ನವದೆಹಲಿ : ಉತ್ತರಾಖಂಡದ ಪಿಥೋರಗಢ ಜಿಲ್ಲೆಯ ಪುಟ್ಟ ಹಳ್ಳಿಯೊಂದರ ಓಟಗಾರ ಮಾನ್ ಸಿಂಗ್ ಹಾಂಕಾಂಗ್ ಏಷ್ಯನ್ ಮ್ಯಾರಥಾನ್ನಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ಇತ್ತೀಚೆಗೆ ಭಾರತೀಯ ಸೇನೆಯಲ್ಲಿ ನೇಮಕಗೊಂಡ ಮಾನ್ಸಿಂಗ್ ಏಷ್ಯನ್ ಮ್ಯಾರಥಾನ್ ಚಾಂಪಿಯನ್‌ಶಿಪ್ 2024ರಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಇವರಿಂದಾಗಿ ಭಾರತ 73 ವರ್ಷಗಳ ನಂತರ ಏಷ್ಯನ್ ಮ್ಯಾರಥಾನ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದೆ. ಅವರು ತಮ್ಮ ಇಲ್ಲಿಯವರೆಗಿನ ಪ್ರಯಾಣದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರಶ್ನೆ- ನಿಮ್ಮ ಆರಂಭಿಕ ಜೀವನ ಹೇಗಿತ್ತು?. ಓಟಗಾರನಾಗುವ ಆಲೋಚನೆ ನಿಮ್ಮ ಮನಸ್ಸಿಗೆ ಹೇಗೆ ಬಂದಿತು?
ಉತ್ತರ - ನಾನು ಪಿಥೋರಗಢ್ ಜಿಲ್ಲೆಯ ಬಂಗಪಾನಿ ತಹಸಿಲ್‌ನ ಮೆಟ್ಲಿ ಕುಂಡಿಯಾ ಎಂಬ ಸಣ್ಣ ಹಳ್ಳಿಯಿಂದ ಬಂದವನು. ಆರಂಭಿಕ ಜೀವನವನ್ನ ನಾನು ಹಳ್ಳಿಯಲ್ಲಿಯೇ ಕಳೆದಿದ್ದೇನೆ. ನನಗೆ ಓಡುವುದು ತುಂಬಾ ಇಷ್ಟವಾಗಿತ್ತು. ನಮ್ಮ ಗ್ರಾಮ ಹೆಚ್ಚಾಗಿ ಗುಡ್ಡಗಾಡು ಪ್ರದೇಶವಾಗಿದ್ದು, ಅಲ್ಲಿ ರಸ್ತೆಯೇ ಇರಲಿಲ್ಲ. ರಸ್ತೆಯನ್ನು ತಲುಪಲು 10 ರಿಂದ 12 ಕಿಲೋಮೀಟರ್ ನಡೆಯಬೇಕಿತ್ತು. ಶಾಲೆಯೂ ಮೂರು-ನಾಲ್ಕು ಕಿಲೋಮೀಟರ್ ದೂರದಲ್ಲಿತ್ತು. ಅಲ್ಲಿಗೆ ಪ್ರತಿದಿನ ಹೋಗುತ್ತಿದ್ದರಿಂದ ನನ್ನ ಕಾಲುಗಳ ಬಲವನ್ನು ಹೆಚ್ಚಿಸಿತು.
ಪ್ರಶ್ನೆ- ನಿಮ್ಮ ಓಟ ಶುರುವಾಗಿದ್ದು ಎಲ್ಲಿ? ಯಶಸ್ಸು ಸಾಧಿಸಿದ್ದು ಹೇಗೆ?
ಉತ್ತರ - ಸೇನೆಗೆ ಸೇರಿದ ನಂತರ ಹೆಚ್ಚು ಓಡತೊಡಗಿದೆ. ಓಟಗಾರನಾಗುವ ಯೋಚನೆ ನನ್ನ ಮನದಲ್ಲಿ ಮೂಡಿದ್ದು ಅಲ್ಲಿಂದಲೇ. ಇದಾದ ನಂತರ 2011ರಿಂದ ತರಬೇತಿ ಆರಂಭಿಸಿ 2012ರಿಂದ ಸ್ಪರ್ಧೆಗಳಲ್ಲಿ ಪದಕ ಗೆಲ್ಲಲು ಆರಂಭಿಸಿದೆ. ಹಾಂಕಾಂಗ್‌ನಲ್ಲಿ ನಡೆದ ಏಷ್ಯನ್ ಮ್ಯಾರಥಾನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದಿರುವುದಕ್ಕೆ ತುಂಬಾ ಸಂತೋಷವಾಗಿದೆ. ಪ್ರತಿ ದಿನವೂ ವಿಭಿನ್ನ ತಾಲೀಮು ಇರುತ್ತದೆ. ಮ್ಯಾರಥಾನ್‌ಗೆ ಹೆಚ್ಚಿನ ಅಭ್ಯಾಸದ ಅಗತ್ಯವಿದೆ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಅವಧಿಗಳಲ್ಲಿ ಒಟ್ಟು 30-35 ಕಿಲೋ ಮೀಟರ್ ಓಟವನ್ನು ಅಭ್ಯಾಸ ಮಾಡಬೇಕಿತ್ತು.