ನವದೆಹಲಿ: ಭಾರತದ ಅಗ್ರ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಪ್ಯಾರಿಸ್ ಒಲಿಂಪಿಕ್ 2024ರ ಮಹಿಳೆಯರ 75 ಕೆಜಿ ವಿಭಾಗದ 16ನೇ ಸುತ್ತಿನ ಪಂದ್ಯದಲ್ಲಿ ನಾರ್ವೆಯ ಸುನ್ನಿವಾ ಹಾಫ್‌ಸ್ಟೆಡ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಈ ಪಂದ್ಯದಲ್ಲಿ ಲೊವ್ಲಿನಾ ಎದುರಾಳಿ ವಿರುದ್ಧ ಭರ್ಜರಿ ಪ್ರದರ್ಶನ ನೀಡಿ 5-0 ಅಂತರದಿಂದ ಗೆದ್ದರು. ಇದರೊಂದಿಗೆ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದರು.
ಈ ಪಂದ್ಯದಲ್ಲಿ ಲೊವ್ಲಿನಾ ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿ, ಎದುರಾಳಿಯ ಮೇಲೆ ಪ್ರಾಬಲ್ಯ ಸಾಧಿಸುತ್ತ ಸಾಗಿದರು. ಅವರ ಅತ್ಯುತ್ತಮ ಪಂಚ್‌ಗಳಿಂದ ಪ್ರತಿ ಸುತ್ತಿನಲ್ಲಿ ಪೂರ್ಣ ಅಂಕಗಳನ್ನು ಪಡೆದುಕೊಂಡರು. ನಾರ್ವೆಯ ಹ್ಯಾಫ್‌ಸ್ಟೆಡ್‌ಗೆ ಒಂದೇ ಒಂದು ಹಂತದಲ್ಲಿ ಗೆಲ್ಲಲು ಲೊವ್ಲಿನಾ ಅವಕಾಶ ನೀಡಲಿಲ್ಲ. ಲೊವ್ಲಿನಾ ಬೊರ್ಗೊಹೈನ್ ಮೊದಲ ಮತ್ತು ಎರಡನೇ ಸುತ್ತಿನಲ್ಲಿ ತೀರ್ಪುಗಾರರಿಂದ ಪರಿಪೂರ್ಣ 10 ಅಂಕಗಳನ್ನು ಪಡೆದರು. ಮೂರನೇ ಸುತ್ತಿನಲ್ಲಿ ಮೂವರು ತೀರ್ಪುಗಾರರಿಂದ 9 ಅಂಕಗಳು ಮತ್ತು ಇಬ್ಬರು ತೀರ್ಪುಗಾರರಿಂದ 10 ಅಂಕಗಳನ್ನು ಪಡೆದರು. ಪಂದ್ಯದ ಅಂತ್ಯದ ವೇಳೆಗ ಅವರ ಸ್ಕೋರ್ 29, 30, 29,30, 29 ಆಗಿತ್ತು. ಅಂತಿಮವಾಗಿ ಪಂದ್ಯವನ್ನು 5-0 ಅಂತರದಿಂದ ಗೆದ್ದುಕೊಂಡರು.
ಲೊವ್ಲಿನಾ ಎಲ್ಲಾ ಐವರು ತೀರ್ಪುಗಾರರಿಂದ ಅತ್ಯುತ್ತಮ ಅಂಕಗಳನ್ನು ಪಡೆದರು, ನೆದರ್ಲೆಂಡ್ಸ್‌ನ ಸ್ಯಾಮ್ ಡುನಾರ್ 30ಕ್ಕೆ 30 ಅಂಕಗಳನ್ನು ನೀಡಿದರೇ, ಹಂಗೇರಿಯ ವೆರೋನಿಕಾ ಕೂಡ ಪೂರ್ಣ 30 ಅಂಕಗಳನ್ನು ನೀಡಿದರು. ಇದಲ್ಲದೇ ಅರ್ಜೆಂಟೀನಾದ ರಾಬರ್ಟೊ ಫೆರ್ನಾಂಡೊ ಸೆವಾ ಮತ್ತು ಕಜಕಿಸ್ತಾನದ ಯೆರ್ಮೆಕ್ ಸುಯೆನಿಶ್ ಮತ್ತು ಇರಾನ್‌ನ ತೀರ್ಪುಗಾರ ಹಘಿಘಿ ಸಬೆತ್ ಬಾಬಕ್ ಬೋರ್ಡ್‌ಬಾರ್ 22 ಮತ್ತು 29 ಅಂಕಗಳನ್ನು ನೀಡಿದರು. ಇದೀಗ ಭಾರತದ ಸ್ಟಾರ್ ಬಾಕ್ಸರ್ ಮುಂದಿನ ಸುತ್ತಿನಲ್ಲೂ ತನ್ನ ಅತ್ಯುತ್ತಮ ಪ್ರದರ್ಶನವನ್ನು ಮುಂದುವರಿಸಿ ಒಲಿಂಪಿಕ್ನಲ್ಲಿ ಭಾರತಕ್ಕೆ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.