ಕರ್ನಾಟಕ

karnataka

ETV Bharat / opinion

ಪಕ್ಷಾಂತರ ನಿಷೇಧ ಕಾಯ್ದೆಯ ಯಶಸ್ಸು ಮತ್ತು ವೈಫಲ್ಯಗಳು: ವಿಶ್ಲೇಷಣೆ - Anti Defection Law - ANTI DEFECTION LAW

ಭಾರತದ ಪಕ್ಷಾಂತರ ನಿಷೇಧ ಕಾಯ್ದೆ ಯಶಸ್ಸು ಹಾಗೂ ವೈಫಲ್ಯಗಳ ಬಗ್ಗೆ ಒಂದು ಅವಲೋಕನ ಇಲ್ಲಿದೆ.

ಪಕ್ಷಾಂತರ ನಿಷೇಧ ಕಾಯ್ದೆಯ ಯಶಸ್ಸು ಮತ್ತು ವೈಫಲ್ಯಗಳು: ವಿಶ್ಲೇಷಣೆ
ಪಕ್ಷಾಂತರ ನಿಷೇಧ ಕಾಯ್ದೆಯ ಯಶಸ್ಸು ಮತ್ತು ವೈಫಲ್ಯಗಳು: ವಿಶ್ಲೇಷಣೆ (ians)

By Ritwika Sharma

Published : May 15, 2024, 9:58 AM IST

ಭಾರತದ ರಾಜಕೀಯದಲ್ಲಿ ಪಕ್ಷಾಂತರಗಳು ನಿರಂತರ ವಿದ್ಯಮಾನಗಳಾಗಿವೆ. ತೀರಾ ಇತ್ತೀಚಿನ ವಿದ್ಯಮಾನ ನೋಡುವುದಾದರೆ ಮೂವರು ಸ್ವತಂತ್ರ ಶಾಸಕರು ಹರಿಯಾಣದ ನಯಾಬ್ ಸಿಂಗ್ ಸೈನಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ತಾವು ನೀಡಿದ್ದ ಬೆಂಬಲ ಹಿಂತೆಗೆದುಕೊಂಡು, ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡುವುದಾಗಿ ಘೋಷಿಸಿದರು.

'ಅಯಾ ರಾಮ್, ಗಯಾ ರಾಮ್' ಎಂಬ ರಾಜಕೀಯ ಗಾದೆಯನ್ನು ಹುಟ್ಟುಹಾಕಿದ ಹರಿಯಾಣದಲ್ಲಿ ಪಕ್ಷಾಂತರವು ಹೊಸತೇನಲ್ಲ. ಹಾಗೆಯೇ ಲೋಕಸಭಾ ಚುನಾವಣೆಗಳು ನಡೆಯುತ್ತಿರುವ ಈ ಸಮಯದಲ್ಲಿ ಇತರ ಅನೇಕ ರಾಜ್ಯಗಳಲ್ಲಿ (ಮಧ್ಯಪ್ರದೇಶ ಮತ್ತು ಗುಜರಾತ್ ನಂತಹವು) ಹಲವಾರು ಪಕ್ಷಗಳ ಅಭ್ಯರ್ಥಿಗಳು ಕೊನೆಯ ಕ್ಷಣದಲ್ಲಿ ಪಕ್ಷಾಂತರ ಮಾಡಿದ ಘಟನೆಗಳು ನಡೆದಿವೆ.

ದೇಶದಲ್ಲಿ ರಾಜಕೀಯ ಪಕ್ಷಾಂತರಗಳು ನಿರಂತರವಾಗಿ ನಡೆಯುತ್ತಿದ್ದರೂ ಭಾರತದ ಪಕ್ಷಾಂತರ ವಿರೋಧಿ ಕಾನೂನು ಮೂಕ ಪ್ರೇಕ್ಷಕನಾಗಿ ಉಳಿದಿದೆ. ಚುನಾಯಿತ ಶಾಸಕರ ಪಕ್ಷಾಂತರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತದ ಸಂವಿಧಾನದ ಹತ್ತನೇ ಅನುಸೂಚಿಯ ಅಡಿಯಲ್ಲಿ ಇರುವ ಪಕ್ಷಾಂತರ ವಿರೋಧಿ ಕಾನೂನನ್ನು 1960-70 ರ ದಶಕದಲ್ಲಿ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ 1985 ರಲ್ಲಿ ಜಾರಿಗೆ ತರಲಾಯಿತು.

ಪಕ್ಷಾಂತರ ವಿರೋಧಿ ಕಾನೂನು ಜಾರಿಗೆ ಬಂದ ನಂತರದಲ್ಲೇ ಭಾರತದಲ್ಲಿ ಅತ್ಯಧಿಕ ಸಂಖ್ಯೆಯ ಪಕ್ಷಾಂತರಳು ನಡೆದಿವೆ ಎಂಬ ಅಚ್ಚರಿಯ ಮಾಹಿತಿಯನ್ನು ಸಂವಿಧಾನದ ಕಾರ್ಯನಿರ್ವಹಣೆಯನ್ನು ಪರಿಶೀಲಿಸುವ ರಾಷ್ಟ್ರೀಯ ಆಯೋಗವು 2002 ರಲ್ಲಿ ಬಹಿರಂಗಪಡಿಸಿತ್ತು. ಹಾಗಾದರೆ ಸಂವಿಧಾನದ ಹತ್ತನೇ ಅನುಸೂಚಿಯ ಉದ್ದೇಶವು ಇಷ್ಟೊಂದು ದಯನೀಯ ವೈಫಲ್ಯ ಕಂಡಿದ್ದೇಕೆ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.

ಪಕ್ಷಾಂತರ ಕಾನೂನಿನ ಪ್ರಕಾರ ಯಾವುದು ಶಿಕ್ಷಾರ್ಹ ಹಾಗೂ ಯಾವುದಕ್ಕೆ ವಿನಾಯಿತಿ? :ಹತ್ತನೇ ಅನುಸೂಚಿಯಲ್ಲಿನ ಅನೇಕ ಲೋಪಗಳ ಕಾರಣದಿಂದ ಪಕ್ಷಾಂತರ ನಿಷೇಧ ಕಾನೂನು ದುರ್ಬಲವಾಗಿರಬಹುದು ಎಂದು ಕಾಣಿಸುತ್ತದೆ. ಇದು ಪಕ್ಷಾಂತರಗಳಿಗೆ, ವಿಶೇಷವಾಗಿ ಸಾಮೂಹಿಕ ಪಕ್ಷಾಂತರಗಳ ವಿಷಯದಲ್ಲಿ ಸ್ಪಷ್ಟವಾದ ಲೋಪದೋಷಗಳನ್ನು ಹೊಂದಿದೆ. ತಮ್ಮ ಪಕ್ಷದ ಸದಸ್ಯತ್ವವನ್ನು ಸ್ವಯಂಪ್ರೇರಿತವಾಗಿ ತ್ಯಜಿಸುವ ಅಥವಾ ಸಂಸತ್ತು ಅಥವಾ ರಾಜ್ಯ ವಿಧಾನಸಭೆಯಲ್ಲಿ ತಮ್ಮ ಪಕ್ಷದ ನಿರ್ದೇಶನಕ್ಕೆ ವಿರುದ್ಧವಾಗಿ ಮತ ಚಲಾಯಿಸುವ ಶಾಸಕರನ್ನು ಹತ್ತನೇ ಅನುಸೂಚಿಯ ಪ್ರಕಾರ ಅನರ್ಹಗೊಳಿಸಬಹುದು.

ಸ್ವತಂತ್ರ ಸಂಸದರು/ ಶಾಸಕರು ತಮ್ಮ ಚುನಾವಣೆಯ ನಂತರ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದರೆ ಸದನದಿಂದ ಅನರ್ಹರಾಗುತ್ತಾರೆ. ಆದರೆ ಹಲವಾರು ಸಂದರ್ಭಗಳಲ್ಲಿ ಅನರ್ಹತೆಯ ಅರ್ಜಿಗಳು ಸ್ಪೀಕರ್ ಅಥವಾ ಸದನದ ಅಧ್ಯಕ್ಷರ ಮುಂದೆ ಯಾವುದೇ ನಿರ್ಣಯ ಕಾಣದೆ ಉಳಿದುಹೋಗುತ್ತವೆ.

ಪಕ್ಷಾಂತರ ವಿರೋಧಿ ಕಾನೂನು ಎರಡು ಸಂದರ್ಭಗಳಲ್ಲಿ ವಿನಾಯಿತಿಗಳನ್ನು ನೀಡಿದೆ. ಅವು ಯಾವುವೆಂದರೆ- ರಾಜಕೀಯ ಪಕ್ಷವೊಂದು ವಿಭಜನೆಯಾಗುವುದು ಮತ್ತು ಎರಡು ಪಕ್ಷಗಳು ವಿಲೀನವಾಗುವುದು. ಶಾಸಕರು ಮತ್ತು ಅವರ ಪಕ್ಷಗಳ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ನಡೆಯುವ ಪಕ್ಷಾಂತರದ ತಾತ್ವಿಕ ನಿದರ್ಶನಗಳನ್ನು ರಕ್ಷಿಸಲು ಈ ವಿನಾಯಿತಿಗಳನ್ನು ಮಿತವಾಗಿ ಬಳಸಬೇಕಾಗಿತ್ತು ಎಂದು ಈ ಕಾನೂನಿನ ವಾಸ್ತವ ಉದ್ದೇಶವಾಗಿದೆ.

ಈ ವಿನಾಯಿತಿಗಳನ್ನು ಒಳ್ಳೆಯ ಉದ್ದೇಶದಿಂದ ಮಾಡಲಾಗಿದ್ದರೂ ಇವನ್ನು ಯಾರೋ ಒಬ್ಬರ ಅನುಕೂಲಕ್ಕಾಗಿ ವಿಪರೀತವಾಗಿ ಬಳಸಲಾಗುತ್ತಿದೆ. ವಾಸ್ತವವಾಗಿ, ಪಕ್ಷಾಂತರಗಳನ್ನು ರೂಪಿಸಲು ಮತ್ತು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರಗಳನ್ನು ಉರುಳಿಸಲು ಈ ವಿನಾಯಿತಿಗಳನ್ನು ಪದೇ ಪದೆ ಬಳಸಿದ್ದರಿಂದ ಪಕ್ಷ ವಿಭಜನೆಯ ವಿನಾಯಿತಿಯನ್ನು 2003 ರಲ್ಲಿ ಸಂವಿಧಾನದಿಂದ ತೆಗೆದುಹಾಕಲಾಯಿತು.

ಆದಾಗ್ಯೂ ಪಕ್ಷಗಳ ವಿಲೀನ ವಿನಾಯಿತಿಯು ಹಾಗೆಯೇ ಉಳಿದಿದೆ. ಹತ್ತನೇ ಅನುಸೂಚಿಯ ಪ್ಯಾರಾಗ್ರಾಫ್ 4 ರ ಅಡಿಯಲ್ಲಿ ಕಂಡುಬರುವ ವಿಲೀನ ವಿನಾಯಿತಿಯು ಎರಡು ಉಪ-ಪ್ಯಾರಾಗಳಲ್ಲಿ ಉಲ್ಲೇಖವಾಗಿದೆ. ಈ ಎರಡು ಉಪ ಪ್ಯಾರಾಗಳನ್ನು ಒಟ್ಟಾಗಿ ಅರ್ಥೈಸಿಕೊಂಡು ಓದಿದರೆ ಎರಡು ಷರತ್ತುಗಳನ್ನು ಏಕಕಾಲದಲ್ಲಿ ಪೂರೈಸಿದರೆ ಶಾಸಕರು ಅನರ್ಹತೆಯಿಂದ ವಿನಾಯಿತಿ ಪಡೆಯಬಹುದು ಎಂದು ಕಾನೂನು ಹೇಳುತ್ತದೆ.

ಆ ಎರಡು ಷರತ್ತುಗಳು ಯಾವುವೆಂದರೆ- ಮೊದಲನೆಯದಾಗಿ, ಶಾಸಕರ ಮೂಲ ರಾಜಕೀಯ ಪಕ್ಷವು ಮತ್ತೊಂದು ರಾಜಕೀಯ ಪಕ್ಷದೊಂದಿಗೆ ವಿಲೀನಗೊಳ್ಳುವುದು ಮತ್ತು ಎರಡನೆಯದಾಗಿ, ಶಾಸಕರು ವಿಲೀನಕ್ಕೆ ಒಪ್ಪುವ "ಶಾಸಕಾಂಗ ಪಕ್ಷದ" ಮೂರನೇ ಎರಡರಷ್ಟು ಸದಸ್ಯರನ್ನು ಒಳಗೊಂಡಿರುವ ಗುಂಪಿನ ಭಾಗವಾಗಿರುವುದು. ಶಾಸಕಾಂಗ ಪಕ್ಷ ಎಂದರೆ ಒಂದು ನಿರ್ದಿಷ್ಟ ಪಕ್ಷಕ್ಕೆ ಸೇರಿದ ಶಾಸಕಾಂಗ ಸಭೆಯೊಳಗಿನ ಎಲ್ಲಾ ಚುನಾಯಿತ ಸದಸ್ಯರನ್ನು ಒಳಗೊಂಡಿರುವ ಗುಂಪು ಎಂದು ಇಲ್ಲಿ ಅರ್ಥೈಸಲಾಗುತ್ತದೆ.

ವಿಲೀನದ ವಿನಾಯಿತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ- ಅದರ ಅನಗತ್ಯವಾದ ಸಂಕೀರ್ಣ ಕರಡು ರಚನೆಯ ಕಾರಣದಿಂದ ಇದನ್ನು ಸ್ಪೀಕರ್​ಗಳು ಮತ್ತು ನ್ಯಾಯಾಲಯಗಳು ವಿಭಿನ್ನ ರೀತಿಯಲ್ಲಿ ವ್ಯಾಖ್ಯಾನಿಸಬಹುದಾಗಿದೆ.

ಒಂದು ನಿರ್ದಿಷ್ಟ ಶಾಸಕಾಂಗ ಪಕ್ಷದ ಮೂರನೇ ಎರಡರಷ್ಟು ಸದಸ್ಯರು ಮತ್ತೊಂದು ಶಾಸಕಾಂಗ ಪಕ್ಷದೊಂದಿಗೆ ವಿಲೀನಗೊಳ್ಳಲು ಒಪ್ಪಿದ ತಕ್ಷಣ, ಎರಡು ರಾಜಕೀಯ ಪಕ್ಷಗಳ ನಡುವೆ ವಿಲೀನ ನಡೆದಿದೆ ಎಂದು ಪರಿಗಣಿಸಲಾಗುತ್ತದೆ ಎಂಬುದು ಹಲವಾರು ಹೈಕೋರ್ಟ್​ಗಳಿಂದ ಒಲವು ಪಡೆದ ವ್ಯಾಖ್ಯಾನವಾಗಿದೆ. ಅಂತಹ ವ್ಯಾಖ್ಯಾನಕ್ಕೆ ರಾಷ್ಟ್ರೀಯ ಅಥವಾ ಪ್ರಾದೇಶಿಕ ಮಟ್ಟದಲ್ಲಿ ಮೂಲ ರಾಜಕೀಯ ಪಕ್ಷಗಳ ವಾಸ್ತವಿಕ ವಿಲೀನದ ಅಗತ್ಯವಿಲ್ಲ.

ವಿಲೀನ ವಿನಾಯಿತಿಯು ಗುಂಪು ಅಥವಾ ಸಾಮೂಹಿಕ ಪಕ್ಷಾಂತರಗಳನ್ನು ಹೇಗೆ ಉತ್ತೇಜಿಸುತ್ತದೆ?:ಮೇಲ್ನೋಟಕ್ಕೆ ಜಟಿಲವಾದ ಈ ಕಾನೂನುಬದ್ಧತೆಯು ಶಾಸಕಾಂಗಗಳ ಒಳಗೆ ಮತ್ತು ಹೊರಗೆ ರಾಜಕೀಯ ಪಕ್ಷಗಳ ಕ್ರಮಗಳ ಮೇಲೆ ಸ್ಪಷ್ಟವಾಗಿ ಗೋಚರಿಸುವ ಪರಿಣಾಮವನ್ನು ಬೀರುತ್ತದೆ. ಪಕ್ಷಗಳು ಸದನದ ಒಳಗೆ ತಮ್ಮ ಶಾಸಕಾಂಗ ಘಟಕಗಳ ನಡುವೆ (ಮತ್ತು ಅದರ ಹೊರಗಿನ ಸದಸ್ಯರ ನಡುವೆ ಅಲ್ಲ) ವಿಲೀನವನ್ನು ಮಾತ್ರ ತೋರಿಸಬೇಕಾಗಿರುವುದರಿಂದ, ಮಾನ್ಯ ವಿಲೀನಗಳನ್ನು ಸುಲಭವಾಗಿ ಮಾಡಲಾಗುತ್ತದೆ.

2019 ರಲ್ಲಿ ಗೋವಾ ವಿಧಾನಸಭೆಯ 15 ಕಾಂಗ್ರೆಸ್ ಶಾಸಕರ ಪೈಕಿ 10 ಶಾಸಕರು ಬಿಜೆಪಿಗೆ ಸೇರಿದಾಗ ಇದು ಬಿಜೆಪಿ ಮತ್ತು ಐಎನ್​​ಸಿ ಶಾಸಕಾಂಗ ಪಕ್ಷಗಳ ನಡುವಿನ ಮಾನ್ಯವಾದ ವಿಲೀನ ಎಂದು ಪರಿಗಣಿಸಲಾಗಿತ್ತು. 10 ಕಾಂಗ್ರೆಸ್ ಶಾಸಕರಿಗೆ ಗೋವಾ ವಿಧಾನಸಭಾ ಸ್ಪೀಕರ್ ಅನರ್ಹತೆಯಿಂದ ವಿನಾಯಿತಿ ನೀಡಿದ್ದರು. ಅವರ ನಿರ್ಧಾರವನ್ನು ಅಂತಿಮವಾಗಿ ಬಾಂಬೆ ಹೈಕೋರ್ಟ್ (ಗೋವಾ ಪೀಠ) ಎತ್ತಿಹಿಡಿದಿದೆ. ಪರಿಣಾಮಕಾರಿಯಾಗಿ, ಶಾಸಕಾಂಗ ಪಕ್ಷಗಳ ನಡುವಿನ ಡೀಮ್ಡ್ ವಿಲೀನಗಳನ್ನು ಮಾತ್ರ ಸಾಬೀತುಪಡಿಸುವ ಅಗತ್ಯವು ಗುಂಪು ಪಕ್ಷಾಂತರಗಳನ್ನು ಪ್ರಾಯೋಗಿಕವಾಗಿ ಸರಾಗಗೊಳಿಸಿದೆ.

ಪಕ್ಷಾಂತರ ನಿಷೇಧ ಕಾಯ್ದೆಯಡಿ ಪಕ್ಷಾಂತರಗೊಂಡ ಶಾಸಕರು ಅನರ್ಹರಾಗದಿರಲು ಸಹಜವಾಗಿಯೇ ವಿಲೀನಗಳು ಮತ್ತು ವಿಭಜನೆಗಳು ಪ್ರಾಥಮಿಕ ಕಾರಣವಾಗಿವೆ.

ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ ('ವಿಧಿ') 1986-2004ರ ನಡುವೆ ಲೋಕಸಭೆಯ ಸ್ಪೀಕರ್​ಗಳ ಮುಂದೆ ಸಲ್ಲಿಸಿದ 55 ಅನರ್ಹತೆ ಅರ್ಜಿಗಳ ಬಗ್ಗೆ ಸಮೀಕ್ಷೆಯೊಂದನ್ನು ನಡೆಸಿತ್ತು. ಈ ಪೈಕಿ 49 ಅರ್ಜಿಗಳಲ್ಲಿ ಪಕ್ಷಾಂತರಗಳು ನಡೆದಿದ್ದರೂ ಯಾವುದೇ ಶಾಸಕರನ್ನು ಅನರ್ಹಗೊಳಿಸಲಾಗಿಲ್ಲ. ಇವುಗಳಲ್ಲಿ 77% (49 ರಲ್ಲಿ 38) ರಷ್ಟು ಅರ್ಜಿಗಳಲ್ಲಿ ಪಕ್ಷಾಂತರ ಮಾಡಿದ ಶಾಸಕರು ತಮ್ಮ ಮೂಲ ಪಕ್ಷದಲ್ಲಿ ಮಾನ್ಯ ವಿಭಜನೆಯನ್ನು ಸಾಬೀತುಪಡಿಸಬಹುದು ಅಥವಾ ಮತ್ತೊಂದು ಪಕ್ಷದೊಂದಿಗೆ ವಿಲೀನಗೊಳ್ಳಬಹುದು ಎಂಬ ಕಾರಣಕ್ಕೆ ಅನರ್ಹರಾಗಲಿಲ್ಲ. 1990-2008ರ ನಡುವೆ ದಾಖಲಾದ 69 ಅರ್ಜಿಗಳಲ್ಲಿ ಕೇವಲ 2 ಅರ್ಜಿಗಳು ಮಾತ್ರ ಅನರ್ಹತೆಗೆ ಕಾರಣವಾಗಿವೆ. ಅನರ್ಹತೆ ಇಲ್ಲದ 67 ಪ್ರಕರಣಗಳಲ್ಲಿ, ವಿಲೀನಗಳು ಮತ್ತು ವಿಭಜನೆಗಳು 55 ಬಾರಿ (ಸುಮಾರು 82%) ಕಾರಣವಾಗಿ ಹೊರಹೊಮ್ಮಿವೆ.

ಪಕ್ಷಾಂತರ ನಿಷೇಧ ಕಾಯ್ದೆಯಿಂದ ಏನಾದರೂ ಒಳ್ಳೆಯದಾಗಿದೆಯೇ?: ಸ್ವತಂತ್ರ ಸಂಸದರು/ ಶಾಸಕರು ಸೇರಿದಂತೆ ವ್ಯಕ್ತಿಗಳ ಪಕ್ಷಾಂತರವನ್ನು ಶಿಕ್ಷಿಸುವಲ್ಲಿ ಪಕ್ಷಾಂತರ ವಿರೋಧಿ ಕಾನೂನು ಸ್ವಲ್ಪ ಯಶಸ್ಸನ್ನು ಕಂಡಿದೆ. 1989-2011ರ ನಡುವೆ ಹರ್ಯಾಣ ವಿಧಾನಸಭಾ ಸ್ಪೀಕರ್ ಮುಂದೆ ಸಲ್ಲಿಸಲಾದ 39 ಅರ್ಜಿಗಳ ಪೈಕಿ ಅನರ್ಹಗೊಳಿಸಲಾದ 12 ಪ್ರಕರಣಗಳ ಪೈಕಿ 9 ಸ್ವತಂತ್ರ ಶಾಸಕರ ಅನರ್ಹತೆಗೆ ಸಂಬಂಧಿಸಿವೆ ಎಂಬುದು ವಿಧಿ ಸಮೀಕ್ಷೆಯಲ್ಲಿ ತಿಳಿದುಬಂದಿದೆ. 2004ರಲ್ಲಿ ರಾಜ್ಯಸಭಾ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್ ಸೇರಿದ 6 ಸ್ವತಂತ್ರ ಶಾಸಕರನ್ನು ಸ್ಪೀಕರ್ ಸತ್ಬೀರ್ ಸಿಂಗ್ ಕಡಿಯಾನ್ ಅನರ್ಹಗೊಳಿಸಿರುವುದು ಕೂಡ ಇದರಲ್ಲಿ ಒಳಗೊಂಡಿದೆ.

ಮೇಘಾಲಯ ವಿಧಾನಸಭೆಗೆ (1988-2009) ಸಂಬಂಧಿಸಿದ 18 ಅನರ್ಹತೆ ಅರ್ಜಿಗಳ ಪೈಕಿ 5 ಸಂಬಂಧಿತ ಸ್ವತಂತ್ರ ಶಾಸಕರು ರಾಜಕೀಯ ಪಕ್ಷಕ್ಕೆ ಸೇರಿದ್ದಕ್ಕಾಗಿ ಸ್ಪೀಕರ್ ಅನರ್ಹಗೊಳಿಸಿದ್ದಾರೆ. 2009ರ ಏಪ್ರಿಲ್ 8-9ರ ನಡುವೆ ಸ್ವತಂತ್ರ ಶಾಸಕರಾದ ಪಾಲ್ ಲಿಂಗ್ಡೊ, ಇಸ್ಮಾಯಿಲ್ ಆರ್.ಮರಕ್ ಮತ್ತು ಲಿಮಿಸನ್ ಡಿ.ಸಂಗ್ಮಾ ಕ್ರಮವಾಗಿ ಐಎನ್​ಸಿ, ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ ಮತ್ತು ಎನ್​ಸಿಪಿಗೆ ಸೇರಿದಾಗ ಇಂತಹ ಮೂರು ಘಟನೆಗಳು ತ್ವರಿತವಾಗಿ ಸಂಭವಿಸಿದವು. ಚುನಾವಣೆ ಮುಗಿದ ನಂತರ ತಮ್ಮ ಆಯ್ಕೆಯ ರಾಜಕೀಯ ಪಕ್ಷಗಳೊಂದಿಗೆ ಕೈಜೋಡಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸಿದ್ದಕ್ಕಾಗಿ ಸ್ವತಂತ್ರ ಶಾಸಕರನ್ನು ಅಂದಿನ ಸ್ಪೀಕರ್ ಬಿಂಡೋ ಎಂ ಲಾನಾಂಗ್ ಅನರ್ಹಗೊಳಿಸಿದ್ದರು.

ಹತ್ತನೇ ಅನುಸೂಚಿಯ ಭವಿಷ್ಯವೇನು? : ರಾಜ್ಯ ವಿಧಾನಸಭೆಗಳಾದ್ಯಂತದ ಸ್ಪೀಕರ್ ನಿರ್ಧಾರಗಳ ಬಗೆಗಿನ ದತ್ತಾಂಶವು ಅವರ ಅಧಿಕೃತ ವೆಬ್ ಸೈಟ್​ಗಳಲ್ಲಿ ಸುಲಭವಾಗಿ ಲಭ್ಯವಿಲ್ಲ (ಕನಿಷ್ಠ ಇಂಗ್ಲಿಷ್​ನಲ್ಲಿ ಇಲ್ಲ). ಹೀಗಾಗಿ ಇದು ಹತ್ತನೇ ಅನುಸೂಚಿಯ ಸಮಗ್ರ ಮೌಲ್ಯಮಾಪನ ಮಾಡುವುದನ್ನು ಕಠಿಣಗೊಳಿಸುತ್ತದೆ. ಅದೇನೇ ಇದ್ದರೂ ಕಾನೂನಿನ ಯಶಸ್ಸನ್ನು ಸಂಖ್ಯಾ ಲೆಕ್ಕದಲ್ಲಿ ಹೇಳಲಾಗಿದೆ ಎಂದು ಹೇಳಬಹುದೇ ಹೊರತು ಇದು ಹೆಚ್ಚಾಗಿ ಕಾರ್ಯಸಾಧ್ಯವಲ್ಲ.

ಈ ವರ್ಷದ ಆರಂಭದಲ್ಲಿ, ಅಖಿಲ ಭಾರತ ಪ್ರಿಸೈಡಿಂಗ್ ಅಧಿಕಾರಿಗಳ ಸಮ್ಮೇಳನದಲ್ಲಿ ಈ ಕಾನೂನಿನ ಪರಿಶೀಲನೆಗಾಗಿ ಸಮಿತಿಯೊಂದನ್ನು ರಚಿಸಲಾಯಿತು. ಈ ಸಮಿತಿಯು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂಬ ನಿರೀಕ್ಷೆ ಎಲ್ಲರದ್ದಾಗಿದೆ. ಈ ಸಮಿತಿಯು ಹತ್ತನೇ ಅನುಸೂಚಿಯ ಕಾರ್ಯಕ್ಷಮತೆಯ ಸಮಗ್ರ ಪರಿಶೀಲನೆ ಮಾಡಲಿದೆ ಮತ್ತು ಸಂಸದೀಯ ಪ್ರಜಾಪ್ರಭುತ್ವವನ್ನು ಬಲಪಡಿಸುವ ಪಕ್ಷಾಂತರ ವಿರೋಧಿ ಕಾನೂನನ್ನು ಭಾರತಕ್ಕೆ ನೀಡಲಿದೆ ಎಂಬುದು ಆಶಯ.

(ಲೇಖನ : ರಿತ್ವಿಕಾ ಶರ್ಮಾ. ಲೇಖಕಿಯು ನವದೆಹಲಿಯ ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿಯಲ್ಲಿ ಕೆಲಸ ಮಾಡುತ್ತಾರೆ. ಈ ಸಂಸ್ಥೆಯಲ್ಲಿ ಅವರು ಚರಖಾ ಹೆಸರಿನ ಸಮರ್ಪಿತ ಸಾಂವಿಧಾನಿಕ ಕಾನೂನು ತಂಡದ ನೇತೃತ್ವ ವಹಿಸಿದ್ದಾರೆ. ಸಂಸದೀಯ ಪ್ರಜಾಪ್ರಭುತ್ವ, ಚುನಾವಣಾ ಕ್ಷೇತ್ರಗಳ ಡಿಲಿಮಿಟೇಶನ್ ಮತ್ತು ಚುನಾವಣಾ ಸುಧಾರಣೆಯ ವಿಷಯಗಳ ಬಗ್ಗೆ ಪ್ರಸ್ತುತ ಅವರು ಸಂಶೋಧನೆ ನಡೆಸುತ್ತಿದ್ದಾರೆ.)

ಇದನ್ನೂ ಓದಿ : ಆರ್ಥಿಕ ನೀತಿ ನಿರೂಪಣೆಯಲ್ಲಿ ಗ್ರಾಹಕ ವಿಶ್ವಾಸ ಸೂಚ್ಯಂಕದ ಪಾತ್ರ: ಒಂದು ವಿಶ್ಲೇಷಣೆ - Consumer Confidence Index

ABOUT THE AUTHOR

...view details