ಏಪ್ರಿಲ್ - ಮೇ ತಿಂಗಳಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಲಕ್ಷಾಂತರ ಮನೆಕೆಲಸಗಾರರಿಗೆ ಕನಿಷ್ಠ ವೇತನ, ಪಿಂಚಣಿ, ಆರೋಗ್ಯ ವಿಮೆ, ಹೆರಿಗೆ ಪ್ರಯೋಜನಗಳು ಮತ್ತು ಭವಿಷ್ಯ ನಿಧಿಯಂತಹ ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಯೋಚಿಸುತ್ತಿದೆ ಎಂದು ಮಾಧ್ಯಮ ವರದಿಗಳು ಬಹಿರಂಗಪಡಿಸಿವೆ.
ಇಂತಹ ಕ್ರಮವು ಸಾಮಾಜಿಕ ಭದ್ರತೆ (ಎಸ್ಎಸ್) ಸಂಹಿತೆ, 2020 ರಲ್ಲಿ ವಿವರಿಸಿದಂತೆ ಸಂಘಟಿತ (ಔಪಚಾರಿಕ) ವಲಯದಲ್ಲಿ ಅಥವಾ ಅಸಂಘಟಿತ (ಅನೌಪಚಾರಿಕ) ವಲಯದಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಂದು ಉದ್ಯೋಗದಲ್ಲಿರುವ ಎಲ್ಲ ಉದ್ಯೋಗಿಗಳು ಮತ್ತು ಕಾರ್ಮಿಕರಿಗೆ (ಗಿಗ್ ಕಾರ್ಮಿಕರು ಮತ್ತು ಪ್ಲಾಟ್ಪಾರ್ಮ್ ಕಾರ್ಮಿಕರು ಸೇರಿದಂತೆ) ಸಾರ್ವತ್ರಿಕ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ನೀಡುವ ಉದ್ದೇಶಗಳನ್ನು ಸೂಚಿಸುತ್ತದೆ.
ಆದಾಗ್ಯೂ ಇತರ ದೇಶಗಳಿಗೆ ಹೋಲಿಸಿದರೆ ಭಾರತವು ತನ್ನ ಸಾರ್ವತ್ರಿಕ ಸಾಮಾಜಿಕ ಭದ್ರತೆಯನ್ನು ಪೂರೈಸುವ ಈ ಗುರಿಯನ್ನು ಸಾಧಿಸಲು ಬಹಳ ದೂರ ಸಾಗಬೇಕಿದೆ. ಕಳೆದ ವರ್ಷ ಡಿಸೆಂಬರ್ನಲ್ಲಿ, ದೇಶಾದ್ಯಂತ 7.58 ಮಿಲಿಯನ್ (75.8 ಲಕ್ಷ) ಉದ್ಯೋಗಿಗಳ ನೋಂದಣಿಯೊಂದಿಗೆ, ಕೇಂದ್ರ ಸರ್ಕಾರದ ಪ್ರಮುಖ ಉದ್ಯೋಗ ಪ್ರೋತ್ಸಾಹಕ ಯೋಜನೆಯಾದ ಆತ್ಮನಿರ್ಭರ ಭಾರತ್ ರೋಜಗಾರ್ ಯೋಜನೆ (ಎಬಿಆರ್ವೈ) 7.18 ಮಿಲಿಯನ್ (71.8 ಲಕ್ಷ) ಉದ್ಯೋಗಿಗಳಿಗೆ ಪ್ರಯೋಜನ ನೀಡುವ ಆರಂಭಿಕ ಗುರಿಯನ್ನು ಮೀರಿದೆ ಎಂದು ಸರ್ಕಾರ ಘೋಷಿಸಿತು.
ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಮೂಲಕ ಜಾರಿಗೆ ತರಲಾಗುತ್ತಿರುವ ಈ ಯೋಜನೆಯು ವಿವಿಧ ಕೈಗಾರಿಕೆಗಳ ಉದ್ಯೋಗದಾತರ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ ಮತ್ತು ಹೆಚ್ಚು ಸಂಖ್ಯೆ ಕಾರ್ಮಿಕರನ್ನು ನೇಮಿಸಿಕೊಳ್ಳಲು ಅವರನ್ನು ಪ್ರೋತ್ಸಾಹಿಸುತ್ತದೆ. ಎಬಿಆರ್ವೈ ಅಡಿಯಲ್ಲಿ, ಭಾರತ ಸರ್ಕಾರವು ಎರಡು ವರ್ಷಗಳ ಅವಧಿಗೆ ಇಪಿಎಫ್ಒದ ನೌಕರರ ಪಾಲು (ವೇತನದ 12%) ಮತ್ತು ಉದ್ಯೋಗದಾತರ ಪಾಲು (ವೇತನದ 12%) ಎರಡನ್ನೂ ಅಥವಾ ಇಪಿಎಫ್ಒ ನೋಂದಾಯಿತ ಸಂಸ್ಥೆಗಳ ಉದ್ಯೋಗ ಸಾಮರ್ಥ್ಯವನ್ನು ಅವಲಂಬಿಸಿ ಉದ್ಯೋಗಿಯ ಪಾಲನ್ನು ಮಾತ್ರ ಜಮಾ ಮಾಡುತ್ತದೆ.
ಎಬಿಆರ್ವೈ ಅಡಿಯಲ್ಲಿ, ಇಪಿಎಫ್ಒನಲ್ಲಿ ನೋಂದಾಯಿಸಲಾದ ಪ್ರತಿಯೊಂದು ಸಂಸ್ಥೆ ಮತ್ತು ಅವರ ಹೊಸ ಉದ್ಯೋಗಿಗಳಿಗೆ (ತಿಂಗಳಿಗೆ 15,000 ರೂ.ಗಿಂತ ಕಡಿಮೆ ವೇತನ ಪಡೆಯುವವರು) 2020 ರ ಅಕ್ಟೋಬರ್ 1 ರಂದು ಅಥವಾ ನಂತರ ಮತ್ತು 2021 ರ ಜೂನ್ 30 ರವರೆಗೆ ಅಥವಾ ಮಾರ್ಚ್ ಮತ್ತು ಸೆಪ್ಟೆಂಬರ್ 2020 ರ ನಡುವೆ ಉದ್ಯೋಗ ಕಳೆದುಕೊಂಡವರಿಗೆ ಪ್ರಯೋಜನಗಳನ್ನು ಒದಗಿಸಲಾಗುತ್ತದೆ. ಈಗ, ಯೋಜನೆಯ ವ್ಯಾಪ್ತಿಯನ್ನು 2022 ರ ಮಾರ್ಚ್ 31 ರವರೆಗೆ ವಿಸ್ತರಿಸಲಾಗಿದೆ.
ಮಾರ್ಚ್ 31, 2022 ರವರೆಗೆ ನೋಂದಾಯಿಸಲಾದ ಫಲಾನುಭವಿಗಳು ನೋಂದಣಿಯ ದಿನಾಂಕದಿಂದ ಎರಡು ವರ್ಷಗಳವರೆಗೆ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಎಬಿಆರ್ವೈ ಅಡಿಯಲ್ಲಿ ಕೇಂದ್ರ ಸರ್ಕಾರವು 1.52 ಲಕ್ಷ ಸಂಸ್ಥೆಗಳ ಮೂಲಕ 60 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ 10,000 ಕೋಟಿ ರೂ.ಗಳನ್ನು ವಿತರಿಸಿದೆ. ವಿಶೇಷವೆಂದರೆ, ಈ ಯೋಜನೆಯು ಕೃಷಿ ಫಾರ್ಮ್ಗಳು, ಆಟೋಮೊಬೈಲ್ ಸೇವೆಗಳು, ಕ್ಯಾಂಟೀನ್ಗಳು, ಸಾಮಾನ್ಯ ವಿಮೆ, ಅಮೃತಶಿಲೆ ಗಣಿಗಳು ಮತ್ತು ಆಸ್ಪತ್ರೆಗಳಂತಹ 194 ವಿವಿಧ ಕ್ಷೇತ್ರಗಳಿಗೆ ಅನುಕೂಲ ಒದಗಿಸಿದೆ.
ಆದಾಗ್ಯೂ, ವಾಸ್ತವವಾಗಿ ಎಬಿಆರ್ವೈ ನಂಥ ಹೆಚ್ಚು ಪ್ರಚಾರ ಪಡೆದ ಯೋಜನೆಗಳು ಸಹ ಭಾರತದ 2% ಉದ್ಯೋಗಿಗಳನ್ನು ತಲುಪಲು ಸಾಧ್ಯವಾಗಿಲ್ಲ. ಹೀಗಾಗಿ ಅನೌಪಚಾರಿಕ ಕಾರ್ಮಿಕರ ಬಗ್ಗೆ ಭಾರತದ ನಿರ್ಲಕ್ಷ್ಯ ಮುಂದುವರಿಯುತ್ತಿದೆ ಎಂದು ಕಾಣಿಸುತ್ತದೆ. ಭಾರತದ ವಿಶಾಲ ಅನೌಪಚಾರಿಕ ವಲಯವನ್ನು ಒಳಗೊಂಡಿರುವ ಭಾರತೀಯ ಕಾರ್ಮಿಕ ಶಕ್ತಿಯ ಬಹುಪಾಲು ಜನರನ್ನು ಹೊರಗಿಡುವುದು ಇಡೀ ಭಾರತೀಯ ಆರ್ಥಿಕತೆಯ ಉತ್ಪಾದಕತೆಯ ಮೇಲೆ ಮಾತ್ರವಲ್ಲ, ದೇಶದಲ್ಲಿ ಬಡತನವನ್ನು ತಗ್ಗಿಸುವ ದೃಷ್ಟಿಯಿಂದಲೂ ಗಂಭೀರ ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸುತ್ತದೆ.
ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್ಒ) ಅನೌಪಚಾರಿಕ ಕಾರ್ಮಿಕರನ್ನು ಸಾಮಾಜಿಕ ಭದ್ರತೆಯ ಸೌಲಭ್ಯಗಳನ್ನು ಪಡೆಯಲಾಗದ ವ್ಯಕ್ತಿ ಎಂದು ವ್ಯಾಖ್ಯಾನಿಸಿದೆ. ಭಾರತದಲ್ಲಿ 475 ಮಿಲಿಯನ್ (47.5 ಕೋಟಿ) ಉದ್ಯೋಗಿಗಳ ಪೈಕಿ ಶೇ 91ರಷ್ಟು ಜನ ಅನೌಪಚಾರಿಕ ಉದ್ಯೋಗದಲ್ಲಿದ್ದಾರೆ. ಜಾಗತಿಕವಾಗಿ, ಉದ್ಯೋಗಸ್ಥರಲ್ಲಿ ಶೇ 58ರಷ್ಟು ಜನ 2022 ರಲ್ಲಿ ಅನೌಪಚಾರಿಕ ಉದ್ಯೋಗದಲ್ಲಿದ್ದರು. ಬೊಲಿವಿಯಾ, ಮಂಗೋಲಿಯಾ, ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಂತಹ ವಿಶ್ವದ ಅನೇಕ ಭಾಗಗಳಲ್ಲಿನ ದೇಶಗಳು ಸಾರ್ವತ್ರಿಕ ವ್ಯಾಪ್ತಿಯನ್ನು ಸಾಧಿಸಿವೆ. ಅಭಿವೃದ್ಧಿಶೀಲ ದೇಶಗಳು ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಕೇವಲ ಶೇ 7ರಷ್ಟನ್ನು ಮಾತ್ರ ಸಾಮಾಜಿಕ ರಕ್ಷಣೆಗಾಗಿ ಖರ್ಚು ಮಾಡುತ್ತವೆ. ಆದರೆ ಒಇಸಿಡಿ (ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ) ದೇಶಗಳು ಅದರ ಮೂರು ಪಟ್ಟು ಖರ್ಚು ಮಾಡುತ್ತವೆ.
ವಿಶಾಲವಾಗಿ, ಸಾಮಾಜಿಕ ಭದ್ರತೆಯು ಕಾರ್ಮಿಕರಿಗೆ ಎರಡು ರೀತಿಯ ಬೆಂಬಲವನ್ನು ಒಳಗೊಂಡಿದೆ:ಕೆಲಸ ಮಾಡಲು ಸಾಧ್ಯವಾಗದ ಅಥವಾ ವೃದ್ಧರು, ಅಂಗವಿಕಲರು ಮತ್ತು ಬಡ ವಿಧವೆಯರಂತಹ ಮೂಲ ಆದಾಯವನ್ನು ಗಳಿಸಲು ಸಾಧ್ಯವಾಗದವರಿಗೆ ಸಾಮಾಜಿಕ ನೆರವು (ವಸ್ತು ಅಥವಾ ನಗದು ರೂಪದಲ್ಲಿ); ಎರಡನೆಯದಾಗಿ ವೃದ್ಧಾಪ್ಯ ಪಿಂಚಣಿ, ಹೆರಿಗೆ ಸೌಲಭ್ಯ, ಸಾವು ಮತ್ತು ಆರೋಗ್ಯ ರಕ್ಷಣೆ ಸೇರಿದಂತೆ ಅಂಗವೈಕಲ್ಯ ಪ್ರಯೋಜನಗಳಂತಹ ಸಂಘಟಿತ ವಲಯದಲ್ಲಿ ಸಾಮಾನ್ಯವಾಗಿ ಲಭ್ಯವಿರುವ ಸುರಕ್ಷತಾ ಜಾಲದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗದ ಆದರೆ ಕೆಲಸ ಮಾಡಲು ಸಮರ್ಥರಾಗಿರುವ ಜನತೆ.