ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಲು ಪ್ರಮುಖ ಕಾರಣವಾದ ಮತ್ತು ಯುರೋಪಿಯನ್ ರಾಷ್ಟ್ರಗಳು ಒಬ್ಬರಿಗೊಬ್ಬರು ಸಹಾಯವಾಗಿ ನಿಲ್ಲಲು ರಚಿಸಿಕೊಂಡ ಅಂತಾರಾಷ್ಟ್ರೀಯ ಕೂಟವೇ ನ್ಯಾಟೋ. ಈ ಸಂಘಟನೆಗೆ ಇದೀಗ 75ರ ಹರೆಯ. ಈಚೆಗೆ ಒಕ್ಕೂಟದ 75ನೇ ವಾರ್ಷಿಕೋತ್ಸವವನ್ನು ಬೆಲ್ಜಿಯಂನ ಬ್ರಸೆಲ್ಸ್ನಲ್ಲಿ ಆಚರಿಸಲಾಯಿತು.
ಯುರೋಪಿಯನ್ ರಾಷ್ಟ್ರಗಳು ಸೇರಿಕೊಂಡು ಕಟ್ಟಿಕೊಂಡ ರಕ್ಷಣಾ ಕೂಟವನ್ನು ನ್ಯಾಟೋ (NATO) ಅಥವಾ ಉತ್ತರ ಅಟ್ಲಾಂಟಿಕ್ ಒಪ್ಪಂದ ಒಕ್ಕೂಟ ಎಂದು ಕರೆಯಲಾಗುವ ಇದನ್ನು ಎರಡನೇ ಮಹಾಯುದ್ಧದ ಬಳಿಕ ಅಂದರೆ 1949 ಏಪ್ರಿಲ್ 4ರಂದು ಸ್ಥಾಪಿಸಲಾಯಿತು. ವಾಷಿಂಗ್ಟನ್ ಸಿಡಿ ಒಪ್ಪಂದದ ಪ್ರಕಾರ ಇದನ್ನು ಬೆಲ್ಜಿಯಂ, ಕೆನಡಾ, ಡೆನ್ಮಾರ್ಕ್, ಫ್ರಾನ್ಸ್, ಐಸ್ಲ್ಯಾಂಡ್, ಇಟಲಿ, ಲಕ್ಸೆಂಬರ್ಗ್, ನೆದರ್ಲ್ಯಾಂಡ್ಸ್, ನಾರ್ವೆ, ಪೋರ್ಚುಗಲ್, ಇಂಗ್ಲೆಂಡ್, ಅಮೆರಿಕ ರಾಷ್ಟ್ರಗಳು ಆರಂಭದಲ್ಲಿ ಒಕ್ಕೂಟದ ಭಾಗವಾಗಿದ್ದವು. ಇದೀಗ ಈ ಕೂಟ ವಿಸ್ತರಿಸಿದ್ದು, 32 ದೇಶಗಳು ಇದರ ಸದಸ್ಯತ್ವ ಪಡೆದಿವೆ.
ಸದಸ್ಯ ರಾಷ್ಟ್ರಗಳು: 2022ರವರೆಗೆ 18 ಸದಸ್ಯ ರಾಷ್ಟ್ರಗಳಲ್ಲಿ ಗ್ರೀಸ್, ಟರ್ಕಿ, ಜರ್ಮನಿ ಮತ್ತು ಸ್ಪೇನ್ ಪಶ್ಚಿಮ ಯುರೋಪಿನಿಂದ ಪ್ರತಿನಿಧಿಸುತ್ತಿದ್ದವು. ಉಳಿದ 14 ಪೂರ್ವ ಯುರೋಪಿಯನ್ ದೇಶಗಳಾಗಿದ್ದವು. ಫಿನ್‌ಲ್ಯಾಂಡ್ (2023) ಮತ್ತು ಸ್ವೀಡನ್ (2024) ಸದಸ್ಯತ್ವವನ್ನು ಪಡೆಯುವ ಮೂಲಕ ಅದರ ಸಂಖ್ಯೆ 32ಕ್ಕೇರಿತು.
ಕೆಲಸವೇನು?: NATOದ ಘೋಷಿತ ಮೂಲಭೂತ ಕಾರ್ಯಗಳು ಭದ್ರತೆ, ಸಮಾಲೋಚನೆ, ದಾಳಿ ತಡೆಗಟ್ಟುವಿಕೆ ಮತ್ತು ಪರಸ್ಪರ ರಕ್ಷಣೆಯಾಗಿದೆ. ಯುರೋಪಿಯನ್ ಮತ್ತು ಅಟ್ಲಾಂಟಿಕ್ ಪ್ರದೇಶದಲ್ಲಿ ಭದ್ರತೆ ಮತ್ತು ಸ್ಥಿರತೆಯನ್ನು ಹೆಚ್ಚಿಸಲು, ಬಿಕ್ಕಟ್ಟು ನಿರ್ವಹಣೆಯ ಉದ್ದೇಶ ಹೊಂದಿದೆ. ನ್ಯಾಟೋದ ಮೂಲ ನಿಯಮಗಳೆಂದರೆ ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಮತ್ತು ಕಾನೂನು ಪಾಲನೆಯಾಗಿದೆ. ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರು ನ್ಯಾಟೋ ರಾಯಭಾರಿಗಳಾಗಿ ಪ್ರತಿನಿಧಿಸುತ್ತಾರೆ. ಸದಸ್ಯ ರಾಷ್ಟ್ರಗಳು ತಮ್ಮ ಸೇನಾ ತುಕಡಿಯಲ್ಲಿ ನ್ಯಾಟೋಗೆ ಸಂಬಂಧಿಸಿದ ಮಿಲಿಟರಿ ಪಡೆಯನ್ನು ಹೊಂದಿರುತ್ತದೆ. ಇದು ಈವರೆಗೂ 20 ಮಹತ್ವದ ಸಂಘರ್ಷಗಳು ಒಳಗೊಂಡಂತೆ 200 ಮಿಲಿಟರಿ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದೆ.
ಯುಎಸ್ಎಸ್ಆರ್ (ರಷ್ಯಾ) ಮತ್ತು ಅಮೆರಿಕ ನಡುವಿನ ಶೀತಲ ಸಮರವು ಉತ್ತುಂಗದಲ್ಲಿದ್ದಾಗ ವಾರ್ಸಾ ಒಪ್ಪಂದದ ಪ್ರಕಾರ, ತನ್ನ ಸದಸ್ಯರ ಹಿತಾಸಕ್ತಿಗಳನ್ನು ರಕ್ಷಿಸಲು ನ್ಯಾಟೋ ಸಜ್ಜಾಗಿರುತ್ತದೆ. ಅಟ್ಲಾಂಟಿಕ್ ಮತ್ತು ಯುರೋಪಿಯನ್ ರಾಷ್ಟ್ರಗಳ ಮೇಲೆ ಸಂಭವನೀಯ ದಾಳಿಯ ವಿರುದ್ಧ ತನ್ನ ಸದಸ್ಯರನ್ನು ರಕ್ಷಿಸಲು ನ್ಯಾಟೋ ಪಡೆಯನ್ನು ರೂಪಿಸಲಾಯಿತು.
ಸೋವಿಯತ್ ರಷ್ಯಾವು ಛಿದ್ರವಾದ ಬಳಿಕ ಯಾವುದೇ ಬೆದರಿಕೆಗಳು ಇಲ್ಲವಾದ ಬಳಿಕ ನ್ಯಾಟೋದ ಅಗತ್ಯತೆ ಅಷ್ಟಾಗಿ ಇಲ್ಲವಾಗಿದೆ. ಅಮೆರಿಕದ ನೇತೃತ್ವದಲ್ಲಿ ನಡೆಯುತ್ತಿರುವ ನ್ಯಾಟೋ ಪಡೆಗೆ ಸವಾಲು ಹಾಕುವ ದೇಶವು ವಿಶ್ವದಲ್ಲಿ ಇಲ್ಲವಾದ ಕಾರಣ, ಅದರ ಮುಂದುವರಿಕೆಗೆ ಯಾವುದೇ ಕಾರಣಗಳಿಲ್ಲ. ಒಕ್ಕೂಟವನ್ನು ಬರ್ಖಾಸ್ತು ಮಾಡುವ ಪ್ರಸ್ತಾವ ಬಂದರೂ, ಅದನ್ನು ಜಾರಿಗೆ ಮಾಡಲಾಗಿಲ್ಲ.
NATO ಸಂವಿಧಾನದ ಪ್ರಕಾರ, "ಉತ್ತರ ಅಟ್ಲಾಂಟಿಕ್ ಪ್ರದೇಶದಲ್ಲಿ ಸ್ಥಿರತೆ ಮತ್ತು ಶಾಂತಿಯನ್ನು ಉತ್ತೇಜಿಸುವುದೇ ಪ್ರಮುಖ ಉದ್ದೇಶ. ಹೀಗಾಗಿ ಒಕ್ಕೂಟದ ವ್ಯಾಪ್ತಿಯನ್ನು ಉತ್ತರ ಅಟ್ಲಾಂಟಿಕ್ ಪ್ರದೇಶಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಪೂರ್ವದಲ್ಲಿ ರಷ್ಯಾದ ಗಡಿಯಲ್ಲಿ ಸಂಘಟನೆಯ ವಿಸ್ತರಿಸುವುದನ್ನು ತಡೆಯಲಾಗಿದೆ.
ನ್ಯಾಟೋ ನಿಯಮ ಮೀರಿ ಕಾರ್ಯಾಚರಣೆ:ನ್ಯಾಟೋ ಚಾರ್ಟರ್ ಪ್ರಕಾರ, ಯಾವುದೇ ಅಂತಾರಾಷ್ಟ್ರೀಯ ವಿವಾದವನ್ನು ಶಾಂತಿಯುತ ಮಾರ್ಗದಲ್ಲಿ ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಒಳಪಡುವ ರೀತಿಯಲ್ಲಿ ಪರಿಹರಿಸಬೇಕು. ಇಲ್ಲಿ ಯಾವುದೇ ರಾಷ್ಟ್ರಕ್ಕೆ ಅಪಾಯ, ಅನ್ಯಾಯವಾಗುವಂತಿಲ್ಲ. ವಿಶ್ವಸಂಸ್ಥೆಯ ನಿಯಮಗಳಿಗೆ ವಿರುದ್ಧವಾಗಿ ಯಾವುದೇ ರೀತಿಯ ಕಾರ್ಯಾಚರಣೆ, ಬಲಪ್ರಯೋಗ ನಡೆಸುವಂತಿಲ್ಲ. ಹಾಗಿದ್ದಾಗ ಒಕ್ಕೂಟ ಅಂತರಾಷ್ಟ್ರೀಯ ಘಟನೆಗಳಲ್ಲಿ ತಲೆದೂರಿಸುವಂತಿಲ್ಲ. ಆದರೆ ನ್ಯಾಟೋ ಇದಕ್ಕೆ ವಿರುದ್ಧವಾಗಿ ನಡೆದುಕೊಂಡ ಉದಾಹರಣೆಗಳಿವೆ. ಇರಾಕ್, ಲಿಬಿಯಾ, ಸಿರಿಯಾ ಮತ್ತು ಅಫ್ಘಾನಿಸ್ತಾನದ ಮೇಲೆ ಅಮೆರಿಕದ ನೇತೃತ್ವದ ನ್ಯಾಟೋ ಪಡೆ ದಾಳಿ ನಡೆಸಿದೆ. ಇದು ವಿಶ್ವಸಂಸ್ಥೆಯ ನಿಯಮಗಳ ಸ್ಪಷ್ಟವಾದ ಉಲ್ಲಂಘನೆಯಾಗಿದೆ. ಭದ್ರತೆಗೆ ಬೆದರಿಕೆಯಿಲ್ಲದಿದ್ದರೂ ಸಹ ಶಾಂತಿಯ ಹೆಸರಿನಲ್ಲಿ ಯುದ್ಧವನ್ನು ನಡೆಸಲಾಗಿದೆ.
ನ್ಯಾಟೋ-ರಷ್ಯಾ ನಡುವೆ ತಿಕ್ಕಾಟ:ನ್ಯಾಟೋವನ್ನು ಏಕೀಕೃತ ಜರ್ಮನಿಯನ್ನು ಮೀರಿ ಪೂರ್ವಕ್ಕೆ ವಿಸ್ತರಿಸುವುದಿಲ್ಲ ಎಂದು ಘೋಷಿಸಿದಾಗ್ಯೂ ಅಲ್ಲಿನ ರಾಷ್ಟ್ರಗಳಿಗೆ ಸದಸ್ಯತ್ವ ನೀಡಿದ್ದು, ರಷ್ಯಾದ ಕಣ್ಣು ಕೆಂಪಾಗಿಸಿದೆ. 1990ರ ಫೆಬ್ರವರಿ 9ರಂದು ಆಗಿನ ಅಮೆರಿಕದ ಸ್ಟೇಟ್ ಸೆಕ್ರೆಟರಿ ಜೇಮ್ಸ್ ಬೇಕರ್ ಮತ್ತು ರಷ್ಯಾದ ಅಧ್ಯಕ್ಷ ಎಡ್ವರ್ಡ್ ಶೆವಾರ್ಡ್ನಡ್ಜೆ ನಡುವಿನ ಸಭೆಯಲ್ಲಿ ಜರ್ಮನಿಯನ್ನು ಒಕ್ಕೂಟಕ್ಕೆ ಸೇರಿಸಿಕೊಂಡ ಬಳಿಕ ಬೇರಾವುದೇ ಪೂರ್ವ ರಾಷ್ಟ್ರಗಳಿಗೆ ಪಡೆಯನ್ನು ವಿಸ್ತರಣೆ ಮಾಡುವುದಿಲ್ಲ ಎಂದು ಒಪ್ಪಂದಕ್ಕೆ ಬರಲಾಯಿತು.
2007ರಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಇದನ್ನು ಪ್ರಶ್ನಿಸಿ, ಅಂದು ಮಾಡಿಕೊಂಡ ಒಪ್ಪಂದ ಈಗ ಎಲ್ಲಿದೆ ಎಂದಿದ್ದರು. ಇದಾದ ಬಳಿಕ ನ್ಯಾಟೋಗೆ ಉಕ್ರೇನ್ ಅನ್ನು ಸೇರಿಸಿಕೊಳ್ಳಲು ಮುಂದಾದಾಗ ರಷ್ಯಾವು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಆ ದೇಶದ ಮೇಲೆ ಯುದ್ಧವನ್ನೇ ನಡೆಸುತ್ತಿದೆ. ಶೀತಲ ಸಮರದ ಸಮಯದಲ್ಲಿ ನ್ಯಾಟೋ ಉದ್ದೇಶ ಯಶಸ್ವಿಯಾಗಿದ್ದರೂ, ವಿಶ್ವಸಂಸ್ಥೆಯ ಚಾರ್ಟರ್ ವಿರುದ್ಧವಾಗಿ ಮಿಲಿಟರಿ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಮೂಲ ಉದ್ದೇಶವನ್ನೇ ಧಿಕ್ಕರಿಸಲಾಗಿದೆ. ಇದೀಗ ಉಕ್ರೇನ್ ವಿಷಯದಲ್ಲಿ ತಲೆದೂರಿಸಿ ಬಿಕ್ಕಟ್ಟು ಸೃಷ್ಟಿಸಲಾಗಿದೆ. ವಿಶ್ವದಲ್ಲಿ ಅಮೆರಿಕದ ಶಕ್ತಿ ಕ್ಷೀಣಿಸುತ್ತಿದ್ದು, ಇದು ಮತ್ತಷ್ಟು ಸಂಕಷ್ಟಗಳನ್ನು ತಂದೊಡ್ಡುವ ಸಾಧ್ಯತೆಗಳಿವೆ.
ಇದನ್ನೂ ಓದಿ:ಭಾರತಕ್ಕೆ ಮಾಲ್ಡೀವ್ಸ್ ನೀಡಬೇಕಾದ ಸಾಲದ ಮೊತ್ತ 517 ಮಿಲಿಯನ್ ಡಾಲರ್: ರಾಗ ಬದಲಿಸಿದ ಮುಯಿಝ - Maldives India Relations