ಮಿಯಾಮಿ ಗಾರ್ಡನ್ಸ್ (ಅಮೆರಿಕ):ಲಿಯೋನೆಲ್ ಮೆಸ್ಸಿ ಅವರ ಅರ್ಜೆಂಟೀನಾ ತಂಡವನ್ನು ತಡೆದು ನಿಲ್ಲಿಸಲು ಯಾರಿಂದಲೂ ಆಗದು ಎಂಬುದನ್ನ ಮತ್ತೊಮ್ಮೆ ಸಾಬೀತಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಫುಟ್ಬಾಲ್ನಲ್ಲಿ ಅರ್ಜೆಂಟೀನಾ ಪ್ರಾಬಲ್ಯ ಮತ್ತಷ್ಟು ಹೆಚ್ಚುತ್ತಿದೆ. ಹೌದು, ಇದೀಗ ಅರ್ಜೆಂಟೀನಾ ತಂಡವು ಕೋಪಾ ಅಮೆರಿಕ 2024 ಪ್ರಶಸ್ತಿಗೆ ಮುತ್ತಕ್ಕಿದೆ.
2024 ರ ಕೋಪಾ ಅಮೆರಿಕ ಫುಟ್‌ಬಾಲ್ ಫೈನಲ್ ಪಂದ್ಯದಲ್ಲಿ ಕೊಲಂಬಿಯಾವನ್ನು ಸೋಲಿಸುವ ಮೂಲಕ ಅರ್ಜೆಂಟೀನಾ ಕೋಪಾ ಅಮೆರಿಕ ಟ್ರೋಫಿಯನ್ನು ಗೆದ್ದುಕೊಂಡಿತು. ಅರ್ಜೆಂಟೀನಾ ತಂಡಕ್ಕೆ ಲಭಿಸಿರುವ 16ನೇ ಕೊಪಾ ಅಮೆರಿಕ ಪ್ರಶಸ್ತಿ ಇದಾಗಿದೆ. ಅರ್ಜೆಂಟೀನಾ ಸತತ ಎರಡನೇ ಬಾರಿ ಕೋಪಾ ಅಮೆರಿಕ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಇದಕ್ಕೂ ಮುನ್ನ 2021ರ ಟೂರ್ನಿಯಲ್ಲಿ ಅರ್ಜೆಂಟೀನಾ ಫೈನಲ್‌ನಲ್ಲಿ ಬ್ರೆಜಿಲ್ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದಿತ್ತು.
2024ರ ಕೋಪಾ ಅಮೆರಿಕ ಫೈನಲ್ ಪಂದ್ಯವನ್ನು ಫ್ಲೋರಿಡಾದ ಹಾರ್ಡ್ ರಾಕ್ ಸ್ಟೇಡಿಯಂನಲ್ಲಿ ಸೋಮವಾರ (ಭಾರತೀಯ ಕಾಲಮಾನ) ನಡೆಯಿತು. ಫೈನಲ್ ಪಂದ್ಯ ಅತ್ಯಂತ ರೋಚಕವಾಗಿತ್ತು. ಏಕೆಂದರೆ ಗೆಲುವಿನ ಗೋಲು ಫುಟ್ ಟೈಮ್‌ನಲ್ಲಿ ಅಲ್ಲ. ಆದರೆ, ಹೆಚ್ಚುವರಿ ಸಮಯದಲ್ಲಿ ಗಳಿಸಿತು. 90 ನಿಮಿಷಗಳ ಕಾಲ ಎರಡೂ ತಂಡಗಳಿಗೆ ಗೋಲಿನ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಪಂದ್ಯವನ್ನು ಅರ್ಜೆಂಟೀನಾ 1-0 ಅಂತರದಿಂದ ಗೆದ್ದುಕೊಂಡಿತು. ಪಂದ್ಯದ ಏಕೈಕ ಗೋಲು 112ನೇ ನಿಮಿಷದಲ್ಲಿ (ಹೆಚ್ಚುವರಿ ಸಮಯ) ಗಳಿಸಿತು. ಇದನ್ನು ಅರ್ಜೆಂಟೀನಾದ ಲೌಟಾರೊ ಮಾರ್ಟಿನೆಜ್ ಗಳಿಸಿದರು. ಒಟ್ಟಾರೆ ಪಂದ್ಯಾವಳಿಯಲ್ಲಿ ಇದು ಅವರ ಐದನೇ ಗೋಲು, ಇದಕ್ಕಾಗಿ ಅವರಿಗೆ ಗೋಲ್ಡನ್ ಬೂಟ್ ಪ್ರಶಸ್ತಿ ಸಹ ನೀಡಲಾಯಿತು.