ಈ ವರೆಗೂ ಕ್ರಿಕೆಟ್‌ನಲ್ಲಿ ಅದೆಷ್ಟೋ ದಾಖಲೆಗಳು ನಿರ್ಮಾಣವಾಗಿವೆ ಮತ್ತು ಮುರಿಯಲ್ಪಟ್ಟಿವೆ. ಆದರೆ ಇಂಗ್ಲೆಂಡ್‌ನ ದಿಗ್ಗಜ ಕ್ರಿಕೆಟರ್ ನಿರ್ಮಿಸಿರುವ ದಾಖಲೆ ಈವರೆಗೂ ಯಾವೊಬ್ಬ ಕ್ರಿಕೆಟರ್ಗೆ ಮುರಿಯಲು ಸಾಧ್ಯವಾಗಿಲ್ಲ. ಅಲ್ಲದೇ ಅದನ್ನು ಮುರಿಯುವುದು ಕೂಡ ಅಸಾಧ್ಯ ಎಂದೇ ಹೇಳಬಹುದು. ಆದಾಗ್ಯೂ ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಿರ್ಮಾಣವಾದ ದಾಖಲೆಯಲ್ಲ ಬದಲಿಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಬರೆದ ದಾಖಲೆಯಾಗಿದೆ.
ಹೌದು, ವಿಲ್ಫ್ರೆಡ್ ರೋಡ್ಸ್ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಅತೀ ಹೆಚ್ಚು ಪ್ರಥಮ ದರ್ಜೆ ಕ್ರಿಕೆಟ್ಗಳನ್ನು ಆಡಿದ್ದಾರೆ. ಅಲ್ಲದೇ ಈ ಅವಧಿಯಲ್ಲಿ 4000ಕ್ಕೂ ಹೆಚ್ಚು ವಿಕೆಟ್ ಪಡೆದು ವಿಶ್ವದಾಖಲೆ ಬರೆದಿದ್ದಾರೆ. ಈ ಮಾಜಿ ಇಂಗ್ಲಿಷ್ ಆಲ್‌ರೌಂಡರ್ 1898 ಮತ್ತು 1930ರ ನಡುವೆ ಒಟ್ಟು 1110 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದರು.
ಅತಿ ಹೆಚ್ಚು ಪಂದ್ಯಗಳನ್ನು ಆಡಿದ ವಿಶ್ವ ದಾಖಲೆಯನ್ನು ಬರೆದಿದ್ದು, ಬೇರೆ ಯಾವ ಕ್ರಿಕೆಟಿಗರೂ ಸಹ 1000 ಪ್ರಥಮ ದರ್ಜೆ ಪಂದ್ಯಗಳನ್ನು ಆಡಲು ಈ ವರೆಗೂ ಸಾಧ್ಯವಾಗಿಲ್ಲ. ಸಚಿನ್ ತೆಂಡೂಲ್ಕರ್ (310 ಪ್ರಥಮ ದರ್ಜೆ ಪಂದ್ಯಗಳು) ಮತ್ತು ಡಾನ್ ಬ್ರಾಡ್ಮನ್ (234 ಪ್ರಥಮ ದರ್ಜೆ ಪಂದ್ಯಗಳು) ಅವರಂತಹ ಶ್ರೇಷ್ಠ ಕ್ರಿಕೆಟಿಗರು ಕೂಡ ಈ ವಿಶ್ವ ದಾಖಲೆಯ ಸಮೀಪಕ್ಕೆ ಹೋಗಲು ಸಾಧ್ಯವಾಗಿಲ್ಲ.
4204 ವಿಕೆಟ್ ಪಡೆದ ವಿಶ್ವದ ಏಕೈಕ ಆಟಗಾರ:ವಿಲ್ಫ್ರೆಡ್ ರೋಡ್ಸ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 16.72 ಸರಾಸರಿಯಲ್ಲಿ ಒಟ್ಟು 4,204 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಏಕೈಕ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇಂಗ್ಲೆಂಡ್‌ನ ಟಿಕ್ ಫ್ರೀಮನ್ 3,776 ವಿಕೆಟ್‌ಗಳೊಂದಿಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.