ನವದೆಹಲಿ: ಒಲಿಂಪಿಕ್ಸ್ ಎಂಬುದು ವಿಶ್ವದ ಅತೀ ದೊಡ್ಡ ಕ್ರೀಡಾಕೂಟ. ಈ ಬಹುರಾಷ್ಟ್ರೀಯ ಕೂಟದ ಪ್ರತಿ ಸೀಸನ್ನಲ್ಲಿ 200ಕ್ಕೂ ಹೆಚ್ಚು ರಾಷ್ಟ್ರಗಳ ಕ್ರೀಡಾಪಟುಗಳು ಭಾಗವಹಿಸುತ್ತಾರೆ. ಇಂತಹ ದೊಡ್ಡ ಕ್ರೀಡೋತ್ಸವದಲ್ಲಿ ಪದಕಗಳನ್ನು ಗೆಲ್ಲುವುದು ಸುಲಭದ ಮಾತಲ್ಲ. ಆದರೆ ಇಲ್ಲೊಬ್ಬ ಕ್ರೀಡಾಪಟು ಒಂದಲ್ಲ, ಎರಡಲ್ಲ 28 ಪದಕ ಬೇಟೆಯಾಡಿದ್ದಾರೆ.
ಹೌದು, ಅಮೆರಿಕದ ಮಾಜಿ ಈಜುಗಾರ ಮೈಕೆಲ್ ಫೆಲ್ಪ್ಸ್ ತಮ್ಮ ಹೆಸರಿನಲ್ಲಿ ಯಾರೂ ಸರಿಗಟ್ಟಲಾಗದ ದಾಖಲೆ ಬರೆದಿದ್ದಾರೆ. ಒಟ್ಟು 28 ಒಲಿಂಪಿಕ್ಸ್ ಪದಕಗಳನ್ನು ಗೆದ್ದಿರುವ ಇವರ ಖಾತೆಯಲ್ಲಿ 23 ಚಿನ್ನ, 3 ಬೆಳ್ಳಿ ಹಾಗೂ 2 ಕಂಚಿನ ಪದಕಗಳಿವೆ. ಇದು ಒಲಿಂಪಿಕ್ಸ್ ಇತಿಹಾಸದಲ್ಲೇ ಆಟಗಾರನೊಬ್ಬ ಗೆದ್ದ ಅತ್ಯಧಿಕ ಪದಕಗಳು ಎಂಬ ಸಾರ್ವಕಾಲಿಕ ದಾಖಲೆ.
ಫೆಲ್ಪ್ಸ್ ಗೆದ್ದ ಚಿನ್ನದ ಪದಕಗಳ ಸಂಖ್ಯೆ ವಿಶ್ವದ 162 ದೇಶಗಳು ಒಲಿಂಪಿಕ್ಸ್‌ನಲ್ಲಿ ಗೆದ್ದ ಚಿನ್ನದ ಪದಕಗಳಿಗಿಂತ ಹೆಚ್ಚು. ಉದಾಹರಣೆಗೆ, ಭಾರತ ಒಲಿಂಪಿಕ್ ಇತಿಹಾಸದಲ್ಲಿ ಇಲ್ಲಿಯವರೆಗೆ ಒಟ್ಟು 10 ಚಿನ್ನದ ಪದಕ ಗೆದ್ದಿದೆ. ಇದು ಫೆಲ್ಪ್ಸ್ ಗೆದ್ದ 23 ಚಿನ್ನದ ಪದಕಗಳಲ್ಲಿ ಅರ್ಧಕ್ಕಿಂತಲೂ ಕಡಿಮೆ!.