ ಹಿಡಿಯಲಿದೆ.
ಆಸೀಸ್ ವಿರುದ್ಧ ಅಫ್ಘನ್ ಗೆಲುವು ಕ್ರಿಕೆಟ್ ಲೋಕದಲ್ಲಿ ಭಾರೀ ಶ್ಲಾಘನೆಗೆ ಒಳಗಾಗಿದೆ. ನಾಯಕ ರಶೀದ್ ಖಾನ್ರ ಚಾಣಾಕ್ಷತನ, ಆಟಗಾರರ ಬೆಂಬಲ, ಅದೃಷ್ಟ ಎಲ್ಲವೂ ಸೇರಿ ಗೆಲುವಾಗಿ ಫಲಿತಾಂಶ ಬಂದಿದೆ. ಇನ್ನೊಂದು ಹೆಜ್ಜೆಯಲ್ಲಿ ರಶೀದ್ ಬಳಗ ಯಶಸ್ಸು ಕಂಡಲ್ಲಿ ಚರಿತ್ರೆ ಸೃಷ್ಟಿಯಾಗೋದು ಮಾತ್ರ ಪಕ್ಕಾ. ಅಂದರೆ, ಭಾರತ ವಿರುದ್ಧ ಆಸ್ಟ್ರೇಲಿಯಾ ಸೋತು, ಬಾಂಗ್ಲಾದೇಶ ವಿರುದ್ಧ ಅಫ್ಘನ್ ಗೆದ್ದರೆ ತಂಡ ನಾಲ್ಕರ ಘಟ್ಟಕ್ಕೆ ನೇರ ಎಂಟ್ರಿ ಪಡೆದು ಚೊಚ್ಚಲ ಬಾರಿಗೆ ಈ ಸಾಧನೆ ಮಾಡಲಿದೆ.
ಫಲಿತಾಂಶ ತಡವಾಗಿ ಬಂದಿದೆ:ಅನನುಭವಿಗಳ ಗುಂಪಾದ ಅಫ್ಘನ್ ತಂಡದ ಮಾಜಿ ಮುಖ್ಯ ತರಬೇತುದಾರರಾಗಿದ್ದ ಲಾಲ್ಚಂದ್ ರಜಪೂತ್ ಅವರು ಈ ಸಾಧನೆಯನ್ನು ಕೊಂಡಾಡಿದ್ದಾರೆ. ತಂಡದಲ್ಲಿ ಅದ್ಭುತ ಪ್ರತಿಭೆಗಳಿದ್ದು, ಅಸಾಧ್ಯ ಎಂಬುದನ್ನು ಸಾಧಿಸಿ ತೋರಿಸುವ ಚತುರರಿದ್ದಾರೆ ಎಂದು ಹೊಗಳಿದ್ದಾರೆ.
ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಅಫ್ಘಾನಿಸ್ತಾನದ ಗೆಲುವು ದೇಶದ ಇತರ ಆಟಗಾರರು ಕ್ರಿಕೆಟ್ನಲ್ಲಿ ತೊಡಗಿಸಿಕೊಳ್ಳಲು ಸ್ಫೂರ್ತಿ ನೀಡಲಿದೆ ಎಂದು ರಜಪೂತ್ ಅವರು ಅಭಿಪ್ರಾಯಪಟ್ಟಿದ್ದಾರೆ. ಭಾರತದ ಮಾಜಿ ಆಟಗಾರ ಮತ್ತು ಕ್ರಿಕೆಟ್ ಮ್ಯಾನೇಜರ್ ಆಗಿರುವ ಅವರು, ಆಸೀಸ್ ವಿರುದ್ಧ ಗೆಲುವು ಕಂಡಿದ್ದು ಅತ್ಯಾಶ್ಚರ್ಯವೇನು ತಂದಿಲ್ಲ. ಇದು ಕಳೆದ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲಿಯೇ ಬರಬೇಕಿತ್ತು. ಅಲ್ಲಿ ಸಾಧ್ಯವಾಗದೇ ಇಲ್ಲಿ ಫಲಿತಾಂಶ ಬಂದಿದೆ ಅಷ್ಟೇ ಎಂದು ಹೇಳಿದರು.