ಮುಂಬೈ: ಕ್ರಿಕೆಟ್ ಪಂದ್ಯಗಳಲ್ಲಿ ಬೌಲರ್ ಒಬ್ಬನೇ 10 ವಿಕೆಟ್‌ಗಳನ್ನು ಪಡೆಯುವುದು ಸುಲಭದ ಮಾತಲ್ಲ. ಇದುವರೆಗೂ ಕ್ರಿಕೆಟ್ ಇನ್ನಿಂಗ್ಸ್ ಒಂದರಲ್ಲಿ ಎಲ್ಲ 10 ವಿಕೆಟ್‌ಗಳನ್ನು ಕಬಳಿಸಿದ ನಿದರ್ಶನಗಳು ಬಹಳ ಕಡಿಮೆ ಇವೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೂವರು ಮಾತ್ರ ಎಲ್ಲ 10 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಅದರಲ್ಲಿ ಇಂಗ್ಲೆಂಡ್‌ನ ಶ್ರೇಷ್ಠ ಬೌಲರ್ ಜಿಮ್ ಲೇಕರ್, ಭಾರತದ ಮಾಜಿ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಮತ್ತು ಎಜಾಜ್ ಪಟೇಲ್ (ನ್ಯೂಜಿಲೆಂಡ್) ಈ ಮೂವರು ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ್ದಾರೆ. ಇದೀಗ ಮುಂಬೈನ ಯುವ ಕ್ರಿಕೆಟರ್ವೊಬ್ಬರು ಈ ಸಾಧನೆ ಮಾಡಿದ್ದಾರೆ.
ಹೌದು, ಮುಂಬೈನ ಪ್ರತಿಷ್ಠಿತ ಕಂಗಾ ಲೀಗ್‌ನಲ್ಲಿ ಯುವ ಬೌಲರ್ ಶೋಯೆಬ್ ಖಾನ್ ಇನ್ನಿಂಗ್ಸ್ ಒಂದರಲ್ಲಿ 10 ವಿಕೆಟ್‌ಗಳನ್ನು ಉರುಳಿಸಿ ಈ ಸಾಧನೆ ಮಾಡಿದ್ದಾರೆ. ಎಡಗೈ ಸ್ಪಿನ್ನರ್ ಶೋಯೆಬ್ ಕಂಗಾ ಲೀಗ್ ಇ ವಿಭಾಗದಲ್ಲಿ ಗೌಡ್ ಸಾರಸ್ವತ್ ಕ್ರಿಕೆಟ್ ಕ್ಲಬ್ (ಗೌಡ ಸಾರಸ್ವತ್ ಸಿಸಿ) ಪರ ಆಡುತ್ತಿದ್ದಾರೆ. ಜಾಲಿ ಕ್ರಿಕೆಟರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 17.4 ಓವರ್‌ಗಳನ್ನು ಎಲ್ಲ 10 ವಿಕೆಟ್‌ಗಳನ್ನು ಪಡೆದು ಮಿಂಚಿದರು. ಇವರ ಈ ಸಾಧನೆ ಗಮನಸಿದ ನೆಟ್ಟಿಗರು ಭವಿಷ್ಯದ ಅನಿಲ್ ಕುಂಬ್ಳೆ ಎಂದಿದ್ದಾರೆ.
ಈ ಪಂದ್ಯದಲ್ಲಿ ಶೋಯಬ್ ಖಾನ್ ಮಾರಕ ಬೌಲಿಂಗ್ ದಾಳಿಗೆ ಜಾಲಿ ಕ್ರಿಕೆಟರ್ಸ್ ತಂಡ ಕೇವಲ 67 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಗೌಡ್ ಸಾರಸ್ವತ್ ತಂಡ ಅಂಕುರ್ ದಿಲೀಪ್‌ಕುಮಾರ್ ಸಿಂಗ್ (27*) ಅವರ ಅಜೇಯ ಬ್ಯಾಟಿಂಗ್ ನೆರವಿನಿಂದ ಆರು ವಿಕೆಟ್‌ಗೆ 69 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.