Vaibhav Suryavanshi: 13 ವರ್ಷದ ವೈಭವ್ ಸೂರ್ಯವಂಶಿ ಇತ್ತೀಚಿಗೆ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದರು. ಹರಾಜಿನಲ್ಲಿ ಮಾರಾಟವಾದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ಇದಕ್ಕೆ ಕಾರಣ. ಬಿಹಾರದ ಸಮಸ್ತಿಪುರದ ಈ ಬಾಲಕ 1.10 ಕೋಟಿ ರೂ.ಗೆ ಹರಾಜಾಗಿದ್ದಾರೆ. ರಾಜಸ್ಥಾನ್ ರಾಯಲ್ಸ್ ಇವರನ್ನು ಖರೀದಿಸಿದೆ.
ಆದರೆ, ಈಗ ಕ್ರಿಕೆಟ್ ಅಭಿಮಾನಿಗಳು ವೈಭವ್ ವಯಸ್ಸಿನ ಕುರಿತು ಚರ್ಚಿಸುತ್ತಿದ್ದಾರೆ. ಐಪಿಎಲ್‌ನಲ್ಲಿ ಆಡಲು ವಯಸ್ಸಿನ ಮಿತಿ ಇದೆಯೇ? ಎಂದು ಅವರು ಕೇಳುತ್ತಿದ್ದಾರೆ. ಐಪಿಎಲ್‌ನಲ್ಲಿ ಅಧಿಕೃತವಾಗಿ ಆಡಲು ಕನಿಷ್ಠ ವಯಸ್ಸಿನ ಅವಶ್ಯಕತೆ ಇಲ್ಲ. ಆಟಗಾರರ ಲಭ್ಯತೆಯ ನಿರ್ಧಾರಗಳನ್ನು ಫ್ರಾಂಚೈಸಿಗಳ ವಿವೇಚನೆಗಳಿಗೆ ಬಿಡಲಾಗುತ್ತದೆ.
ಪ್ರಸ್ತುತ 13 ವರ್ಷ, 8 ತಿಂಗಳ ವಯಸ್ಸಿನ ವೈಭವ್ ಸೂರ್ಯವಂಶಿ, 2025ರ ಐಪಿಎಲ್ ಸೀಸನ್ನ ಆರಂಭದ ವೇಳೆಗೆ 14 ವರ್ಷಕ್ಕೆ ಕಾಲಿಡಲಿದ್ದಾರೆ. ಮುಂದಿನ ಸೀಸನ್ನಲ್ಲಿ ರಾಜಸ್ಥಾನ ತಂಡ ಅವರನ್ನು ಕಣಕ್ಕಿಳಿಸುವ ಸಾಧ್ಯತೆಗಳು ತೀರಾ ಕಡಿಮೆ. ಆದರೆ ರಾಜಸ್ಥಾನದ ಕೋಚಿಂಗ್ ತಂಡದಲ್ಲಿ ರಾಹುಲ್ ದ್ರಾವಿಡ್ ಮತ್ತು ಕುಮಾರ ಸಂಗಕ್ಕಾರ ಅವರಂಥ ದಿಗ್ಗಜ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್‌ನಲ್ಲಿ ತೊಡಗಿಸಿಕೊಂಡಿರುವುದು ವೈಭವ್ ವೃತ್ತಿಜೀವನಕ್ಕೆ ತುಂಬಾ ಸಹಕಾರಿಯಾಗಲಿದೆ.