ಬಾಂಗ್ಲಾದೇಶದಲ್ಲಿ ಶೇಕ್ ಹಸೀನಾ ಅವರ ಸರ್ಕಾರ ಪತನವಾದ ಬಳಿಕ, ಮೊಹಮದ್ ಯೂನುಸ್ ಅವರ ನೇತೃತ್ವದಲ್ಲಿ ರಚಿತವಾಗಿ ಮಧ್ಯಂತರ ಸರ್ಕಾರ ಭಾರತದ ಜೊತೆಗೆ ಅಷ್ಟಕ್ಕಷ್ಟೆ ಸಂಬಂಧವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಆದರೆ, ನೆರೆಯ ರಾಷ್ಟ್ರವು ಭಾರತದೊಂದಿಗಿನ ವ್ಯವಹಾರಿಕ ಸಂಬಂಧಗಳಿಂದ ದೂರವಾಗಲು ಸಾಧ್ಯವಿಲ್ಲ ಎಂಬುದು ಸರ್ವವಿಧಿತ.
ಬಾಂಗ್ಲಾದೇಶ ಮಾತ್ರವಲ್ಲದೇ, ಹೊಸದಾಗಿ ಸರ್ಕಾರ ರಚನೆ ಮಾಡಿಕೊಂಡಿರುವ ನೇಪಾಳ ಮತ್ತು ಶ್ರೀಲಂಕಾ ಕೂಡ ಇದೇ ಹಾದಿಯಲ್ಲಿವೆ. ಆ ದೇಶಗಳಿಗೆ ಹೊಸ ನಾಯಕತ್ವ ಸಿಕ್ಕಿದೆ. ಆದರೆ, ಭಾರತವನ್ನು ಕಡೆಗಣಿಸಿ ದೇಶಗಳು ಸಾಗಲಿವೆ ಎಂಬುದು ಮಾತ್ರ ಅಸಾಧ್ಯದ ಮಾತು. ಬಾಂಗ್ಲಾದೇಶದಲ್ಲಿ ಆರ್ಥಿಕ ಮುಗ್ಗಟ್ಟು, ಜಿಡಿಪಿ ಕುಸಿತವು ತೀವ್ರ ಸಂಕಷ್ಟಗಳನ್ನು ತರಲಿದೆ. ನೇಪಾಳ ಮತ್ತು ದ್ವೀಪರಾಷ್ಟ್ರ ಲಂಕಾದ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.
ಬಾಂಗ್ಲಾದೇಶದಲ್ಲಿ ಹಸೀನಾ ಸರ್ಕಾರ ಪತನವಾಗಲಿದೆ ಎಂಬುದು ಭಾರತದ ಊಹೆಗೆ ನಿಲುಕದ್ದೇನಲ್ಲ. ಢಾಕಾದಲ್ಲಿ ಆಗುತ್ತಿದ್ದ ಬದಲಾವಣೆಗಳನ್ನು ದೆಹಲಿ ಸರ್ಕಾರ ಗಮನಿಸಿತ್ತು. ಆದರೆ, ಅಲ್ಲಿನ ಹೋರಾಟವನ್ನು ತಡೆಯಲು ಸಾಧ್ಯವಿರಲಿಲ್ಲ. ಹೀಗಾಗಿ, ಶೇಕ್ ಹಸೀನಾ ಅವರು ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿದ್ದರೂ, ಸರ್ಕಾರ ಪತನವಾಗುವುದನ್ನು ತಡೆಯಲು ಮುಂದಾಗಲಿಲ್ಲ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮಿತ್ರರಾಷ್ಟ್ರವಾಗಿರುವ ಬಾಂಗ್ಲಾ, ಭಾರತದಿಂದ ದೂರ ಸರಿಯಲು ಸಾಧ್ಯವಿಲ್ಲ. ಹಲವು ಕಾರಣಗಳಿಂದ ಅಲ್ಲಿನ ಈಗಿನ ಸರ್ಕಾರ ಆಕ್ರಮಣಶೀಲತೆ ಪ್ರದರ್ಶಿಸಬಹುದು. ಆದರೆ, ವಾಸ್ತವ ಸಂಗತಿಯೆಂದರೆ, ಭಾರತವಿಲ್ಲದೇ ಬಾಂಗ್ಲಾದೇಶ ನಿಜವಾಗಿಯೂ ಮುಂದುವರಿಯಲು ಸಾಧ್ಯವಿಲ್ಲ. ಹಸೀನಾ ಸರ್ಕಾರ ಪತನದಿಂದ ದಕ್ಷಿಣ ಏಷ್ಯಾ ವಲಯದಲ್ಲಿ ಭಾರತದ ಪ್ರಭಾವಕ್ಕೆ ಹಿನ್ನಡೆಯಾಗಿದೆ ಎಂದು ಹೇಳಲಾಗಿದೆ. ಇದಕ್ಕೂ ಮೊದಲು ಇನ್ನೊಂದು ನೆರೆರಾಷ್ಟ್ರ ನೇಪಾಳದಲ್ಲಿ ಸರ್ಕಾರ ಪತನವಾಗಿತ್ತು. ಇದು ಕೂಡ ಭಾರತದ ಪ್ರಭಾವಕ್ಕೆ ಧಕ್ಕೆ ಎಂದು ಹೇಳಲಾಗಿತ್ತು.
ಚೀನಾದತ್ತ ನೇಪಾಳ ಚಿತ್ತ:2015 ರಲ್ಲಿ ಭಾರತವು ನೇಪಾಳದ ಮೇಲೆ ದಿಗ್ಬಂಧನ ವಿಧಿಸಿತ್ತು. ಆದರೆ, ನೇಪಾಳಿಗರು ಇದನ್ನು ಮೆಟ್ಟಿನಿಂತರು. ಚೀನಾ ಮತ್ತು ಅಮೆರಿಕದಂತೆ ದೃಢ ನಿರ್ಧಾರ ಕೈಗೊಳ್ಳುವಲ್ಲಿ ಭಾರತ ತುಸು ಹಿಂದಿದೆ ಎಂಬುದನ್ನು ರಾಜಕೀಯ ಜ್ಞಾನ ಅರಿತ ನೇಪಾಳಿಯ ಮಾತಾಗಿದೆ. ಹೀಗಾಗಿ ಚೀನಾದಂತೆ ಕುತಂತ್ರ ಬುದ್ಧಿ ಮತ್ತು ಅಮೆರಿಕದಂತೆ ದಾಳಿ ಮಾಡುವ ರಾಜತಾಂತ್ರಿಕತೆ ಭಾರತ ಪ್ರದರ್ಶಿಸಲ್ಲ. ಆದಾಗ್ಯೂ ನೇಪಾಳವು ಬೀಜಿಂಗ್‌ನತ್ತ ಅನೇಕ ವಿಷಯಗಳಿಗಾಗಿ ಕಾದು ಕುಳಿತಿದೆ. ನೇಪಾಳಕ್ಕೆ ಭಾರತ ನೆರವು ನೀಡಿದಾಗ್ಯೂ ಮಾವೋವಾದಿಗಳತ್ತ ದೇಶ ಚಿತ್ತ ಹರಿಸಿದೆ.