Rashid khan against Taliban:ಅಫ್ಘಾನಿಸ್ತಾನದ ಕ್ರಿಕೆಟಿಗರಾದ ರಶೀದ್ ಖಾನ್ ಮತ್ತು ಮೊಹಮ್ಮದ್ ನಬಿ ತಾಲಿಬಾನ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ದೇಶದಲ್ಲಿ ಮಹಿಳೆಯರಿಗೆ ನರ್ಸಿಂಗ್ ತರಬೇತಿ ನಿಷೇಧಿಸಿ ತಾಲಿಬಾನ್ ಆಡಳಿತ ನಿಷೇಧ ಹೊರಡಿಸಿದೆ. ಇದೀಗ ಇದಕ್ಕೆ ಇಬ್ಬರು ಕ್ರಿಕೆಟಿಗರು ಧ್ವನಿ ಎತ್ತಿದ್ದಾರೆ.
ಸೆಪ್ಟೆಂಬರ್ 2021ರಕ್ಕೆ ಅಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಮರಳಿದ ಒಂದು ತಿಂಗಳ ನಂತರ ತಾಲಿಬಾನ್ ಸರ್ಕಾರ ಆರನೇ ತರಗತಿಯ ನಂತರ ಹುಡುಗಿಯರಿಗೆ ಶಾಲಾ ಶಿಕ್ಷಣವನ್ನು ನಿಲ್ಲಿಸಿತು. ಬಳಿಕ ಡಿಸೆಂಬರ್ 2022ರಲ್ಲಿ ಮಹಿಳೆಯರು ವಿಶ್ವವಿದ್ಯಾಲಯಕ್ಕೆ ಹೋಗುವುದನ್ನು ನಿಷೇಧಿಸಿತ್ತು. ಇದೀಗ ಮಹಿಳೆಯರಿಗೆ ವೈದ್ಯಕೀಯ ತರಬೇತಿಯನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಇನ್ಮುಂದೆ ದೇಶದಲ್ಲಿ ಮಹಿಳೆಯರು ಶುಶ್ರೂಷಕಿ ಹಾಗೂ ನರ್ಸಿಂಗ್ ಶಿಕ್ಷಣವನ್ನು ಪಡೆಯುವಂತಿಲ್ಲ ಎಂದು ತಿಳಿಸಿದೆ. ಡಿಸೆಂಬರ್ 2 ರಂದು ತಾಲಿಬಾನ್ ಸಚಿವ ಹಿಬತುಲ್ಲಾ ಅಖುಂದ್ಜಾದಾ ಈ ಆದೇಶ ಮಾಡಿದ್ದಾರೆ.
ಶಿಕ್ಷಣ ಪ್ರತಿಯೊಬ್ಬರ ಹಕ್ಕು:ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕ್ರಿಕೆಟರ್ ರಶೀದ್ ಖಾನ್ ಮತ್ತು ಮೊಹ್ಮದ್ ನಬಿ ಮಹಿಳಾ ಶಿಕ್ಷಣದ ಮಹತ್ವವದ ಬಗ್ಗೆ ತಾಲಿಬಾನ್ ಸರ್ಕಾರಕ್ಕೆ ಒತ್ತಿ ಹೇಳಿದ್ದಾರೆ. ಈ ಬಗ್ಗೆ ಪತ್ರ ಬರೆದಿರುವ ರಶೀದ್ ಖಾನ್, ಇಸ್ಲಾಂನಲ್ಲಿ ಶಿಕ್ಷಣ ಎಂಬುದು ಪ್ರತಿಯೊಬ್ಬರಿಗೂ ಕಡ್ಡಾಯವಾಗಿದೆ. ಅದು ಪ್ರತಿಯೊಬ್ಬರು ಹಕ್ಕು ಕೂಡ ಆಗಿದೆ. ಇದರಿಂದ ಪುರುಷರಾಗಲಿ ಅಥವಾ ಮಹಿಳೆಯರಾಗಲಿ ವಂಚಿತರಾಗಲು ಸಾಧ್ಯವಿಲ್ಲ. ಆದರೆ ನಮ್ಮ ಸಹೋದರಿಯರಿಗೆ ವೈದ್ಯಕೀಯ ಶಿಕ್ಷಣದ ಬಾಗಿಲು ಮುಚ್ಚಿರುವುದು ನನ್ನನು ದುಃಖಿತನನ್ನಾಗಿ ಮಾಡಿದೆ. ಎಲ್ಲರಿಗೂ ಶಿಕ್ಷಣವನ್ನು ಒದಗಿಸುವುದು ಸಾಮಾಜಿಕ ಜವಾಬ್ದಾರಿ ಮಾತ್ರವಲ್ಲ, ನಮ್ಮ ನೈತಿಕ ಹೊಣೆಗಾರಿಕೆಯಾಗಿದೆ. ಸರ್ಕಾರದ ಈ ನಡೆ ನಿರಾಶೆಗೊಳಿಸಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.