ಪ್ಯಾರಿಸ್:ಕ್ರೀಡಾ ಗ್ರಾಮ ಪ್ರವೇಶಿಸಲು ತನಗೆ ಮಾತ್ರ ಇದ್ದ ಅನುಮತಿ ಪತ್ರವನ್ನು (ಅಕ್ರೆಡೇಷನ್ ಕಾರ್ಡ್) ತನ್ನ ಸಹೋದರಿಗೆ ನೀಡಿ ನಿಯಮ ಉಲ್ಲಂಘಿಸಿದ ಭಾರತದ ಕುಸ್ತಿಪಟು ಅಂತಿಮ್ ಪಂಘಲ್ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ (ಐಒಎ) ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಶಿಸ್ತು ತೋರಿದ ಮಹಿಳಾ ಜಟ್ಟಿ ಮತ್ತು ಅವರ ತಂಡಕ್ಕೆ ಕುಸ್ತಿ ಅಖಾಡದಿಂದ ಮೂರು ವರ್ಷ ನಿಷೇಧ ಹೇರುವ ಸಾಧ್ಯತೆ ಇದೆ.
ಅಂತಿಮ್ ಪಂಘಲ್ ವರ್ತನೆ ಭಾರತೀಯ ಒಲಿಂಪಿಕ್ ಸಂಸ್ಥೆಗೆ ಮುಜುಗರ ತಂದಿದೆ. ತರಬೇತುದಾರರು ಸೇರಿದಂತೆ ಅವರ ತಂಡದ ಎಲ್ಲರನ್ನೂ ವಿಚಾರಣೆ ನಡೆಸಿ ಪ್ರತಿಯೊಬ್ಬರ ಮೇಲೂ ಮೂರು ವರ್ಷಗಳ ನಿಷೇಧವನ್ನು ಹೇರುವ ಬಗ್ಗೆ ಚರ್ಚಿಸಲಾಗಿದೆ ಎಂದು ಭಾರತೀಯ ತಂಡದ ಮೂಲಗಳು ತಿಳಿಸಿವೆ.
ಇಂದು ಸಂಜೆ ಕುಸ್ತಿಪಟು ಮತ್ತವರ ತಂಡ ಪ್ಯಾರಿಸ್ನಿಂದ ಭಾರತಕ್ಕೆ ಪ್ರಯಾಣ ಬೆಳೆಸಲಿದೆ. ಅವರು ಭಾರತಕ್ಕೆ ಬಂದಿಳಿದ ಬಳಿಕ, ಈ ಬಗ್ಗೆ ವಿಚಾರಣೆ ನಡೆಯಲಿದೆ. ನಂತರ ನಿರ್ಧಾರ ಪ್ರಕಟವಾಗಲಿದೆ ಎಂದು ತಿಳಿದುಬಂದಿದೆ.
ಭಾರತೀಯ ಕುಸ್ತಿಪಟುವಿನ ಶಿಸ್ತು ಉಲ್ಲಂಘನೆ ಬಗ್ಗೆ ಫ್ರೆಂಚ್ ಅಧಿಕಾರಿಗಳು ಭಾರತದ ಕ್ರೀಡಾ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ಈ ವರ್ತನೆಯಿಂದ ಅವರನ್ನು ಕ್ರೀಡಾ ಗ್ರಾಮದಿಂದ ಹೊರಹಾಕಲಾಗಿದೆ. ಅವರ ಮೇಲೆ ಕಠಿಣ ಕ್ರಮ ಜರುಗುವ ಸಾಧ್ಯತೆ ಹೆಚ್ಚಿದೆ ಎಂದು ಐಒಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುಸ್ತಾಗಿದ್ದ ಕಾರಣ ಸಹೋದರಿಯನ್ನು ಕಳುಹಿಸಿದ್ದೆ:ಒಲಿಂಪಿಕ್ಸ್ ಕ್ರೀಡಾ ಗ್ರಾಮದಿಂದ ಹೊರದಬ್ಬಿಸಿಕೊಂಡಿರುವ ಕುಸ್ತಿಪಟು ಅಂತಿಮ್ ಪಂಘಲ್ ಅವರು ಮಾಧ್ಯಮವೊಂದರ ಜೊತೆ ಮಾತನಾಡಿದ್ದು, "ನಾನು ಯಾವುದೇ ತಪ್ಪು ಮಾಡುವ ಉದ್ದೇಶ ಹೊಂದಿರಲಿಲ್ಲ. ಮೊದಲ ಪಂದ್ಯದಲ್ಲಿ ಸೋತ ಬಳಿಕ ಸುಸ್ತಾಗಿದ್ದೆ. ಹೀಗಾಗಿ ನನ್ನ ವಸ್ತುಗಳನ್ನು ತೆಗೆದುಕೊಂಡು ಬರಲು ಸಹೋದರಿಗೆ ಅನುಮತಿ ಪತ್ರ ನೀಡಿದ್ದೆ. ಗೊಂದಲದಿಂದಾಗಿ ಇದೆಲ್ಲಾ ನಡೆಯಿತು" ಎಂದು ಹೇಳಿದ್ದಾರೆ.
ಪೊಲೀಸ್ ಠಾಣೆಗೆ ತೆರಳಿದ ಬಗ್ಗೆ ಮಾಹಿತಿ ನೀಡಿದ ಅವರು, "ಅನುಮತಿ ಪತ್ರದ ಪರಿಶೀಲನೆಗಾಗಿ ನಾನು ಸ್ಥಳೀಯ ಪೊಲೀಸ್ ಠಾಣೆಗೆ ಹೋಗಬೇಕಾಗಿತ್ತು. ಇಂದು ನನಗೆ ಒಳ್ಳೆಯ ದಿನವಲ್ಲ. ನಾನು ಆದಲ್ಲಿ ಸೋತಿದ್ದೇನೆ. ನನ್ನ ಬಗ್ಗೆ ಏನೇನೋ ಬಹಳಷ್ಟು ಸುದ್ದಿಗಳು ಹರಡುತ್ತಿವೆ. ಇವ್ಯಾವುವೂ ನಿಜವಲ್ಲ. ನನಗೆ ತೀವ್ರ ಜ್ವರ ಇತ್ತು. ಹೀಗಾಗಿ ನನ್ನ ಸಹೋದರಿಯ ಜೊತೆಗೆ ಹೋಟೆಲ್‌ಗೆ ಹೋಗಲು ತರಬೇತುದಾರರ ಅನುಮತಿ ಪಡೆದುಕೊಂಡಿದ್ದೆ" ಎಂದಿದ್ದಾರೆ.
ಅಧಿಕಾರಿಗಳ ಅನುಮತಿ ಕೇಳಿದ್ದೆ:"ತನ್ನ ಸಹೋದರಿಯ ಜೊತೆಗೆ ಕ್ರೀಡಾ ಗ್ರಾಮ ಪ್ರವೇಶಿಸಲು ಅಲ್ಲಿನ ಅಧಿಕಾರಿಗಳ ಅನುಮತಿ ಪಡೆದುಕೊಂಡಿದ್ದೆ. ಬಳಿಕವೇ ಆಕೆ ನನ್ನೊಂದಿಗೆ ಆಟಗಾರರು ಉಳಿದುಕೊಳ್ಳುವ ಹೋಟೆಲ್ ರೂಮಿಗೆ ಬಂದಿದ್ದಳು. ಬಳಿಕ ಗೊಂದಲ ಉಂಟಾಗಿದೆ" ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ವಿನೇಶ್ ಫೋಗಟ್ ಅನರ್ಹತೆ ಬೆನ್ನಲ್ಲೆ ಮತ್ತೊಂದು ಆಘಾತ: ಶಿಸ್ತು ನಿಯಮ ಉಲ್ಲಂಘಿಸಿದ ಆಂಟಿಮ್ ಒಲಿಂಪಿಕ್ಸ್ನಿಂದ ಹೊರಕ್ಕೆ! - Paris Olympics 2024