ನಾರ್ತ್ ಸೌಂಡ್ (ಆಂಟಿಗುವಾ): ಇಲ್ಲಿನ ಸರ್ ವಿವಿಯನ್ ರಿಚರ್ಡ್ಸ್ ಮೈದಾನದಲ್ಲಿ ಗುರುವಾರ ನಡೆದ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡವು ಓಮನ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತು. ಓಮನ್ ನೀಡಿದ 48 ರನ್ ಅಲ್ಪಮೊತ್ತವನ್ನು ಬೆನ್ನಟ್ಟಿದ ಆಂಗ್ಲರು 3.1 ಓವರ್ಗಳಲ್ಲೇ ತಲುಪುವ ಮೂಲಕ ಗೆಲುವಿನ ನಗೆ ಬೀರಿದರು.
ಮಹತ್ವದ ಪಂದ್ಯದಲ್ಲಿ ಓಮನ್ ವಿರುದ್ಧ ಟಾಸ್ ಗೆದ್ದ ಇಂಗ್ಲೆಂಡ್, ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ನಾಯಕನ ನಿರ್ಧಾರಕ್ಕೆ ತಕ್ಕಂತೆ ಆಂಗ್ಲ ಬೌಲರ್ಗಳು ಓಮನ್ ಬ್ಯಾಟರ್ಗಳ ಮೇಲೆ ಸವಾರಿ ನಡೆಸಿದರು. ಇಂಗ್ಲೆಂಡ್ ಬೌಲಿಂಗ್ ದಾಳಿಗೆ ತತ್ತರಿಸಿದ ಓಮನ್ ಕೇವಲ 13.2 ಓವರ್ಗಳಲ್ಲೇ 47 ರನ್ಗೆ ಆಲೌಟ್ ಆಯಿತು. ತಂಡದ ಪರ ಶೋಯಬ್ ಖಾನ್ (11) ಮಾತ್ರ ಎರಡಂಕಿ ಮೊತ್ತ ತಲುಪಿದರು.
ದ್ವಿತೀಯ ಓವರ್ನಿಂದಲೇ ಓಮನ್ ವಿಕೆಟ್ ಬೀಳುವ ಸರಣಿ ಆರಂಭವಾಯಿತು. ಕಶ್ಯಪ್ ಪ್ರಜಾಪತಿ 9, ವಿಕೆಟ್ ಕೀಪರ್ ಪ್ರತೀಕ್ ಅಠವಳೆ 5, ನಾಯಕ ಅಕಿಬ್ ಇಲ್ಯಾಸ್ 8, ಜೀಶನ್ ಮಕ್ಸೂದ್ 1, ಖಾಲಿದ್ ಕೈಲ್ 1, ಅಯಾನ್ ಖಾನ್ 1, ಮೆಹ್ರಾನ್ ಖಾನ್ 0, ಫಯಾಜ್ ಬಟ್ 2 ಕಲೀಮುಲ್ಲಾ 5 ಹಾಗೂ ಬಿಲಾಲ್ ಖಾನ್ 0* ರನ್ ಗಳಿಸಿದರು. ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್ 12ಕ್ಕೆ3, ಮಾರ್ಕ್ ವುಡ್ 12ಕ್ಕೆ 3 ಹಾಗೂ ಆದಿಲ್ ರಶಿದ್ 11 ರನ್ಗೆ 4 ವಿಕೆಟ್ ಕಬಳಿಸಿ ಭಾರಿ ಮೇಲುಗೈ ಒದಗಿಸಿದರು.
48 ರನ್ ಮೊತ್ತ ಬೆನ್ನತ್ತಿದ ಇಂಗ್ಲೆಂಡ್ 3.1 ಓವರ್ಗಳಲ್ಲೇ ಗುರಿ ತಲುಪಿತು. ಫಿಲಿಪ್ ಸಾಲ್ಟ್ 3 ಎಸೆತಗಳಲ್ಲಿ 2 ಸಿಕ್ಸರ್ ಸಹಿತ 12 ರನ್ ಬಾರಿಸಿ ಔಟಾದರೆ, ವಿಲ್ ಜಾಕ್ಸ್ 5 ರನ್ಗೆ ಪೆವಿಲಿಯನ್ಗೆ ಮರಳಿದರು. ಬಳಿಕ ನಾಯಕ ಜೋಸ್ ಬಟ್ಲರ್ ಅಜೇಯ 24 ಹಾಗೂ ಜಾನಿ ಬೈರ್ಸ್ಟೋ 8* ರನ್ ಬಾರಿಸಿ ಇಂಗ್ಲೆಂಡ್ಗೆ ಗೆಲುವು ತಂದಿದ್ದರು.