ಗರಿಗರಿಯಾದ ಟೊಮೆಟೊ ದೋಸೆ ಮಾಡೋದು ತುಂಬಾ ಸರಳ: ಒಮ್ಮೆ ರುಚಿ ನೋಡಿದರೆ ಮತ್ತೆ ಮತ್ತೆ ತಿನ್ನಬೇಕಿನಿಸುತ್ತೆ! - TOMATO DOSA RECIPE IN KANNADA
Tomato Dosa Recipe: ಸಾಮಾನ್ಯ ದೋಸೆಗಿಂತಲೂ ಈ ಟೊಮೆಟೊ ದೋಸೆ ಎರಡು ಪಟ್ಟು ರುಚಿ ಹೊಂದಿದೆ. ಒಮ್ಮೆ ತಿಂದರೆ ಸಾಕು ಮತ್ತೆ ಮತ್ತೆ ಸೇವಿಸಬೇಕು ಎನಿಸುತ್ತದೆ. ಟೊಮೆಟೊ ದೋಸೆ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.
Tomato Dosa Recipe in Kannada:ಉಪಹಾರ ಎಂದ ಕೂಡಲೇ ಮೊದಲು ನೆನಪಿಗೆ ಬರೋದು ದೋಸೆ, ಇಡ್ಲಿ. ಅದರಲ್ಲೂ ಹಲವರ ನೆಚ್ಚಿನ ಉಪಹಾರ ಎಂದರೆ ಅದು ದೋಸೆಯೇ ಆಗಿರುತ್ತದೆ. ನಾವು ನಿತ್ಯ ಯಾವುದಾರೂ ಒಂದು ಪ್ರಕಾರದ ದೋಸೆಗಳನ್ನು ಸೇವಿಸುತ್ತೇನೆ. ಪ್ರಮುಖವಾಗಿ ಮಸಾಲಾ ದೋಸೆ, ರವಾ ದೋಸೆ, ಸೆಟ್ ದೋಸೆ ಹೀಗೆ ವಿವಿಧ ಪ್ರಕಾರದ ದೋಸೆಗಳನ್ನು ಸವಿಯುತ್ತೇವೆ.
ಈ ಎಲ್ಲ ದೋಸೆಗಳನ್ನು ಮೀರಿಸುವಂತೆ ರುಚಿ ನೀಡುವ ವಿಭಿನ್ನ ದೋಸೆಯನ್ನು ನಾವು ನಿಮಗಾಗಿ ತಂದಿದ್ದೇವೆ. ಅದುವೇ ಗರಿಗರಿಯಾದ ಟೊಮೆಟೊ ದೋಸೆ. ಇದರ ರುಚಿ ಮಾತ್ರ ಅದ್ಭುತವಾಗಿರುತ್ತದೆ. ಈ ದೋಸೆಯು ಮನೆಮಂದಿಗೆಲ್ಲ ಇಷ್ಟವಾಗುತ್ತದೆ. ಈ ದೋಸೆಯು ಸಖತ್ ಟೇಸ್ಟಿಯಾಗಿರುವ ಜೊತೆಗೆ ನಿಮ್ಮ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಹಾಗಾದರೆ, ಸೂಪರ್ ಟೇಸ್ಟಿಯಾದ ಟೊಮೆಟೊ ದೋಸೆ ತಯಾರಿಸಲು ಬೇಕಾಗುವ ಸಾಮಾಗ್ರಿಗಳೇನು? ಈ ದೋಸೆ ಸಿದ್ಧಪಡಿಸುವುದು ಹೇಗೆ ಎಂಬುದನ್ನು ತಿಳಿಯೋಣ.
ಟೊಮೆಟೊ ದೋಸೆಗೆ ಬೇಕಾಗುವ ಪದಾರ್ಥಗಳು:
ಅಕ್ಕಿ ಹಿಟ್ಟು - 1 ಕಪ್
ಉಪ್ಪಿಟ್ಟಿನ ರವಾ - 1 ಕಪ್
ಟೊಮೆಟೊ ಚೂರುಗಳು - 1 ಕಪ್
ಕಡಲೆ ಹಿಟ್ಟು - ಅರ್ಧ ಕಪ್
ಮಜ್ಜಿಗೆ - ಎರಡು ಕಪ್
ಖಾರದ ಪುಡಿ - 1 ಟೀಸ್ಪೂನ್
ಉಪ್ಪು - ರುಚಿಗೆ ತಕ್ಕಷ್ಟು
ಹಸಿಮೆಣಸಿನಕಾಯಿ - 2
ಕೊತ್ತಂಬರಿ ಸೊಪ್ಪಿನ ಪುಡಿ - ಅರ್ಧ ಕಪ್
ಶುಂಠಿ ಪೇಸ್ಟ್ - ಅರ್ಧ ಟೀಸ್ಪೂನ್
ಕಾಳುಮೆಣಸಿನ ಪುಡಿ - ಅರ್ಧ ಟೀಸ್ಪೂನ್
ಜೀರಿಗೆ ಪುಡಿ - ಅರ್ಧ ಟೀಸ್ಪೂನ್
ಇಂಗು - ಕಾಲು ಟೀಸ್ಪೂನ್
ಟೊಮೆಟೊ ದೋಸೆ ಸಿದ್ಧಪಡಿಸುವ ವಿಧಾನ:
ಮೊದಲು ದೋಸೆ ಹಿಟ್ಟು ತಯಾರಿಸಬೇಕಾಗುತ್ತದೆ. ಅದಕ್ಕಾಗಿ ಮೊದಲು ಅಡುಗೆಗೆ ಬೇಕಾಗುವ ಟೊಮೆಟೊ ಚಿಕ್ಕದಾಗಿ ಕತ್ತರಿಸಿ ಪಕ್ಕಕ್ಕೆ ಇಟ್ಟುಕೊಳ್ಳಿ. ಹಾಗೆಯೇ ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಕಟ್ ಮಾಡಿ ರೆಡಿಯಾಗಿ ಇಟ್ಟುಕೊಳ್ಳಿ.
ಈಗ ಮಿಕ್ಸಿಂಗ್ ಜಾರ್ ತೆಗೆದುಕೊಂಡು ಅದಕ್ಕೆ ಅಕ್ಕಿ ಹಿಟ್ಟು, ಉಪ್ಪಿಟ್ಟಿನ ರವಾ, ಟೊಮೆಟೊ ತುಂಡುಗಳು, ಕಡಲೆ ಹಿಟ್ಟು, ಖಾರದ ಪುಡಿ, ಉಪ್ಪು, ಮಜ್ಜಿಗೆ ಮತ್ತು ಹಸಿಮೆಣಸಿನಕಾಯಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
ಬಳಿಕ ಮಿಶ್ರಣವನ್ನು ಮಿಕ್ಸಿಂಗ್ ಬೌಲ್ನಲ್ಲಿ ತೆಗೆದುಕೊಳ್ಳಿ. ಇದಾದ ನಂತರ ಸ್ವಲ್ಪ ಹೆಚ್ಚು ಮಜ್ಜಿಗೆ, ಶುಂಠಿ ಪೇಸ್ಟ್, ಕಾಳುಮೆಣಸಿನ ಪುಡಿ, ಜೀರಿಗೆ ಪುಡಿ, ಇಂಗು, ಸಣ್ಣದಾಗಿ ಕೊತ್ತಂಬರಿ ಸೊಪ್ಪು ಸೇರಿಸಿ ಮತ್ತು ಇಡೀ ಮಿಶ್ರಣವನ್ನು ಚೆನ್ನಾಗಿ ಕಲಿಸಿಕೊಳ್ಳಬೇಕು.
ಈಗ ದೋಸೆ ಪ್ಯಾನ್ ಅನ್ನು ಸ್ಟವ್ ಮೇಲೆ ಇಟ್ಟು ಬಿಸಿ ಮಾಡಿ. ತವಾ ಬಿಸಿಯಾದ ಬಳಿಕ ಸ್ವಲ್ಪ ಎಣ್ಣೆ ಹಚ್ಚಿ ಮೊದಲು ಕಲಸಿದ ಹಿಟ್ಟಿನ ಮಿಶ್ರಣದಿಂದ ಸ್ವಲ್ಪ ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ರೌಂಡ್ ಸೇಫ್ನಲ್ಲಿ ದೋಸೆ ಹಾಕುವಂತೆ ಹರಡಿ.
ಬಳಿಕ ಸ್ವಲ್ಪ ಎಣ್ಣೆಯನ್ನು ಅಂಚುಗಳಿಗೆ ಹಚ್ಚಿ ಕೆಂಪಗೆ ಆಗುವ ಕಾಯ್ದರೆ ಸಾಕು ಸೂಪರ್ ಟೇಸ್ಟಿಯಾದ ಇನ್‌ಸ್ಟಂಟ್ ಟೊಮೇಟೊ ದೋಸೆ ಸೇವಿಸಲು ಸಿದ್ಧ!
ಈ ದೋಸೆನ್ನು ಶೇಂಗಾ ಮತ್ತು ಟೊಮೆಟೊ, ಕೊಬ್ಬರಿ ಚಟ್ನಿಯೊಂದಿಗೆ ಸೇವಿಸಿದರೆ ರುಚಿ ಅದ್ಭುತವಾಗಿರುತ್ತದೆ. ತಡ ಮಾಡದೇ ನೀವು ಈ ರೆಸಿಪಿಯನ್ನು ಪ್ರಯತ್ನಿಸಿ ನೋಡಿ.