ಕಟಕ್(ಒಡಿಶಾ):ಇಲ್ಲಿನ ಬಾರಾಮತಿ ಕ್ರಿಕೆಟ್ ಮೈದಾನದಲ್ಲಿ ಭಾರತದ ನಡೆಯುತ್ತಿರುವ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.
ನಾಗ್ಪುರದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 4 ವಿಕೆಟ್ಗಳಿಂದ ಸೋತಿರುವ ಆಂಗ್ಲರಿಗೆ ಸರಣಿ ಜೀವಂತವಾಗಿರಿಸಲು ಇಂದು ಗೆಲುವು ಅನಿವಾರ್ಯ. ಇಂಗ್ಲೆಂಡ್ ತಂಡ ಮೂರು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ. ತಂಡದಲ್ಲಿ ವೇಗಿಗಳಾದ ಮಾರ್ಕ್ ವುಡ್, ಗಸ್ ಅಟ್ಕಿನ್ಸನ್ ಮತ್ತು ಜೇಮೀ ಓವರ್ಟನ್ ಅವರಿಗೆ ಸ್ಥಾನ ನೀಡಲಾಗಿದೆ.
ಭಾರತ ತಂಡದಲ್ಲಿಯೂ ಕೂಡ ಎರಡು ಬದಲಾವಣೆ ಮಾಡಲಾಗಿದೆ. ಗಾಯದಿಂದ ಚೇತರಿಸಿಕೊಂಡಿರುವ ವಿರಾಟ್ ಕೊಹ್ಲಿ ಟೀಂಗೆ ಮರಳಿದ್ದು, ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರು ಹೊರಗುಳಿದಿದ್ದಾರೆ. ಇನ್ನು, ಕುಲದೀಪ್ ಯಾದವ್ ಅವರ ಬದಲಿಗೆ ಸ್ಪಿನ್ನರ್ ವರುಣ್ ಚಕ್ರವರ್ತಿಗೆ 11ರ ಬಳಗಕ್ಕೆ ಸೇರಿಸಿಕೊಳ್ಳಲಾಗಿದೆ. ಇದರೊಂದಿಗೆ, ವರುಣ್ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡುತ್ತಿದ್ದಾರೆ.