ಹೈದರಾಬಾದ್ (ತೆಲಂಗಾಣ): ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಮೇಲುಗೈ ಸಾಧಿಸಿದೆ. ಪಂದ್ಯದ ಮೊದಲ ದಿನ ಬೌಲರ್ಗಳು ಪ್ರಾಬಲ್ಯ ಮೆರೆದಿದ್ದರೆ, ಎರಡನೇ ದಿನವಾದ ಇಂದು ಬ್ಯಾಟರ್ಗಳು ಉತ್ತಮ ಪ್ರದರ್ಶನ ನೀಡಿದರು. ಇದರಿಂದ ಇಂದಿನ ದಿನದಾಟ ಅಂತ್ಯಕ್ಕೆ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 421 ರನ್ ಗಳಿಸಿ, 175 ರನ್ಗಳ ಮುನ್ನಡೆ ಸಾಧಿಸಿದೆ.
ಗುರುವಾರ ಟಾಸ್ ಗೆದ್ದಿದ್ದ ಇಂಗ್ಲೆಂಡ್ ತಂಡ 246 ರನ್ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿತ್ತು. ಬಳಿಕ ತನ್ನ ಇನ್ನಿಂಗ್ಸ್ ಶುರು ಮಾಡಿದ್ದ ರೋಹಿತ್ ಪಡೆ ದಿನದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 119 ರನ್ ಕಲೆ ಹಾಕಿತ್ತು. ನಾಯಕ ರೋಹಿತ್ (24) ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿದ್ದರು. ಮತ್ತೊಂದೆಡೆ, ಯಶಸ್ವಿ ಜೈಸ್ವಾಲ್ 70 ಎಸೆತಗಳಲ್ಲಿ 76 ರನ್ ಗಳಿಸಿ ಹಾಗೂ ಶುಭಮನ್ ಗಿಲ್ 14 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದರು.
ಇಂದು ದಿನದಾಟ ಆರಂಭವಾದ ಸ್ವಲ್ಪ ಹೊತ್ತಿನಲ್ಲಿ ಜೈಸ್ವಾಲ್ (80) ನಿರ್ಗಮಿಸಿದರು. ಇದಾದ ಬಳಿಕ ಗಿಲ್ (23) ಸಹ ಪೆವಿಲಿಯನ್ ಸೇರಿದರು. ಇದರ ನಡುವೆ ಕೆ.ಎಲ್.ರಾಹುಲ್ ಮತ್ತು ಶ್ರೇಯಸ್ ಅಯ್ಯರ್ 64 ರನ್ಗಳ ಜೊತೆಯಾಟ ನೀಡಿದರು. ಅಯ್ಯರ್ (35) ಔಟಾದ ಬಳಿಕ ಬಂದ ರವೀಂದ್ರ ಜಡೇಜಾ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೇ, ರಾಹುಲ್ ಅವರಿಗೆ ಜಡೇಜಾ ಉತ್ತಮ ಸಾಥ್ ನೀಡಿದರು. ಈ ಜೋಡಿ 5ನೇ ವಿಕೆಟ್ಗೆ 74 ಬಾಲ್ಗಳಲ್ಲೇ 65 ರನ್ಗಳನ್ನು ಬಾರಿಸಿತು.