ಮೈಸೂರು:ಇಂಡಿಯನ್ ಪ್ರಿಮಿಯರ್ ಲೀಗ್ನ 2025ರ ಆವೃತ್ತಿಯ ಭಾಗವಾಗಿ ಜೆಡ್ಡಾದಲ್ಲಿ ನಡೆದ ಮೆಗಾ ಹರಾಜಿನಲ್ಲಿ ಮೈಸೂರಿನ ಯುವ ಕ್ರಿಕೆಟಿಗನನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಖರೀದಿ ಮಾಡಿದೆ.
ಎರಡು ದಿನಗಳಿಂದ ನಡೆದಿದ್ದು ಹರಾಜು ಪ್ರಕ್ರಿಯೆಯಲ್ಲಿ ಮೈಸೂರಿನ ಜೆ.ಪಿ. ನಗರದ ನಿವಾಸಿಯಾದ ಮನ್ವಂತ್ ಕುಮಾರ್ ಅವರನ್ನು ಡೆಲ್ಲಿ ಕ್ಯಾಪಿಟಲ್ ತಂಡ ಖರೀದಿ ಮಾಡಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡುವ ಆಲ್ರೌಂಡರ್ ಆಗಿದ್ದಾರೆ.
ಎಸ್. ಲಕ್ಷ್ಮೀ ಕುಮಾರ್ ಮತ್ತು ಆರ್. ಶ್ರೀ ದೇವಿಕುಮಾರ್ ದಂಪತಿ ಪುತ್ರರಾದ 20 ವರ್ಷದ ಮನ್ವಂತ್ ಕುಮಾರ್ ಮತ್ತು ಸೋಹದರ ಹೇಮಂತ್ ಕುಮಾರ್ ಇಬ್ಬರು ಕ್ರಿಕೆಟರ್ ಆಗಿದ್ದಾರೆ. ಬಿಂಎಂಟಿಸಿ ನಿವೃತ್ತ ಬಸ್ ಚಾಲಕರಾದ ತಂದೆ ಲಕ್ಷ್ಮಿಕುಮಾರ್, ತಮ್ಮ ಇಬ್ಬರು ಮಕ್ಕಳ ಕ್ರಿಕೆಟ್ ಮೇಲಿನ ಆಸಕ್ತಿ ಕಂಡು ತರಬೇತಿಗೆ ಸೇರಿಸಿದ್ದರು. ಅದರಲ್ಲೂ ಬಾಲ್ಯದಿಂದಲೇ ಐಪಿಎಲ್ಗೆ ಪ್ರವೇಶಿಸಬೇಕು ಎಂಬ ಕನಸು ಕಂಡಿದ್ದ ಮನ್ವಂತ್ ಇದೀಗ ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ. ಎರಡನೇ ದಿನ ನಡೆದ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮನ್ವಂತ್ ಅವರನ್ನು ₹30 ಲಕ್ಷಕ್ಕೆ ಖರೀದಿ ಮಾಡಿದೆ.
ಮನ್ವಂತ್ ದಾಖಲೆಗಳು: ಸದ್ಯ ಮೈಸೂರಿನ ಆರ್.ಬಿ.ಎನ್.ಸಿ.ಸಿ. ತಂಡವನ್ನು ಪ್ರತಿನಿಧಿಸುತ್ತಿದ್ದು, ಸೈಯದ್ ಮುಷ್ತಾಕ್ ಆಲಿ ಟ್ರೋಫಿ ಮತ್ತು 2023ರ ಮಹಾರಾಜ ಟ್ರೋಫಿ ಲೀಗ್ಗಳಲ್ಲಿ ಆಡಿರುವ ಅನುಭವ ಹೊಂದಿದ್ದಾರೆ. ಮಹಾರಾಜ ಟ್ರೋಫಿಯಲ್ಲಿ 6 ಪಂದ್ಯಗಳನ್ನು ಆಡಿರುವ ಮನ್ವಂತ್ 101 ರನ್ಗಳಿಸಿದ್ದಾರೆ. ಬೌಲಿಂಗ್ ಅಂಕಿ - ಅಂಶ ನೋಡಿದರೇ ಒಟ್ಟು 10 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 15 ವಿಕೆಟ್ ಪಡೆದಿದ್ದಾರೆ. 33 ರನ್ಗೆ 4 ವಿಕೆಟ್ ಪಡೆದಿರುವುದು ಇವರ ಬೆಸ್ಟ್ ಇನ್ನಿಂಗ್ಸ್ ಆಗಿದೆ.
ಈ ಕುರಿತು ಈಟಿವಿ ಭಾರತದ ಜೊತೆ ದೂರವಾಣಿ ಮೂಲಕ ಪ್ರಕ್ರಿಯೆ ನೀಡಿರುವ ಮನ್ವಂತ್ ಡೆಲ್ಲಿ ಕ್ಯಾಪಿಟಲ್ಸ್ ನನ್ನನ್ನು ಆಯ್ಕೆ ಮಾಡಿದ್ದು , ಸಂತೋಷವಾಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ಉಳಿದಂತೆ ಈ ಬಾರಿ ಒಟ್ಟು 24 ಕನ್ನಡಿಗರು ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಒಟ್ಟು 9 ಆಟಗಾರರನ್ನು ವಿವಿಧ ತಂಡಗಳು ಖರೀದಿ ಮಾಡಿವೆ. ಕನ್ನಡಿಗರಲ್ಲಿ ಕೆಎಲ್ ರಾಹುಲ್ ಹೆಚ್ಚು ಮೊತ್ತಕ್ಕೆ ಮಾರಾಟ ಆದ ಆಟಗಾರ ಎನಿಸಿಕೊಂಡಿದ್ದಾರೆ. ಮೊದಲ ದಿನ ನಡೆದ ಹರಾಜಿನಲ್ಲಿ ರಾಹುಲ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಖರೀದಿ ಮಾಡಿದೆ. ವಿವಿಧ ತಂಗಳ ಮಧ್ಯ ಏರ್ಪಟ್ಟ ಪೈಪೋಟಿಯಲ್ಲಿ ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ₹14 ಕೋಟಿಗೆ ರಾಹುಲ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.
ಇದನ್ನೂ ಓದಿ:IPL ಹರಾಜಿನಲ್ಲಿ ಕಾಣಿಸಿಕೊಂಡ 24 ಕನ್ನಡಿಗರಲ್ಲಿ ಸೋಲ್ಡ್ - ಅನ್ಸೋಲ್ಡ್ ಆದ ಆಟಗಾರರು ಇವರೇ ನೋಡಿ!