ಕರ್ನಾಟಕ

karnataka

ETV Bharat / sports

ಆಸ್ಟ್ರೇಲಿಯಾ ಎ ವಿರುದ್ಧವೂ ಕೆ.ಎಲ್.ರಾಹುಲ್ ಫ್ಲಾಪ್ ಶೋ​!: ಸಂಕಷ್ಟದಲ್ಲಿ ಕ್ರಿಕೆಟ್​ ಭವಿಷ್ಯ - AUSTRALIA A VS INDIA A

ಆಸ್ಟ್ರೇಲಿಯಾ ಎ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಕೆ.ಎಲ್.ರಾಹುಲ್​ ಮತ್ತೆ ನಿರಾಸೆ ಮೂಡಿಸಿದ್ದಾರೆ. ​

ಕೆ ಎಲ್​ ರಾಹುಲ್​
ಕೆ.ಎಲ್.ರಾಹುಲ್​ (Getty Images)

By ETV Bharat Sports Team

Published : Nov 7, 2024, 9:53 AM IST

ಹೈದರಾಬಾದ್​: ಬಾರ್ಡರ್-ಗವಾಸ್ಕರ್ ಟ್ರೋಫಿ ಕ್ರಿಕೆಟ್ ಸಿದ್ಧತೆಯ ಭಾಗವಾಗಿ ಆಸ್ಟ್ರೇಲಿಯಾ ಎ ತಂಡದ ವಿರುದ್ಧ ಟೆಸ್ಟ್​ ಸರಣಿಗೆ ತೆರಳಿರುವ ಕೆ.ಎಲ್.ರಾಹುಲ್​ ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ.

ಮೆಲ್ಬೋರ್ನ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ-ಎ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ-ಎ ತಂಡವನ್ನು ಪ್ರತಿನಿಧಿಸುತ್ತಿರುವ ರಾಹುಲ್, ರನ್​ ಗಳಿಸುವಲ್ಲಿ ಮತ್ತೊಮ್ಮೆ ಎಡವಿದ್ದಾರೆ. ಈ ಪಂದ್ಯದಲ್ಲಿ ಆರಂಭಿಕರಾಗಿ ಕ್ರೀಸಿಗಿಳಿದ ರಾಹುಲ್, ಕೇವಲ 4ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಸ್ಕಾಟ್ ಬೋಲ್ಯಾಂಡ್ ಬೌಲಿಂಗ್​ನಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚಿತ್ತು ಅವರು ನಿರ್ಗಮಿಸಿದರು.

ಇತ್ತೀಚೆಗೆ ಮುಕ್ತಾಯಗೊಂಡ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್​ ಸರಣಿಯಲ್ಲೂ ರಾಹುಲ್​ ರನ್​ ಕಲೆಹಾಕುವಲ್ಲಿ ವಿಫಲರಾಗಿದ್ದರು. ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಕಳಪೆ ಪ್ರದರ್ಶನ ತೋರಿದ ರಾಹುಲ್, ಉಳಿದ ಎರಡು ಪಂದ್ಯಗಳಲ್ಲಿ ಬೆಂಚ್‌ಗೆ ಸೀಮಿತರಾಗಿದ್ದರು. ಏತನ್ಮಧ್ಯೆ, ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಪ್ರಕಟಗೊಂಡಿರುವ ಭಾರತ ತಂಡದಲ್ಲಿ ರಾಹುಲ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಪರಿಸ್ಥಿತಿಗೆ ಒಗ್ಗಿಕೊಳ್ಳುವ ಸಲುವಾಗಿ ಭಾರತ ತಂಡದ ಮ್ಯಾನೇಜ್‌ಮೆಂಟ್ ಬಾರ್ಡರ್-ಗವಾಸ್ಕರ್​ ಟ್ರೋಫಿಗೂ ಮೊದಲೇ ರಾಹುಲ್ ಮತ್ತು ಧ್ರುವ್ ಜುರೆಲ್ ಅವರನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸಿದೆ.

ಆದರೆ ಇಲ್ಲಿಯೂ ರಾಹುಲ್​ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ನವೆಂಬರ್ 22ರಿಂದ ಆಸೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೊರಗುಳಿಯುವ ಸಾಧ್ಯತೆ ಇರುವ ಕಾರಣ ರಾಹುಲ್‌ ಅವರನ್ನು ಓಪನರ್‌ ಆಗಿ ಕಳುಹಿಸಲು ಮ್ಯಾನೇಜ್‌ಮೆಂಟ್‌ ಬಯಸಿದೆ. ಆಸ್ಟ್ರೇಲಿಯಾ ಎ ವಿರುದ್ಧ ಕಳಪೆ ಪ್ರದರ್ಶನ ತೋರಿರುವ ರಾಹುಲ್​ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆ ವ್ಯಕ್ತವಾಗುತ್ತಿದೆ.

ಪಂದ್ಯದ ವಿವರ:ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಭಾರತ-ಎ ತಂಡ ಕೇವಲ 141 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಆಸೀಸ್ ಪರ ಮೈಕಲ್ ನೀಸರ್ 4 ವಿಕೆಟ್‌ ಪಡೆದಿದ್ದಾರೆ. ಭಾರತದ ಪರ ಧ್ರುವ್ ಜುರೆಲ್ (ಔಟಾಗದೆ 80) ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ:ರೋಹಿತ್​ ಶರ್ಮಾ ನಂತರ ಟೀಂ ಇಂಡಿಯಾದ ಮುಂದಿನ ಕ್ಯಾಪ್ಟನ್​ ಇವರೇ: ಸಿಕ್ಕಿತು ದೊಡ್ಡ ಸುಳಿವು!

ABOUT THE AUTHOR

...view details