ಲಂಡನ್/ನವದೆಹಲಿ: 'ಮುಸುಕುಧಾರಿಗಳ ಗುಂಪೊಂದು ತಮ್ಮ ಮನೆಗೆ ನುಗ್ಗಿ ದರೋಡೆ ಮಾಡಿದೆ' ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಹೇಳಿಕೊಂಡಿದ್ದಾರೆ
'ಕುಟುಂಬ ಸದಸ್ಯರು ಮನೆಯಲ್ಲಿದ್ದಾಗಲೇ ಮುಸುಕುಧಾರಿ ದರೋಡೆಕೋರರು ಮನೆಗೆ ನುಗ್ಗಿ ತಮ್ಮ ಮನೆಯಲ್ಲಿರುವ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ' ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಬೆನ್ ಸ್ಟೋಕ್ಸ್ ಬಹಿರಂಗಪಡಿಸಿದ್ದಾರೆ.
'ಟೆಸ್ಟ್ ಸರಣಿ ಆಡಲು ಪಾಕಿಸ್ತಾನದ ಪ್ರವಾಸದಲ್ಲಿದ್ದು, ಈ ತಿಂಗಳ ಅಕ್ಟೋಬರ್ 17ರ ಗುರುವಾರ ಸಂಜೆ ವೇಳೆ ಈ ದರೋಡೆ ನಡೆದಿದೆ. ಘಟನೆ ನಡೆದಾಗ ಪತ್ನಿ ಕ್ಲೇರ್ ಮತ್ತು ಅವರ ಮಕ್ಕಳಾದ ಲೇಟನ್ ಮತ್ತು ಲಿಬ್ಬಿ ಒಳಗೆ ಇದ್ದರು. ಆದರೆ, ಅದೃಷ್ಟವಶಾತ್ ಅವರ ಜೀವಕ್ಕೆ ಯಾವುದೇ ತೊಂದರೆ ಆಗಿಲ್ಲ. ಕ್ಯಾಸಲ್ ಈಡನ್ ಪ್ರದೇಶಲ್ಲಿರುವ ನನ್ನ ಮನೆಗೆ ನುಗ್ಗಿದ ಕಳ್ಳರು, ಆಭರಣ, ಪ್ರಶಸ್ತಿ ಪದಕ ಸೇರಿ ಬೆಲೆ ಬಾಳುವ ವಸ್ತುಗಳನ್ನು ದರೋಡೆ ಮಾಡಿಕೊಂಡು ಹೋಗಿದ್ದಾರೆ. ಕದ್ದೊಯ್ದ ವಸ್ತುಗಳು ನನ್ನ ಮತ್ತು ಕುಟುಂಬಕ್ಕೆ ಭಾವನಾತ್ಮಕ ಮೌಲ್ಯವನ್ನು ಹೊಂದಿದೆ. ಈ ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಲು ಸಹಾಯಕ್ಕಾಗಿ ಕೋರುವ ಮನವಿ ಇದಾಗಿದೆ' ಎಂದು ಬೆನ್ ಸ್ಟೋಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ:6 ವರ್ಷಗಳ ಹಿಂದೆಯೇ ಮಾಂಸಾಹಾರ ನಿಲ್ಲಿಸಿದ್ದ ಕೊಹ್ಲಿ: ಆ ಒಂದು ಕಾರಣಕ್ಕೆ ಸಸ್ಯಾಹಾರಿಯಾದ ವಿರಾಟ್!