ಹೊಬರ್ಟ್ (ಆಸ್ಟ್ರೇಲಿಯಾ):ಇಲ್ಲಿನ ಬೆಲ್ಲರೀವ್ ಓವಲ್‌ನಲ್ಲಿ ಶುಕ್ರವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಕೇವಲ 36 ಎಸೆತಗಳಲ್ಲಿ 70 ರನ್ ಮತ್ತು ಆಡಮ್ ಝಂಪಾ ಅವರ 3 ವಿಕೆಟ್ (26ಕ್ಕೆ 3) ನೆರವಿನಿಂದ ಆಸ್ಟ್ರೇಲಿಯಾ ತಂಡವು ವೆಸ್ಟ್ ಇಂಡೀಸ್ ವಿರುದ್ಧ 11 ರನ್‌ಗಳಿಂದ ಭರ್ಜರಿ ಜಯ ಸಾಧಿಸಿದೆ.
100ನೇ ಟಿ20 ಪಂದ್ಯವನ್ನು ಆಡಿದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಕೇವಲ 36 ಎಸೆತಗಳಲ್ಲಿ 70 ರನ್ ಗಳಿಸಿ ಸಂಭ್ರಮಿಸಿದರು. ಎಡಗೈ ಬ್ಯಾಟರ್ ವಾರ್ನರ್ ಮತ್ತು ಟಿಮ್ ಡೇವಿಡ್ (17 ಎಸೆತಗಳಲ್ಲಿ ಅಜೇಯ 37) ಮೊದಲ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 213-7 ತಲುಪಲು ಆಸ್ಟ್ರೇಲಿಯಾಕ್ಕೆ ಭರ್ಜರಿ ವಿಜಯದ ಅಂತ್ಯವನ್ನ ಒದಗಿಸಿದರು.
ತನ್ನ ಎರಡನೇ ಅತಿ ಹೆಚ್ಚು T20 ಮೊತ್ತವನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡವು, ಬ್ರಾಂಡನ್ ಕಿಂಗ್ (53) ಮತ್ತು ಜಾನ್ಸನ್ ಚಾರ್ಲ್ಸ್ (42) ಅವರ ಚುರುಕಾದ ಆರಂಭವನ್ನು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಏಕೆಂದರೆ ಆಡಮ್ ಝಂಪಾ ನಿರ್ಣಾಯಕ ಬೌಲಿಂಗ್ನ ಹೊಡೆತಕ್ಕೆ ವೆಸ್ಟ್ ಇಂಡೀಸ್ ನಲುಗಿ ಹೋಯಿತು. ಆಸ್ಟ್ರೇಲಿಯಾ ತಂಡವು ಎದುರಾಳಿ ತಂಡ ನೀಡಿದ ಗುರಿಯನ್ನು 20 ಓವರ್‌ಗಳಲ್ಲಿ 202-8ಕ್ಕೆ ಕಟ್ಟಿಹಾಕಿತು. ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯವು ಭಾನುವಾರ ಅಡಿಲೇಡ್‌ನಲ್ಲಿ ನಡೆಯಲಿದೆ.
ಟಿ20ಯಿಂದ ನಿವೃತ್ತಿಯಾಗುವ ಸುಳಿವು ಕೊಟ್ಟ ವಾರ್ನರ್:ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಈಗಾಗಲೇ ODI ಮತ್ತು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ. ಅವರ ಅಂತಿಮ ODI ಪ್ರದರ್ಶನವು 2023 ರಲ್ಲಿ ಆಸ್ಟ್ರೇಲಿಯಾಕ್ಕೆ ಭಾರತ ವಿರುದ್ಧದ ವಿಶ್ವಕಪ್ ವಿಜಯಕ್ಕೆ ಕಾರಣವಾಯಿತು. ಆದರೆ, ಅವರ ಟೆಸ್ಟ್ ವೃತ್ತಿಜೀವನವು ಪಾಕಿಸ್ತಾನದ ವಿರುದ್ಧ ಟೆಸ್ಟ್ ಸರಣಿಯೊಂದಿಗೆ ಮುಕ್ತಾಯಗೊಂಡಿದೆ. ಇದರಲ್ಲಿ ಒಂದು ಶತಕ ಮತ್ತು ಒಂದು ಅರ್ಧ ಶತಕವೂ ಸೇರಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ 20 ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಡೇವಿಡ್ ವಾರ್ನರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಮುಂಬರುವ ಟಿ 20 ವಿಶ್ವಕಪ್‌ನಲ್ಲಿ ಭಾಗವಹಿಸಲು ಮತ್ತು ಜಾಗತಿಕ ವೇದಿಕೆಯಲ್ಲಿ ತಮ್ಮ ಉತ್ತಮ ವೃತ್ತಿಜೀವನವನ್ನು ಕೊನೆಗೊಳಿಸಲು ಉತ್ಸುಕತೆ ತೋರಿಸಿದ್ದಾರೆ. ಕೇವಲ 36 ಎಸೆತಗಳಲ್ಲಿ 70 ರನ್‌ಗಳ ಅವರ ಅದ್ಭುತ ಇನ್ನಿಂಗ್ಸ್ ಅವರಿಗೆ ಪಂದ್ಯದ ಆಟಗಾರ ಪ್ರಶಸ್ತಿ ತಂದುಕೊಟ್ಟಿತು. ಕ್ರಿಯಾತ್ಮಕ ಮತ್ತು ಪ್ರಭಾವಿ ಆಟಗಾರನಾಗಿ ವಾರ್ನರ್ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡರು.
''ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ 20 ಪಂದ್ಯದಲ್ಲಿ ಗೆಲುವು ಸಾಧಿಸಿರುವುದು ಸಂತಸವನ್ನು ತಂದಿದೆ. ನನಗೆ ತುಂಬಾ ಒಳ್ಳೆಯ ರಿಫ್ರೆಶ್ ಅನಿಸುತ್ತಿದೆ. ನಾನು ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಬೇಕು ಎಂದುಕೊಂಡಿದ್ದೇನೆ. ಮತ್ತು ನನ್ನ ಟಿ20 ವೃತ್ತಿಜೀವನವನ್ನು ಉತ್ತಮವಾಗಿ ಕೊನೆಗೊಳಿಸಬೇಕು ಎಂಬ ಇಚ್ಛೆ ಹೊಂದಿದ್ದೇನೆ. ಅಮೆರಿಕ ಮತ್ತು ಕೆರಿಬಿಯನ್‌ನಲ್ಲಿ ನಡೆಯಲಿರುವ ಮುಂಬರುವ ಟಿ-20 ವಿಶ್ವಕಪ್‌ನಲ್ಲಿ ಆಡಲು ಬಯಸಿದ್ದೇನೆ'' ಎಂದು ವಾರ್ನರ್ ತಿಳಿಸಿದರು.
ಇದನ್ನೂ ಓದಿ:ಅಂಡರ್ 19 ವಿಶ್ವಕಪ್ ಸೆಮಿಫೈನಲ್: ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾಗೆ 1 ವಿಕೆಟ್ ರೋಚಕ ಜಯ