ನವದೆಹಲಿ: ಭಾರತದ ಕುಸ್ತಿಪಟು ವಿನೇಶ್ ಫೋಗಟ್ಗೆ ಪ್ಯಾರಿಸ್ ಒಲಿಂಪಿಕ್ ಮಹಿಳಾ 50 ಕೆಜಿ ಕುಸ್ತಿ ಪಂದ್ಯದಲ್ಲಿ ದೇಹ ತೂಕ ಹೆಚ್ಚಿರುವ ಕಾರಣ ಫೈನಲ್ ಪಂದ್ಯದಿಂದ ಅನರ್ಹಗೊಳಿಸಲಾಗಿತ್ತು. ಬಳಿಕ ಫೈನಲ್ ತಲುಪಿರುವ ಅವರಿಗೆ ಕನಿಷ್ಠ ಬೆಳ್ಳಿ ಪದಕವನ್ನಾದರು ನೀಡಲಿ ಎಂದು ವಿನೇಶ್ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ (ಸಿಎಎಸ್) ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.
ಈ ಬಗ್ಗೆ ವಿನೇಶ್ ಶುಕ್ರವಾರ 3 ಪುಟಗಳ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ತಮ್ಮ ಈ ಹೇಳಿಕೆಯಲ್ಲಿ ಅವರ ಜೀವನ ಕಥೆ ಮತ್ತು ಕುಸ್ತಿ ಪ್ರಯಾಣದ ಬಗ್ಗೆ ಬರೆದುಕೊಂಡಿದ್ದಾರೆ. 2028 ಮತ್ತು 2032ರ ಒಲಿಂಪಿಕ್ನಲ್ಲಿ ಭಾರತವನ್ನು ಪ್ರತಿನಿಧಿಸುವ ಸುಳಿವು ನೀಡಿರುವ ಅವರು 2032ರವರೆಗೂ ತಾವು ಕ್ರೀಡೆಯಲ್ಲಿ ಸಕ್ರಿಯಾವಾಗಿರುವುದಾಗಿ ಹೇಳಿಕೊಂಡಿದ್ದಾರೆ. ಆದ್ರೆ ತಾವು ಬಿಡುಗಡೆಗೊಳಿಸಿರುವ ಕುಸ್ತಿ ಪ್ರಯಾಣದ ಹೇಳಿಕೆಯಲ್ಲಿ ಚಿಕ್ಕಪ್ಪನ ಹೆಸರನ್ನು ಉಲ್ಲೇಖಿಸಲಿಲ್ಲವೆಂದು ವಿನೇಶ್ ಸಹೋದರಿ ಗೀತಾ ಫೋಗಟ್ ಅವರ ಪತಿ ಪವನ್ ಸರೋಹಾ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಕಾಮನ್‌ವೆಲ್ತ್ ಕುಸ್ತಿ ಚಾಂಪಿಯನ್ ಪವನ್ ಸರೋಹಾ ಅವರು, ದೇವರು ನಿನಗೆ ಒಳ್ಳೆಯ ಬುದ್ಧಿಯನ್ನು ನೀಡಲಿ ಎಂದು ಬರೆದಿದ್ದಾರೆ. 'ವಿನೇಶ್, ನೀವು ನಿಮ್ಮ ಕುಸ್ತಿ ಪ್ರಯಾಣದ ಬಗ್ಗೆ ಅದ್ಬುತವಾಗಿ ಬರೆದಿದ್ದೀರಿ. ಆದರೇ ನಿಮ್ಮ ಚಿಕ್ಕಪ್ಪ ಮಹಾವೀರ್ ಫೋಗಟ್ ಅವರನ್ನು ಮರೆತಿದ್ದೀರಿ. ನಿಮ್ಮ ಕುಸ್ತಿ ವೃತ್ತಿಯು ಯಾರಿಂದ ಪ್ರಾರಂಭವಾಯಿತು ಎಂಬುದನ್ನು ನೆನಪಿಸಿಕೊಳ್ಳಿ. ದೇವರು ನಿಮಗೆ ಶುದ್ಧ ಬುದ್ಧಿ ನೀಡಲಿ ಎಂದು ಅಸಮಾಧಾನ ಹೊರಹಾಕಿದ್ದಾರೆ.