ಪ್ಯಾರಿಸ್:ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರು ಸೆಮಿಫೈನಲ್ ನಂತರ 2.7 ಕೆಜಿ ತೂಕ ಹೆಚ್ಚಳವಾಗಿದ್ದರು. ಇದನ್ನು ತಗ್ಗಿಸಲು ಹಲವು ಕಠಿಣ ಪ್ರಯತ್ನ ಮಾಡಲಾಯಿತು. ಕೊನೆಗೆ ಅವರ ತಲೆಕೂದಲನ್ನೂ ಕತ್ತರಿಸಲಾಯಿತು. ಆದಾಗ್ಯೂ 100 ಗ್ರಾಂ ಹೆಚ್ಚಿತ್ತು ಎಂದು ಪ್ಯಾರಿಸ್ ಒಲಿಂಪಿಕ್ಸ್ನ ಭಾರತದ ಮುಖ್ಯ ವೈದ್ಯಾಧಿಕಾರಿ ಡಾ.ದಿನ್ಯಾ ಪರ್ದಿವಾಲ್ ಬುಧವಾರ ತಿಳಿಸಿದರು.
ದೇಹ ತೂಕ ಕಡಿತ ಮಾಡಲು ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡ ಅವರು, ವಿನೇಶ್ ಅವರ ದೇಹ ತೂಕವನ್ನು ಕಡಿಮೆ ಮಾಡಲು ತಂಡವು ಇಡೀ ರಾತ್ರಿ ಇನ್ನಿಲ್ಲದ ಪ್ರಯತ್ನ ಮಾಡಿತು. ಇನ್ನೂ ಕೆಲವು ಗಂಟೆಗಳು ಸಮಯ ಸಿಕ್ಕಿದ್ದರೆ ನಿಗದಿತ ತೂಕಕ್ಕೆ ಇಳಿಸಬಹುದಾಗಿತ್ತು ಎಂದು ಹೇಳಿದರು.
ಸೆಮಿಫೈನಲ್‌ನ ಬಳಿಕ ವಿನೇಶ್ ಅವರ ಅವರ ತೂಕದಲ್ಲಿ ದಿಢೀರ್ ಏರಿಕೆ ಕಂಡುಬಂದಿತ್ತು. ಬಳಿಕ ಕುಸ್ತಿಪಟುವಿನ ವೈದ್ಯರು ನೀರು ಮತ್ತು ಆಹಾರವನ್ನು ಕಡಿತಗೊಳಿಸಿ, ತೂಕವನ್ನು ಕಡಿಮೆ ಮಾಡಲು ಪ್ರಾರಂಭಿಸಿದರು. ಬೆವರಿನ ಮೂಲಕ ತೂಕ ಹೊರಹಾಕುವ ಪ್ರಯತ್ನ ನಡೆಸಲಾಯಿತು. ಕುಸ್ತಿಪಟು ಕೂಡ ತೂಕ ಇಳಿಯುವ ಭರವಸೆ ಹೊಂದಿದ್ದರು. ಏನೇ ಮಾಡಿದರೂ ನಿಗದಿತ 50 ಕೆಜಿಗೆ ತೂಕ ಇಳಿಸಲು ಸಾಧ್ಯವಾಗಲಿಲ್ಲ ಎಂದರು.
ಕುಸ್ತಿಪಟುವಿನ ತೂಕವನ್ನು ಕಡಿಮೆ ಮಾಡಲು ಸೀಮಿತ ಸಮಯ ಇದ್ದ ಕಾರಣ, ತಂಡವು ಇಡೀ ರಾತ್ರಿ ಎಚ್ಚರವಾಗಿತ್ತು. ತೂಕ ಇಳಿಕೆಗೆ ಸಾಮಾನ್ಯವಾಗಿ ಸಮಯ ಹಿಡಿಯುತ್ತದೆ. ನಮಗೆ ಕೇವಲ 12 ಗಂಟೆಗಳಿತ್ತು. ಆದ್ದರಿಂದ, ಕೂದಲು ಕತ್ತರಿಸುವ, ನಿರ್ಜಲೀಕರಣದಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಲಾಯಿತು. ವೈದ್ಯಕೀಯವಾಗಿ ಸಾಧ್ಯವಿರುವ ಎಲ್ಲವನ್ನೂ ನಾವು ಪ್ರಯತ್ನಿಸಿದೆವು ಎಂದು ವೈದ್ಯರು ತಿಳಿಸಿದರು.