ಕೋಲ್ಕತ್ತಾ (ಪಶ್ಚಿಮ ಬಂಗಾಳ):ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಬದಲಾವಣೆಯೊಂದಿಗೆ ಸಹಾಯಕ ಸಿಬ್ಬಂದಿ ನೇಮಕದ ಕುರಿತಾಗಿಯೂ ಹಲವು ವಿಚಾರಗಳು ಮುನ್ನಲೆಗೆ ಬರುತ್ತಿವೆ. ಇತ್ತೀಚೆಗೆ ರಾಹುಲ್ ದ್ರಾವಿಡ್ ಬದಲಿಗೆ ಗೌತಮ್ ಗಂಭೀರ್ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೇಮಕ ಮಾಡಿದೆ. ಈಗ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಕೋಚ್ ಬಗ್ಗೆ ಸಾಕಷ್ಟು ಕುತೂಹಲ ಕೆರಳಿಸಿದೆ.
ಬ್ಯಾಟಿಂಗ್ ಕೋಚ್ ಅಲ್ಲ, ಇನ್ನು'ಸಹಾಯಕ ಕೋಚ್'?: ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರರಾದ ಗಂಭೀರ್ ಮುಖ್ಯ ಕೋಚ್ ಆಗಿ ತಂಡಕ್ಕೆ ಸೇರಿರುವುದು ಜೊತೆಗೆ ಸಹಾಯಕ ಸಿಬ್ಬಂದಿ ರಚನೆಯಲ್ಲಿ ಸೂಕ್ಷ್ಮ ಬದಲಾವಣೆಗಳಾಗಬಹುದು. ಕೋಚ್ ಗಂಭೀರ್ ಅವರ ಸಲಹೆ ಮೇರೆಗೆ ಬಿಸಿಸಿಐ ಬ್ಯಾಟಿಂಗ್ ಕೋಚ್ ಹುದ್ದೆಯನ್ನು ಕೈಬಿಡುವ ಸಾಧ್ಯತೆ ಇದೆ. ಈ ಸ್ಥಾನಕ್ಕೆ 'ಸಹಾಯಕ ಕೋಚ್' ಎಂದು ಹೆಸರಿಸುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತದೆ.
ಈ ಸ್ಥಾನಕ್ಕೆ ಮಾಜಿ ಆಲ್‌ರೌಂಡರ್ ಅಭಿಷೇಕ್ ನಾಯರ್ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ಹೀಗಾದಲ್ಲಿ ಗಂಭೀರ್ ಅವರೇ ತಂಡದ ಬ್ಯಾಟಿಂಗ್ ವಿಭಾಗವನ್ನೂ ನೋಡಿಕೊಳ್ಳಲಿದ್ದಾರೆ. ಜೊತೆಗೆ ಬೌಲಿಂಗ್ ಕೋಚ್ ಹುದ್ದೆಗೂ ಟೀಂ ಇಂಡಿಯಾದ ಮಾಜಿ ವೇಗಿಗಳಾದ ಲಕ್ಷ್ಮೀಪತಿ ಬಾಲಾಜಿ ಮತ್ತು ಆರ್.ವಿನಯ್ ಕುಮಾರ್ ಹೆಸರು ಕೇಳಿ ಬರುತ್ತಿದೆ. ಜಹೀರ್ ಖಾನ್ ಅವರ ಹೆಸರು ಕೂಡ ಮುನ್ನಲೆಗೆ ಬರುತ್ತಿದೆ.
ಇದರ ನಡುವೆ ಬೌಲಿಂಗ್ ಕೋಚ್ ಸ್ಥಾನಕ್ಕೆ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಮೊರ್ನೆ ಮೊರ್ಕೆಲ್ ಅವರನ್ನು ಗಂಭೀರ್ ಶಿಫಾರಸು ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ, ಬಿಸಿಸಿಐ ಈ ಶಿಫಾರಸಿಗೆ ಒಪ್ಪುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ''ಎಲ್ಲ ಸಹಾಯಕ ಸಿಬ್ಬಂದಿ ಹುದ್ದೆಗಳಿಗೆ ಹಲವು ಹೆಸರುಗಳು ಚಾಲ್ತಿಯಲ್ಲಿವೆ. ಆದರೆ, ಇದೀಗ ಬಿಸಿಸಿಐನ ಕಡೆಯಿಂದ ಏನನ್ನೂ ಅಂತಿಮಗೊಳಿಸಲಾಗಿಲ್ಲ. ಮುಂದಿನ ಕೆಲವು ದಿನಗಳಲ್ಲಿ ಏನಾಗಲಿದೆ ಎಂಬುದನ್ನು ನೋಡೋಣ. ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಬಹುದು'' ಎಂದು ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರು 'ಈಟಿವಿ ಭಾರತ್'ಗೆ ತಿಳಿಸಿದರು.
ಸಹಾಯಕ ಸಿಬ್ಬಂದಿ ನೇರವಾಗಿ ನೇಮಕ?:ಅಶೋಕ್ ಮಲ್ಹೋತ್ರಾ, ಜತಿನ್ ಪರಾಂಜ್ಪೆ ಮತ್ತು ಸುಲಕ್ಷಣಾ ನಾಯಕ್ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು (ಸಿಎಸಿ) ಮುಖ್ಯ ಕೋಚ್ ಹುದ್ದೆಗೆ ಗೌತಮ್ ಗಂಭೀರ್ ಮತ್ತು ಭಾರತದ ಮಾಜಿ ಆಲ್ ರೌಂಡರ್ ಡಬ್ಲ್ಯುವಿ ರಾಮನ್ ಅವರರನ್ನು ಎರಡು ಸುತ್ತಿನ ಸಂದರ್ಶನಗಳನ್ನು ನಡೆಸಿತ್ತು. ಇದರ ಬಳಿಕ ಗಂಭೀರ್ ಅವರಿಗೆ ಆದ್ಯತೆ ನೀಡಲಾಗಿದೆ. ಆದರೆ, ಸಹಾಯಕ ಸಿಬ್ಬಂದಿ ಹುದ್ದೆಗಳ ನೇಮಕ ಯಾವುದೇ ಸಂದರ್ಶನ ನಡೆದಿಲ್ಲ ಎಂದು ತಿಳಿದುಬಂದಿದೆ.
''ಸಹಾಯಕ ಸಿಬ್ಬಂದಿ ನೇಮಕಕ್ಕೆ ಯಾವುದೇ ಸಂದರ್ಶನಗಳು ನಡೆಯದಿರಬಹುದು. ಏಕೆಂದರೆ ಆ ಹುದ್ದೆಗಳನ್ನು ಬಿಸಿಸಿಐ ನೇರವಾಗಿ ಭರ್ತಿ ಮಾಡಬಹುದಾಗಿದೆ'' ಎಂದು ಬಿಸಿಸಿಐ ಅಧಿಕಾರಿ ಹೇಳಿದರು. 2021ರಲ್ಲಿ ಮುಖ್ಯ ಕೋಚ್ ಹುದ್ದೆಗೆ ರಾಹುಲ್ ದ್ರಾವಿಡ್ ಅವರನ್ನು ಆಗಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನೇರವಾಗಿ ಆಯ್ಕೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದನ್ನೂ ಓದಿ:ಟೀಂ ಇಂಡಿಯಾದ ನೂತನ ಬೌಲಿಂಗ್ ಕೋಚ್ ಯಾರು?: ಗಂಭೀರ್ ಒಲವು ಯಾರ ಪರ?