How to Make Dal Biryani Recipe:ಬಹುತೇಕ ತಾಯಂದಿರು ಯಾವಾಗಲೂ ಮಕ್ಕಳ ಲಂಚ್ ಬಾಕ್ಸ್‌ಗೆ ವಿಭಿನ್ನ ಅಡುಗೆಗಳನ್ನು ಸಿದ್ಧಪಡಿಸಲು ಪ್ರಯತ್ನಿಸುತ್ತಾರೆ. ಸಾಮಾನ್ಯವಾಗಿ ಅನ್ನ ಮತ್ತು ಸಾಂಬಾರ್ ಅನ್ನು ಲಂಚ್ ಬಾಕ್ಸ್‌ಗೆ ಹಾಕಿದರೆ ಮಕ್ಕಳು ಅದನ್ನು ತಿನ್ನಲು ಹಿಂಜರಿಯುತ್ತಾರೆ. ಹಾಗಾದ್ರೆ, ಈ ಬಾರಿ ಘಮಘಮಿಸುವ 'ದಾಲ್ ಬಿರಿಯಾನಿ' ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.
ಕೆಲವು ಸಲಹೆಗಳನ್ನು ಪಾಲಿಸಿದರೆ ಸಾಕು ರುಚಿಕರವಾದ ದಾಲ್ ಬಿರಿಯಾನಿ ರೆಡಿ ಮಾಡಬಹುದು. ಈ ಬಿರಿಯಾನಿ ಸ್ವಲ್ಪ ಸ್ಪೈಸಿಯಾಗಿದ್ದರೂ ಕೂಡ ಮಕ್ಕಳಿಗೆ ತುಂಬಾ ಇಷ್ಟವಾಗುತ್ತದೆ. ಇದನ್ನು ತಯಾರಿಸುವುದು ಹೇಗೆ ಅನ್ನೋದರ ಮಾಹಿತಿ ಇಲ್ಲಿದೆ..
ದಾಲ್ ಬಿರಿಯಾನಿಗೆ ಬೇಕಾಗುವ ಪದಾರ್ಥಗಳು:
- ಕಡಲೆಬೇಳೆ - 1 ಕಪ್
- ಬಾಸ್ಮತಿ ಅಕ್ಕಿ - 3 ಗ್ಲಾಸ್
- ಆಲೂಗಡ್ಡೆ - 2
- ಈರುಳ್ಳಿ - 3
- ಹಸಿಮೆಣಸಿನಕಾಯಿ - 4
- ಉಪ್ಪು - ರುಚಿಗೆ ತಕ್ಕಷ್ಟು
- ಅರಿಶಿಣ - ಕಾಲು ಚಮಚ
- ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ - ಟೀಸ್ಪೂನ್
- ಮೊಸರು - ಅರ್ಧ ಕಪ್
- ಕೊತ್ತಂಬರಿ ಮತ್ತು ಪುದೀನಾ - ಸ್ವಲ್ಪ
- ಖಾರದ ಪುಡಿ - ಟೀಸ್ಪೂನ್
- ಬಿರಿಯಾನಿ ಎಲೆಗಳು - 3
- ದಾಲ್ಚಿನ್ನಿ - 2
- ಲವಂಗ - 5
- ಮೆಣಸು - 6
- ಏಲಕ್ಕಿ - 2
- ಜೀರಿಗೆ - 1/4 ಟೀಸ್ಪೂನ್
- ಗಸಗಸೆ- ಸ್ವಲ್ಪ
- ತೈಲ
ಅಡುಗೆ ತಯಾರಿಸುವ ವಿಧಾನ:
- ಮೊದಲು ಕಡಲೆಬೇಳೆಯನ್ನು ನೀರಿನಲ್ಲಿ ನೆನೆಸಿಡಬೇಕು. ಹಾಗೆಯೇ ಅಕ್ಕಿಯನ್ನು ತೊಳೆದು ಅರ್ಧ ತಾಸು ನೀರಿನಲ್ಲಿ ನೆನೆಸಿಡಿ.
- ನಂತರ ಹಸಿ ಮೆಣಸಿನಕಾಯಿ ಹಾಗೂ ಈರುಳ್ಳಿಯನ್ನು ಲಂಬವಾಗಿ ಕತ್ತರಿಸಿ. ಬಳಿಕ ಆಲೂಗಡ್ಡೆ ಸಿಪ್ಪೆ ತೆಗೆದು ದೊಡ್ಡ ತುಂಡುಗಳಾಗಿ ಕತ್ತರಿಸಿ.
- ಇದೀಗ ಬಿರಿಯಾನಿ ಮಾಡುವ ಸಲುವಾಗಿ.. ಒಲೆಯ ಮೇಲೆ ಪಾತ್ರೆ ಇಟ್ಟು 4 ಚಮಚ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ, ಕತ್ತರಿಸಿದ ಈರುಳ್ಳಿ ಸೇರಿಸಿ ಹಾಗೂ ಕಂದು ಬಣ್ಣ ಬರುವವರೆಗೆ ಹುರಿಯಿರಿ.
- ಬಳಿಕ ಒಂದು ತಟ್ಟೆಯಲ್ಲಿ ಹುರಿದ ಈರುಳ್ಳಿ ತೆಗೆದುಕೊಳ್ಳಿ.
- ಈಗ ಮತ್ತೊಂದು ಪಾತ್ರೆಯಲ್ಲಿ 2 ಚಮಚ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ನಂತರ ಬಿರಿಯಾನಿ ಎಲೆ, ದಾಲ್ಚಿನ್ನಿ, ಲವಂಗ, ಮೆಣಸು, ಗಸಗಸೆ ಹಾಕಿ ಸ್ವಲ್ಪ ಫ್ರೈ ಮಾಡಿ ಇಟ್ಟುಕೊಳ್ಳಿ.
- ನಂತರ ಕತ್ತರಿಸಿದ ಹಸಿರು ಮೆಣಸಿನಕಾಯಿ ಮತ್ತು ಆಲೂಗಡ್ಡೆ ತುಂಡುಗಳನ್ನು ಅದಕ್ಕೆ ಸೇರಿಸಿ. ಸ್ವಲ್ಪ ಹೊತ್ತು ಮಿಕ್ಸ್ ಮಾಡಿ ಆ ಪಾತ್ರೆಯನ್ನು ಮುಚ್ಚಿಡಿ.
- ಐದು ನಿಮಿಷಗಳ ನಂತರ, ನೆನೆಸಿದ ಕಡಲೆಬೇಳೆಯನ್ನು ಹಾಕಿ ಮಿಶ್ರಣ ಮಾಡಿ.
- ಕಡಲೆಬೇಳೆಯನ್ನು ಹಸಿ ವಾಸನೆ ಹೋಗುವವರೆಗೆ ಮೂರು ನಿಮಿಷ ಬೇಯಿಸಿ. ಬಳಿಕ ಕೊತ್ತಂಬರಿ ಸೊಪ್ಪು, ಪುದೀನ ಸೊಪ್ಪು, ಶುಂಠಿ,. ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಮೆಣಸಿನಕಾಯಿ ಮತ್ತು ಅರಿಶಿನ ಸೇರಿಸಿ ಪ್ರೈ ಮಾಡಿಕೊಳ್ಳಿ.
- ಈ ಮಸಾಲಾ ಮಿಶ್ರಣವನ್ನು ಚೆನ್ನಾಗಿ ಮಿಕ್ಸ್ ಮಾಡಬೇಕಾಗುತ್ತದೆ ಮತ್ತು ಪಾತ್ರೆಯ ಮೇಲೆ ಮುಚ್ಚಳವನ್ನು ಸರಿಯಾಗಿ ಮುಚ್ಚಿಡಿ. ಮೂರು ನಿಮಿಷಗಳ ನಂತರ ಅದಕ್ಕೆ ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
- ಸ್ವಲ್ಪ ಫ್ರೈ ಆದ ನಂತರ ಮೊದಲೇ ಹುರಿದು ಇಟ್ಟುಕೊಂಡ ಕಂದು ಈರುಳ್ಳಿ ಹಾಕಿ ಮಿಶ್ರಣ ಮಾಡಿ. ಬಳಿಕ ಆರು ಲೋಟ ನೀರು ಸುರಿಯಿರಿ. (ಈ ಬಿರಿಯಾನಿಗೆ ಒಂದು ಲೋಟ ಅಕ್ಕಿಗೆ ಒಂದೂವರೆ ಲೋಟ ನೀರು ಸೇರಿಸಿ)
- ಈಗ ಚೆನ್ನಾಗಿ ಮಿಶ್ರಣ ಮಾಡಿ ಹಾಗೂ ಮುಚ್ಚಿಡಿ ಮತ್ತು ಐದು ನಿಮಿಷ ಬೇಯಿಸಿ.
- ಶೇ. 80 ರಷ್ಟು ಕಡಲೆ ಮತ್ತು ಆಲೂಗಡ್ಡೆ ಬೇಯಿಸಿದ ಬಳಿಕ, ಬಾಸ್ಮತಿ ಅಕ್ಕಿ ಸೇರಿಸಿ ಹಾಗೂ ನಿಧಾನವಾಗಿ ಮಿಶ್ರಣ ಮಾಡಿ. (ನೀವು ಬಾಸ್ಮತಿ ಅಕ್ಕಿಯ ಬದಲಿಗೆ ಸಾಮಾನ್ಯ ಅಕ್ಕಿಯನ್ನು ಕೂಡ ಬಳಸಬಹುದು)
- ಮುಚ್ಚಳವನ್ನು ಸರಿಯಾಗಿ ಮುಚ್ಚಿ ಹಾಗೂ 5 ನಿಮಿಷ ಬೇಯಿಸಿ.
- ನಂತರ ನಿಧಾನವಾಗಿ ಕೆಳಗಿನಿಂದ ಒಮ್ಮೆ ಮಿಶ್ರಣ ಮಾಡಿ. ನಂತರ ಮುಚ್ಚಿ ಮತ್ತು ಇನ್ನೊಂದು 5 ನಿಮಿಷ ಬೇಯಿಸಿ. ನಂತರ ಸ್ಟವ್ ಆಫ್ ಮಾಡಿ.
- ಹೀಗೆ ಸಿಂಪಲ್ ಆಗಿ ಮಾಡಿದರೆ ಸಾಕು ರುಚಿಕರ ದಾಲ್ ಬಿರಿಯಾನಿ ರೆಡಿಯಾಗುತ್ತದೆ.
- ನಿಮಗೆ ಇಷ್ಟವಾದರೆ, ಮನೆಯಲ್ಲಿ ಈ ದಾಲ್ ಬಿರಿಯಾನಿ ಪ್ರಯತ್ನಿಸಿ ನೋಡಿ.
ಇದನ್ನೂ ಓದಿ:ಸಸ್ಯಾಹಾರಿಗಳಿಗೆ ಹೈದರಾಬಾದಿ ಕ್ಯಾಪ್ಸಿಕಂ ದಮ್ ಬಿರಿಯಾನಿ: ಟೇಸ್ಟ್ ಕೂಡ ಸಖತ್ ಮಜಾ ಕೊಡುತ್ತೆ! - Capsicum Dum Biryani Recipe