England Test Record:ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡ ವಿಶ್ವ ದಾಖಲೆ ನಿರ್ಮಿಸಿದೆ. 147 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ 5 ಲಕ್ಷ ರನ್ ಗಡಿ ದಾಟಿದ ಮೊದಲ ತಂಡವಾಗಿ ದಾಖಲೆ ಬರೆದಿದೆ.
ಸದ್ಯ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಇಂಗ್ಲೆಂಡ್ ತಂಡ ಕಿವೀಸ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಮೊದಲ ಪಂದ್ಯದಲ್ಲಿ 8 ವಿಕೆಟ್ಗಳಿಂದ ಗೆದ್ದಿರುವ ಆಂಗ್ಲರು ಇದೀಗ ಎರಡನೇ ಪಂದ್ಯದ ಮೇಲೂ ಸಂಪೂರ್ಣ ಹಿಡಿತ ಸಾಧಿಸಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ ಹ್ಯಾರಿ ಬ್ರೂಕ್ (123) ಮತ್ತು ಓಲಿ ಪೋಪ್ (66) ಬ್ಯಾಟಿಂಗ್ ನೆರವಿನಿಂದ 280 ರನ್ ಕಲೆ ಹಾಕಿದ್ದ ಆಂಗ್ಲರು, ಕಿವೀಸ್ ಪಡೆಯನ್ನು 125 ರನ್ಗಳಿಗೆ ಆಲೌಟ್ ಮಾಡಿದ್ದರು. ಇದೀಗ ಎರಡನೇ ಇನ್ನಿಂಗ್ಸ್ನಲ್ಲೂ 500+ ರನ್ಗಳ ಮುನ್ನಡೆಯೊಂದಿಗೆ ಬ್ಯಾಟಿಂಗ್ ಅನ್ನು ಮುಂದುವರೆಸಿದೆ. ಕಿವೀಸ್ ಪಡೆಗೆ ಬೃಹತ್ ಗುರಿಯನ್ನು ನೀಡಲು ಯೋಜನೆ ರೂಪಿಸಿಕೊಂಡಿದೆ. ಇದೇ ಪಂದ್ಯದಲ್ಲಿ ಇಂಗ್ಲೆಂಡ್ 5 ಲಕ್ಷ ರನ್‌ಗಳನ್ನು ಪೂರ್ಣಗೊಳಿಸಿದೆ.
ಟೆಸ್ಟ್ ಇತಿಹಾಸ: 1877ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಆಡಿತು. ಅಲ್ಲಿಂದ ಈವರೆಗೆ ಒಟ್ಟು 1082 ಪಂದ್ಯಗಳನ್ನು ಆಡಿದೆ. ವಿಶ್ವ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ ತಂಡವಾಗಿಯೂ ಇಂಗ್ಲೆಂಡ್ ದಾಖಲೆ ಬರೆದಿದೆ. ಇದೀಗ 5 ಲಕ್ಷ ರನ್ ಮೈಲಿಗಲ್ಲು ತಲುಪಿದೆ. 717 ಆಟಗಾರರ ಸಹಾಯದಿಂದ ಇಂಗ್ಲೆಂಡ್ ಈ ಸಾಧನೆ ಮಾಡಿದೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ತಂಡ ಆಸ್ಟ್ರೇಲಿಯಾ ಆಗಿದೆ. ಈವರೆಗೆ ಆಸೀಸ್ 4,28,816 ಟೆಸ್ಟ್ ರನ್‌ಗಳನ್ನು ಪೂರ್ಣಗೊಳಿಸಿದೆ. ಟೀಂ ಇಂಡಿಯಾ ಮೂರನೇ ಸ್ಥಾನದಲ್ಲಿದೆ. ಆದರೆ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾಕ್ಕೆ ಹೋಲಿಸಿದರೆ ಭಾರತದ ರನ್‌ಗಳಲ್ಲಿ ಭಾರಿ ವ್ಯತ್ಯಾಸವಿದೆ. ಇದುವರೆಗೆ ಭಾರತ 586 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 316 ಆಟಗಾರರ ನೆರವಿನಿಂದ 2 ಲಕ್ಷ 78 ಸಾವಿರ ರನ್ ಗಳಿಸಿದೆ.