ಕರ್ನಾಟಕ

karnataka

ETV Bharat / sports

11ನೇ ಸಲ ಆಸ್ಟ್ರೇಲಿಯನ್​ ಓಪನ್​ ಸೆಮೀಸ್​ ತಲುಪಿದ ನೊವಾಕ್​: 25ನೇ ಗ್ರಾನ್​ಸ್ಲಾಮ್​ಗೆ ಇನ್ನೊಂದು ಹೆಜ್ಜೆ ಬಾಕಿ - ಟೆನಿಸ್ ತಾರೆ ನೊವಾಕ್

ಟೆನಿಸ್​ ಜಗತ್ತಿನ ದಿಗ್ಗಜ ಆಟಗಾರ ನೊವಾಕ್​ ಜೊಕೊವಿಕ್​ ಆಸ್ಟ್ರೇಲಿಯನ್​ ಓಪನ್​ನಲ್ಲಿ ಸೆಮೀಸ್​ ತಲುಪಿದ್ದಾರೆ.

ನೊವಾಕ್​ ಜೊಕೊವಿಕ್
ನೊವಾಕ್​ ಜೊಕೊವಿಕ್

By ETV Bharat Karnataka Team

Published : Jan 23, 2024, 8:23 PM IST

ಮೆಲ್ಬೋರ್ನ್ (ಆಸ್ಟ್ರೇಲಿಯಾ):ದಾಖಲೆಯ 25ನೇ ಗ್ರಾನ್​ಸ್ಲಾಮ್​ ಮೇಲೆ ಕಣ್ಣಿಟ್ಟಿರುವ ಸರ್ಬಿಯಾದ ಟೆನಿಸ್ ತಾರೆ ನೊವಾಕ್ ಜೊಕೊವಿಕ್ ವೃತ್ತಿಜೀವನದ 48ನೇ, ಆಸ್ಟ್ರೇಲಿಯಾ ಓಪನ್​ನಲ್ಲಿ 11 ನೇ ಬಾರಿಗೆ ಸೆಮಿಫೈನಲ್​ ತಲುಪಿದರು. ಪ್ರಶಸ್ತಿ ಗೆಲುವಿಗೆ ಇನ್ನೊಂದೇ ಮೆಟ್ಟಿಲು ದೂರವಿದ್ದಾರೆ.

ಮಂಗಳವಾರ ನಡೆದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಅಮೆರಿಕದ ಟೇಲರ್ ಫ್ರಿಟ್ಜ್ ವಿರುದ್ಧ ಸರ್ಬಿಯನ್​ ಆಟಗಾರ ಮೂರು ಗಂಟೆ 45 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ 7-6 (7-3) 4-6, 6-2, 6-3 ಅಂತರದಲ್ಲಿ ಗೆಲುವು ಸಾಧಿಸಿದರು. ಪ್ರಬಲ ಪೈಪೋಟಿ ನೀಡಿದ ಅಮೆರಿಕದ ಟೇಲರ್ ಕೊನೆಯಲ್ಲಿ ದಿಗ್ಗಜ ಆಟಗಾರನ ಮುಂದೆ ಮಂಡಿಯೂರಿದರು.

ಮೊದಲ ಸೆಟ್​ನಲ್ಲೇ ನೊವಾಕ್​ಗೆ ಪ್ರಬಲ ಸ್ಪರ್ಧೆ ನೀಡಿದ ಟೇಲರ್​ ಗೆಲ್ಲಲು ಅವಕಾಶ ನೀಡಲಿಲ್ಲ. ಇದರಿಂದ ಆರಂಭದ ಸೆಟ್​ ಟ್ರೈ ಬೇಕರ್​ಗೆ ಮೊರೆ ಹೋಗಬೇಕಾಯಿತು. ಆದರೆ, ಇಂತಹ ನೂರಾರು ಟ್ರೈ ಬೇಕರ್​ ಆಡಿರುವ ದಿಗ್ಗಜನಿಗೆ ಟೇಲರ್​ ದೊಡ್ಡ ಸವಾಲಾಗಲಿಲ್ಲ. 7-3 ಅಂಕಗಳಿಂದ ಮೊದಲ ಸೆಟ್​ ಅನ್ನು ನೊವಾಕ್​ ವಶಪಡಿಸಿಕೊಂಡರು. ಬಳಿಕ ಎರಡನೇ ಸೆಟ್​​ನಲ್ಲಿ ತಿರುಗಿಬಿದ್ದ ಟೇಲರ್​ ದಾಖಲೆಯ ಗ್ರಾನ್​ ಸ್ಲಾಮ್​ ಮಾಸ್ಟರ್​ಗೆ ಚಳ್ಳೆಹಣ್ಣು ತಿನ್ನಿಸಿದರು. ಅತ್ಯುತ್ತಮ ಹೊಡೆತಗಳಿಂದ 4-6 ರಲ್ಲಿ ಸೆಟ್​ ವಶಪಡಿಸಿಕೊಂಡು 1-1 ರ ಸಮಬಲ ಸಾಧಿಸಿದರು.

ದಿಗ್ಗಜನ ಏಸ್​ಗಳಿಗೆ ಫ್ರೀಜ್​ ಆದ ಫ್ರಿಟ್ಜ್​​:ಮುಂದಿನ ಎರಡೂ ಸೆಟ್​ಗಳಲ್ಲಿ ಅಮೆರಿಕದ ಫ್ರಿಟ್ಜ್​ ಪ್ರತಿರೋಧ ಒಡ್ಡಿದರೂ ದಿಗ್ಗಜ ಟೆನಿಸ್​ ಆಟಗಾರನ ಅನುಭವದ ಮುಂದೆ ಶಕ್ತಿ ಸಾಲಲಿಲ್ಲ. ಪ್ರಬಲ ಸರ್ವ್​ಗಳ ಮೂಲಕ ಕಾಡಿದ ನೊವಾಕ್​ ಮುಂದಿನ ಎರಡೂ ಸೆಟ್​ಗಳನ್ನು 6-2, 6-3 ರಲ್ಲಿ ಸಲೀಸಾಗಿ ಗೆದ್ದರು. ಸರ್ಬಿಯಾ ಆಟಗಾರ ಸಿಡಿಸಿದ 20 ಏಸ್​ಗಳಲ್ಲಿ 16 ನಿಖರ ಗುರಿ ಸಾಧಿಸಿದ್ದವು. ಇದು ಅಮೆರಿಕನ್​ ಆಟಗಾರನ ಧೃತಿಗೆಡಿಸಿತು. ಈ ಗೆಲುವಿನ ಮೂಲಕ 36 ವರ್ಷ ನೊವಾಕ್​ ಗ್ರಾನ್​ಸ್ಲಾಮ್‌ ಟೂರ್ನಿಯಲ್ಲಿ 48ನೇ ಬಾರಿಗೆ ಸೆಮಿಫೈನಲ್ ತಲುಪಿದರು. ಇಷ್ಟು ಬಾರಿ ಸೆಮೀಸ್​ ತಲುಪಿದ ವಿಶ್ವದ ಏಕೈಕ ಟೆನಿಸ್ಸಿಗ ಎಂಬ ದಾಖಲೆಯನ್ನು ಮತ್ತಷ್ಟು ವಿಸ್ತರಿಸಿದರು. ಇನ್ನೊಬ್ಬ ದಿಗ್ಗಜ ಆಟಗಾರ ರೋಜರ್ ಫೆಡರರ್ 46 ಬಾರಿ ಸೆಮೀಸ್​ ಹಂತ ತಲುಪಿದ್ದಾರೆ.

ಇದರ ಜೊತೆಗೆ, ಆಸ್ಟ್ರೇಲಿಯನ್​ ಓಪನ್​ನಲ್ಲಿ ಸತತ 33 ಗೆಲುವು ಸಾಧಿಸುವ ಮೂಲಕ ಆಸ್ಟ್ರೇಲಿಯನ್ ಪಂದ್ಯಾವಳಿಯಲ್ಲಿ ಮಾಜಿ ಟೆನಿಸ್​ ಆಟಗಾರ್ತಿ ಮೋನಿಕಾ ಸೆಲೆ ಅವರ ದಾಖಲೆಯನ್ನು ಸರಿಗಟ್ಟಿದರು. ಅಲ್ಲದೆ, ಫ್ರಿಟ್ಜ್ ವಿರುದ್ಧ 9-0 ಮುನ್ನಡೆ ಸಾಧಿಸಿದರು. ನಾಲ್ಕನೇ ಶ್ರೇಯಾಂಕದ ಜಾನಿಕ್ ಸಿನ್ನರ್ ಮತ್ತು ಐದನೇ ಶ್ರೇಯಾಂಕದ ಆಂಡ್ರೆ ರುಬ್ಲೆವ್ ನಡುವಿನ ಕ್ವಾರ್ಟರ್​ ಫೈನಲ್​ ಬಳಿಕ ಗೆದ್ದವರನ್ನು ಜೊಕೊವಿಕ್ ಎದುರಿಸಲಿದ್ದಾರೆ.

ಇದನ್ನೂ ಓದಿ:ಇಂಗ್ಲೆಂಡ್​ ವಿರುದ್ಧ ಟೆಸ್ಟ್​ ಸರಣಿಯಲ್ಲಿ ಕೆಎಲ್​ ರಾಹುಲ್​ ವಿಕೆಟ್​ ಕೀಪರ್​ ಆಗಿ ಆಡುವುದಿಲ್ಲ: ದ್ರಾವಿಡ್​

ABOUT THE AUTHOR

...view details