ರಾಂಚಿ:ಪದಾರ್ಪಣೆ ಪಂದ್ಯದಲ್ಲೇ ಮಿಂಚಿನ ಬೌಲಿಂಗ್ ಪ್ರದರ್ಶಿಸಿದ ಆಕಾಶ್ ದೀಪ್ ದಾಳಿಗೆ ಸಿಲುಕಿದ ಇಂಗ್ಲೆಂಡ್ ತಂಡ ಭೋಜನ ವಿರಾಮದ ವೇಳೆಗೆ 5 ವಿಕೆಟ್ ಕಳೆದುಕೊಂಡು 112 ರನ್ ಗಳಿಸಿದೆ. ಇಲ್ಲಿನ ಜೆಎಸ್‌ಸಿಎ ಇಂಟರ್‌ನ್ಯಾಷನಲ್ ಮೈದಾನದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಆಂಗ್ಲರು ಮೊದಲು ಬ್ಯಾಟಿಂಗ್ಗಿಳಿದಿದ್ದಾರೆ.
ಸರಣಿ ಸಮಬಲ ಸಾಧಿಸುವ ನಿಟ್ಟಿನಲ್ಲಿ ಕಣಕ್ಕಿಳಿದಿರುವ ಇಂಗ್ಲೆಂಡ್ ಎಂದಿನಂತೆ ಬಾಜ್ಬಾಲ್ ಶೈಲಿಯ ಬಿರುಸಿನ ಆರಂಭ ಪಡೆಯಿತು. ಮೊದಲ ವಿಕೆಟ್ಗೆ ಝಾಕ್ ಕ್ರಾಲಿ (42) ಹಾಗೂ ಬೆನ್ ಡಕೆಟ್ (11) 9.2 ಓವರ್ಗಳಲ್ಲೇ 47 ರನ್ ಸೇರಿಸಿದರು. ಈ ಹಂತದಲ್ಲಿ 11 ರನ್ ಬಾರಿಸಿದ್ದ ಡಕೆಟ್ ಆಕಾಶ್ ದೀಪ್ಗೆ ಮೊದಲ ಬಲಿಯಾದರು.
ನಂತರ ಬ್ಯಾಟಿಂಗ್ಗೆ ಬಂದ ಒಲಿ ಪೋಪ್ ಕೇವಲ ಎರಡು ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ಪೆವಿಲಿಯನ್ಗೆ ಮರಳಿದರು. ಈ ಮೂಲಕ ಆಕಾಶ್ ಎರಡನೇ ವಿಕೆಟ್ ಕಬಳಿಸಿದರು. 12 ನೇ ಓವರ್ನಲ್ಲಿ ಭರ್ಜರಿ ಇನ್ಸ್ವಿಂಗರ್ ಎಸೆದ ಆಕಾಶ್ ದೀಪ್ ಉತ್ತಮವಾಗಿ ಆಡುತ್ತಿದ್ದ ಕ್ರಾಲಿ ಬೌಲ್ಡ್ ಮಾಡಿ, ಇಂಗ್ಲೆಂಡ್ಗೆ ಮತ್ತೊಂದು ಶಾಕ್ ನೀಡಿದರು. 57 ರನ್ಗಳಿಗೆ ಇಂಗ್ಲೆಂಡ್ 3 ವಿಕೆಟ್ ಕಳೆದು ಕೊಂಡಿತ್ತು.