ನವದೆಹಲಿ: ಗಾಜಾದಲ್ಲಿ ಒತ್ತೆಯಾಳಾಗಿ ಉಳಿದುಕೊಂಡಿರುವ ಇಸ್ರೇಲಿಗರ ಜೀವ ರಕ್ಷಣೆಗಿಂತ ಹೆಚ್ಚಾಗಿ ಗಾಜಾ ಮತ್ತು ಈಜಿಪ್ಟ್ ನಡುವಿನ ಗಡಿಯಲ್ಲಿರುವ ಆಯಕಟ್ಟಿನ ಕಾರಿಡಾರ್ನಲ್ಲಿ ಇಸ್ರೇಲಿ ಪಡೆಗಳ ನಿಯೋಜನೆಗೆ ಹೆಚ್ಚಿನ ಆದ್ಯತೆ ನೀಡಿದ್ದಕ್ಕಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲ್ ಒತ್ತೆಯಾಳುಗಳ ಕುಟುಂಬಗಳು ಮತ್ತು ತಮ್ಮದೇ ಸರ್ಕಾರದ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಈ ವಾರದ ಆರಂಭದಲ್ಲಿ ನಡೆದ ಇಸ್ರೇಲ್ ಭದ್ರತಾ ಕ್ಯಾಬಿನೆಟ್ ಸಭೆಯಲ್ಲಿ, ಗಾಜಾ ಮತ್ತು ಈಜಿಪ್ಟ್ ನಡುವಿನ ಗಡಿ ಉದ್ದಕ್ಕೂ ಹಾದುಹೋಗುವ ಫಿಲಡೆಲ್ಫಿ ಕಾರಿಡಾರ್ನಲ್ಲಿ ಇಸ್ರೇಲಿ ಯೋಧರ ನಿಯೋಜನೆಯನ್ನು ಮುಂದುವರಿಸುವ ನಿರ್ಧಾರದ ವಿಷಯದಲ್ಲಿ ನೆತನ್ಯಾಹು ಮತ್ತು ಗ್ಯಾಲಂಟ್ ಅವರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆದಿದೆ.
ಕ್ಯಾಬಿನೆಟ್ ಸಭೆಯಲ್ಲಿ ನಡೆದಿದ್ದಾದರೂ ಏನು?: ಚಾನೆಲ್ 12 ಗೆ ಸೋರಿಕೆಯಾದ ಸಭೆಯ ಪ್ರತಿಲೇಖನವನ್ನು ಉಲ್ಲೇಖಿಸಿ, ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಸಿದ್ಧಪಡಿಸಿದ ನಕ್ಷೆಗಳ ಸರಣಿಯ ಬಗ್ಗೆ ನೆತನ್ಯಾಹು ಉನ್ನತ ಮಂತ್ರಿ ಸಂಸ್ಥೆಯ ಮತವನ್ನು ಕೇಳಿದಾಗ ತೀವ್ರ ಮಾತಿನ ಚಕಮಕಿ ನಡೆಯಿತು ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ. ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆಗಾಗಿ ಜಾರಿಯಾಗಿದ್ದ ಪ್ರಥಮ ಕದನ ವಿರಾಮದ ಆರು ವಾರಗಳ ಅವಧಿಯಲ್ಲಿ ಇಸ್ರೇಲ್ ಪಡೆಗಳು ಈ ಕಾರಿಡಾರ್ನಲ್ಲಿ ನಿಯೋಜನೆಯಾಗಿದ್ದನ್ನು ತೋರಿಸುವ ನಕ್ಷೆ ಇವಾಗಿವೆ.
ಗಾಜಾದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಮತ್ತಷ್ಟು ತೀವ್ರವಾಗುತ್ತಿರುವ ಮಧ್ಯೆ ನೆತನ್ಯಾಹು ಮತ್ತು ಭದ್ರತಾ ಪಡೆಗಳ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತಿರುವುದಕ್ಕೆ ಇದು ಇತ್ತೀಚಿನ ಉದಾಹರಣೆಯಾಗಿದೆ. ಇಸ್ರೇಲ್ ದಾಳಿಯಲ್ಲಿ ಈವರೆಗೆ 41,000ಕ್ಕೂ ಅಧಿಕ ಪ್ಯಾಲೆಸ್ಟೈನಿಯರು ಬಲಿಯಾಗಿದ್ದಾರೆ. ನೆತನ್ಯಾಹು ಅವರ ಕಠಿಣ ನಿಲುವಿನಿಂದ 100 ಕ್ಕೂ ಹೆಚ್ಚು ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆಗಾಗಿ ನಡೆಯುತ್ತಿರುವ ಶಾಂತಿ ಮಾತುಕತೆಗಳಿಗೆ ಹಿನ್ನಡೆಯಾಗಲಿದೆ ಎಂಬುದು ಯೋವ್ ಗ್ಯಾಲಂಟ್ ಮತ್ತು ಇತರ ಸೇನಾಧಿಕಾರಿಗಳ ಅಭಿಪ್ರಾಯವಾಗಿದೆ.
"ಫಿಲಡೆಲ್ಫಿ ಕಾರಿಡಾರ್ನಲ್ಲಿ ಇಸ್ರೇಲ್ ಸೇನಾಪಡೆಗಳ ನಿಯೋಜನೆಯನ್ನು ಹಮಾಸ್ ಒಪ್ಪಲಾರದು ಮತ್ತು ಇದೇ ಕಾರಣದಿಂದ ಕದನ ವಿರಾಮ ಮಾತುಕತೆಗಳು ಯಶಸ್ವಿಯಾಗಲಾರವು. ಇದರ ಪರಿಣಾಮವಾಗಿ ಒತ್ತೆಯಾಳುಗಳನ್ನು ಬಿಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ" ಎಂದು ಗ್ಯಾಲಂಟ್ ಸಚಿವರಿಗೆ ಹೇಳಿದ್ದಾರೆ ಎಂದು ಚಾನೆಲ್ 12 ವರದಿಯನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ಕಳೆದ ವಾರ ಕೈರೋದಲ್ಲಿ ಈಜಿಪ್ಟ್, ಯುಎಸ್ ಮತ್ತು ಕತಾರ್ ಒಳಗೊಂಡ ಮಧ್ಯವರ್ತಿಗಳ ಮುಂದೆ ಐಡಿಎಫ್ ಪ್ರಸ್ತುತಪಡಿಸಿದ ನಕ್ಷೆಗಳ ಬಗ್ಗೆ ಒಪ್ಪಿಗೆ ನೀಡುವಂತೆ ಕಾರ್ಯತಂತ್ರದ ವ್ಯವಹಾರಗಳ ಸಚಿವ ರಾನ್ ಡೆರ್ಮರ್ ಸಭೆಯಲ್ಲಿ ಮನವಿ ಮಾಡಿದರು. ಆದರೆ, ಈ ನಕ್ಷೆಗಳು ಸೇನಾ ಪಡೆಯ ನಿಲುವಿಗೆ ವಿರುದ್ಧವಾಗಿವೆ ಎಂದು ಗ್ಯಾಲಂಟ್ ಆಕ್ಷೇಪಿಸಿದರು.
"ಒಂದು ವೇಳೆ ಫಿಲಡೆಲ್ಫಿಯನ್ನು ತೊರೆಯುವ ಅಥವಾ ಒತ್ತೆಯಾಳುಗಳನ್ನು ಬಿಡಿಸಿಕೊಳ್ಳುವ ಪೈಕಿ ಯಾವುದಾದರೂ ಒಂದು ಆಯ್ಕೆ ಮಾಡುವಂತೆ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವರ್ ಪ್ರಸ್ತಾಪವಿಟ್ಟರೆ ನೀವು ಏನು ಮಾಡುವಿರಿ?" ಎಂದು ನೆತನ್ಯಾಹು ಅವರನ್ನು ಯೋವ್ ಗ್ಯಾಲಂಟ್ ಪ್ರಶ್ನಿಸಿದರು.
ಇದಕ್ಕುತ್ತರಿಸಿದ ನೆತನ್ಯಾಹು "ನಾನು ಫಿಲಡೆಲ್ಫಿ ವಶದಲ್ಲಿರಿಸಿಕೊಳ್ಳುವುದನ್ನೇ ಆಯ್ಕೆ ಮಾಡುವೆ" ಎಂದರು. ಕ್ಯಾಬಿನೆಟ್ ಮತದಾನದಲ್ಲಿ ನೆತನ್ಯಾಹು ಅವರ ಪ್ರಸ್ತಾಪವನ್ನು ಎಂಟು ಮತಗಳಿಂದ ಅಂಗೀಕರಿಸಲಾಯಿತು. ಓರ್ವ ಸದಸ್ಯ ಗೈರುಹಾಜರಾಗಿದ್ದರು. ಆದರೆ ಫಿಲಡೆಲ್ಫಿ ಕಾರಿಡಾರ್ನಲ್ಲಿ ಇಸ್ರೇಲಿ ಪಡೆಗಳ ಉಪಸ್ಥಿತಿಯನ್ನು ಹಮಾಸ್ ಮತ್ತು ಮಧ್ಯವರ್ತಿ ಈಜಿಪ್ಟ್ ಎರಡೂ ವಿರೋಧಿಸಿವೆ.
ನೆತನ್ಯಾಹು ನಿಲುವಿಗೆ ಒತ್ತೆಯಾಳುಗಳ ಕುಟುಂಬಗಳ ಪ್ರತಿಕ್ರಿಯೆ ಹೇಗಿದೆ?:ನೆತನ್ಯಾಹು ಅವರ ನಿಲುವು ಮಾಧ್ಯಮಗಳಲ್ಲಿ ಪ್ರಕಟವಾದ ನಂತರ, ಒತ್ತೆಯಾಳುಗಳ ಕುಟುಂಬಗಳು ಆಘಾತ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದು, ಫಿಲಡೆಲ್ಫಿ ಕಾರಿಡಾರ್ನಲ್ಲಿ ಇಸ್ರೇಲಿ ಪಡೆಗಳ ಉಪಸ್ಥಿತಿಗಾಗಿ ಇಸ್ರೇಲಿ ಒತ್ತೆಯಾಳುಗಳ ಜೀವಗಳನ್ನು ಬಲಿ ಕೊಡುವುದಾಗಿ ಅವರು ಬಹಿರಂಗವಾಗಿ ಘೋಷಿಸಿ ಬಿಡಲಿ ಎಂದು ಅಸಮಾಧಾನ ಹೊರಹಾಕಿವೆ.
"ಕ್ಯಾಬಿನೆಟ್ ಸಭೆಯಲ್ಲಿ ನಡೆದ ಚರ್ಚೆಗಳು ಪ್ರತಿಯೊಬ್ಬ ಇಸ್ರೇಲಿ ನಾಗರಿಕ ತಲ್ಲಣಗೊಳ್ಳುವಂತಿವೆ. " ಎಂದು ಒತ್ತೆಯಾಳು ಮತ್ತು ಕಾಣೆಯಾದ ಕುಟುಂಬಗಳ ಸಂಘಟನೆ ಹೇಳಿಕೆಯಲ್ಲಿ ತಿಳಿಸಿದೆ.
"ಯಾವುದೋ ಶನಿವಾರದಂದು ಬೆಳಗ್ಗೆ ನೀವು ಹಾಸಿಗೆಯಲ್ಲಿ ಮಲಗಿರುವಾಗ, ಪೈಜಾಮಾ ಧರಿಸಿದ ನಿಮ್ಮನ್ನು ಉಗ್ರರು ಅಪಹರಿಸಿಕೊಂಡು ಹೋದರೆ ನಿಮ್ಮನ್ನು ರಕ್ಷಿಸುವ ಬದಲಾಗಿ ಪ್ರಧಾನಿ ನೆತನ್ಯಾಹು ತಮ್ಮ ಕುರ್ಚಿ ಉಳಿಸಿಕೊಳ್ಳಲು ಆದ್ಯತೆ ನೀಡುತ್ತಾರೆ ಎಂಬುದು ಈಗ ಎಲ್ಲರಿಗೂ ಗೊತ್ತಾಗುತ್ತಿದೆ" ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ನೆತನ್ಯಾಹು ಅವರ ನಿಲುವುಗಳು ಜನರ ವಿರುದ್ಧ, ಇಸ್ರೇಲ್ ದೇಶದ ವಿರುದ್ಧ ಮತ್ತು ಝಿಯಾನಿಸಂ ವಿರುದ್ಧದ ಅಪರಾಧವಾಗಿವೆ ಎಂದು ಹಮಾಸ್ ಬಳಿ ಒತ್ತೆಯಾಳಾಗಿರುವ ಮಾತನ್ ಜಂಗೌಕರ್ ಅವರ ತಾಯಿ ಐನವ್ ಜಂಗೌಕರ್ ಹೇಳಿದ್ದಾರೆ. "ನೆತನ್ಯಾಹು ಮಿಸ್ಟರ್ ಸೆಕ್ಯುರಿಟಿ ಅಲ್ಲ, ಅವರು ಮಿಸ್ಟರ್ ಡೆತ್. ಅವರು ನಿಷ್ಕರುಣಿಯಾಗಿ ಶಾಂತಿ ಸಂಧಾನವನ್ನು ಹಾಳು ಮಾಡುತ್ತಿದ್ದಾರೆ" ಎಂದು ಜಂಗೌಕರ್ ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.