ತಿರುಮಲ, ಆಂಧ್ರ ಪ್ರದೇಶ: ಪ್ರಸಿದ್ಧ ತಿರುಪತಿಯ ತಿಮ್ಮಪ್ಪನ್ನು ದರ್ಶನಕ್ಕೆ ಮೂಲೆ ಮೂಲೆಯಿಂದ ಲಕ್ಷಾಂತರ ಮಂದಿ ಭಕ್ತರು ಪ್ರತಿ ನಿತ್ಯ ಆಗಮಿಸುತ್ತಾರೆ. ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ. ಹೇಗಾದರೂ ಸರಿ ವರ್ಷಕ್ಕೊಮ್ಮೆಯಾದರೂ ತಿರುಮಲಕ್ಕೆ ಭೇಟಿ ನೀಡಿ ಪುನೀತರಾಗಬೇಕೆಂದು ಹಂಬಲಿಸುವವರು ಕೋಟ್ಯಂತರ ಭಕ್ತರಿದ್ದಾರೆ.
ದೇಶ-ವಿದೇಶಗಳಿಂದ ಭಕ್ತರನ್ನು ತನ್ನ ಬಳಿ ಕರೆಸಿಕೊಳ್ಳುವ ತಿರುಪತಿ ತಿಮ್ಮಪ್ಪ ಹೇಗೆ ಕಾಣುತ್ತಾನೆ? ಪೂಜೆ-ಪುನಸ್ಕಾರಗಳು ಹೇಗೆಲ್ಲಾ ನಡೆಯುತ್ತವೆ? ಸಮೀಪಕ್ಕೆ ತೆರಳಿ ದೇವನನ್ನು ಕಾಣಬಹುದಾ? ಬೆಳಗಿನ ಪೂಜೆ ಯಾವುದು?, ಮಧ್ಯಾಹ್ನ ಪೂಜೆ ಪೂಜೆ ಯಾವುದು?, ರಾತ್ರಿ ನಡೆಯುವ ಪೂಜೆ ಯಾವುದು? ಇವುಗಳನ್ನು ಕಾಣುವ ಆಸೆಯೇ? ಅರ್ಚಕರೊಂದಿಗೆ ನಾವು ಸಹ ದೇವನ ಪೂಜೆ - ಪುನಸ್ಕಾರ, ಸೇವೆಗಳಲ್ಲಿ ಪಾಲ್ಗೊಳ್ಳಬಹುದಾ? ಹೌದು, ಮಾಡಬಹುದು. ಬೆಳಗಿನಿಂದ ಸಂಜೆಯವರೆಗೂ ನಡೆಯವ ಈ ಪೂಜಾ ಸೇವೆಗಳನ್ನು ನಾವೂ ಕೂಡ ಕಣ್ತುಂಬಿಕೊಳ್ಳಬಹುದು. ಎಲ್ಲವನ್ನು ಅನುಗ್ರಹಿಸುವ, ಇಷ್ಟಾರ್ಥಗಳನ್ನು ನೆರವೇರಿಸುವ ಶಕ್ತಿದಾತನೆಂದು ನಂಬಿರುವ ತಿರುಪತಿಯ ಶ್ರೀ ವೆಂಕಟೇಶ್ವರ ದರ್ಶನ ಮಾಡಲು ನೀವೇನಾದರೂ ಪ್ಲಾನ್ ಮಾಡಿಕೊಂಡಿದ್ದರೆ ಮೊದಲು ಒಂದು ಕೋಟಿ ರೂಪಾಯಿ ಬೆಲೆಯ ಟಿಕೆಟ್ ಖರೀದಿಸಿ!
ಒಂದು ಕೋಟಿ ಟಿಕೆಟ್ ಖರೀದಿಸಿದರೆ ಏನೆಲ್ಲ ಸೇವೆ ಲಭ್ಯ?:ತಿರುಪತಿ ತಿಮ್ಮಪ್ಪನ ಸರ್ವದರ್ಶನ ಮತ್ತು ದಿವ್ಯ ದರ್ಶನದ ಹೊರತಾಗಿ, ದೈನಂದಿನ ಮತ್ತು ವಾರದ ಪೂಜೆಗಳು ಹಾಗೂ ಅನೇಕ ವಿಶೇಷ ಸೇವೆಗಳು ನಡೆಯುತ್ತವೆ. ಅವುಗಳಲ್ಲಿ ಅತ್ಯಂತ ವಿಶೇಷವಾದದ್ದು ಬೆಳಗಿನ ಸೇವೆ. ವೈಖಾನಸ ಆಗಮ ಪ್ರಕಾರ ಶ್ರೀಹರಿಗೆ ಅನೇಕ ಕೈಂಕರ್ಯಗಳನ್ನು ನಿಯಮಿತವಾಗಿ ಮಾಡಲಾಗುತ್ತದೆ. ಬೆಳಗ್ಗೆ ಸುಪ್ರಭಾತದಿಂದ ಸಂಜೆ ಸಹಸ್ರ ದೀಪಾಲಂಕಾರ ಸೇವೆಯವರೆಗೆ ನಡೆಯುವ ಪೂಜೆಗಳನ್ನು ನೋಡಲು ಅನೇಕ ಭಕ್ತರು ಕಾತರರಾಗಿರುತ್ತಾರೆ. ಪ್ರತಿ ಸೇವೆಗೂ ಕೂಡ ಪ್ರತ್ಯೇಕ ಟಿಕೆಟ್‌ಗಳಿವೆ. ಅದಲ್ಲದೆ, "ಕೌಸಲ್ಯಾ ಸುಪ್ರಜಾ ರಾಮ ಪೂರ್ವ ಸಂಧ್ಯಾ ಪ್ರವರ್ತತೇ" ಎಂದು ಹೇಳುವ ಮೂಲಕ ಸ್ವಾಮಿ ಸುಪ್ರಭಾತದ ಸೇವೆಯಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಟಿಟಿಡಿ ಒದಗಿಸುತ್ತಿದೆ. ರಾತ್ರಿಯ ಏಕಾಂತ ಸೇವೆಯವರೆಗೂ ಉದಯಾಸ್ತಮಾನ ಸರ್ವಸೇವೆಗಳ (ಯುಎಸ್‌ಎಸ್‌ಇಎಸ್) ರೂಪದಲ್ಲಿ ಭಕ್ತರು ಶ್ರೀನಿವಾಸನ ಅನುಗ್ರಹಕ್ಕೆ ಪಾತ್ರರಾಗಬಹುದು.
ನೀಡುವುದು ಹೇಗೆ:1980ರ ದಶಕದಲ್ಲಿ ಮೊದಲು ಆರಂಭವಾದ ಈ ಸೇವಾ ಟಿಕೆಟ್‌ಗಳನ್ನು ಹೆಚ್ಚಿನ ಪೈಪೋಟಿ ಹಿನ್ನೆಲೆಯಲ್ಲಿ ನಿಲ್ಲಿಸಲಾಯಿತು. ಆ ಬಳಿಕ ಮತ್ತೆ 2021ರಲ್ಲಿ ಟಿಟಿಡಿ ಈ ಟಿಕೆಟ್ ಸೌಲಭ್ಯ ಪುನಾರಂಭಿಸಿತು. ಶ್ರೀ ಪದ್ಮಾವತಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ದೇಣಿಗೆ ನೀಡುವ ಭಕ್ತರಿಗೆ ಈ ಉದಯಾಸ್ತಮಾನ ಸೇವಾ ಟಿಕೆಟ್‌ಗಳನ್ನು ನೀಡುವ ನಿರ್ಣಯವನ್ನು ಅಂದಿನ ಟಿಟಿಡಿಯ ಟ್ರಸ್ಟಿಗಳ ಮಂಡಳಿಯು ಅಂಗೀಕರಿಸಿತು. ವಾರದ ಆರು ದಿನಗಳಲ್ಲಿ ಈ ಸೇವಾ ಟಿಕೆಟ್ಗಳ ಬೆಲೆ 1 ಕೋಟಿ ರೂ.ಗಳಾಗಿದ್ದರೆ, ಶುಕ್ರವಾರ ಮಾತ್ರ ಒಂದೂವರೆ ಕೋಟಿ ರೂ. ಇದೆ. ಪ್ರಸ್ತುತ 347 ಸೇವಾ ಟಿಕೆಟ್‌ಗಳು ಲಭ್ಯವಿದೆ. ಶುಕ್ರವಾರದ ಎಲ್ಲ ಟಿಕೆಟ್‌ಗಳನ್ನು ಈಗಾಗಲೇ ಭಕ್ತರು ಕಾಯ್ದಿರಿಸಿದ್ದಾರೆ.