ಕರ್ನಾಟಕ

karnataka

ETV Bharat / international

ಇಮ್ರಾನ್ ಖಾನ್​ರ ಪಿಟಿಐ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರಾ ಜೈಶಂಕರ್? ಪಾಕಿಸ್ತಾನದಲ್ಲಿ ಆಗಿದ್ದೇನು? - Jaishankar Visits Pakistan - JAISHANKAR VISITS PAKISTAN

ಪಿಟಿಯ ಸಭೆಯಲ್ಲಿ ಭಾಗವಹಿಸುವಂತೆ ಜೈಶಂಕರ್ ಅವರಿಗೆ ಆಹ್ವಾನ ನೀಡಿಲ್ಲ ಎಂದು ಪಿಟಿಐ ಪಕ್ಷ ಹೇಳಿದೆ.

ವಿದೇಶಾಂಗ ಸಚಿವ ಎಸ್. ಜೈಶಂಕರ್
ವಿದೇಶಾಂಗ ಸಚಿವ ಎಸ್. ಜೈಶಂಕರ್ (IANS)

By PTI

Published : Oct 6, 2024, 4:48 PM IST

ಪೇಶಾವರ: ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಪ್ರತಿಭಟನೆಯಲ್ಲಿ ಭಾಗಿಯಾಗುವಂತೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಆಹ್ವಾನ ನೀಡಿದ್ದ ಪಕ್ಷದ ಮುಖಂಡರೊಬ್ಬರ ಹೇಳಿಕೆಯಿಂದ ಪಕ್ಷವು ಅಂತರ ಕಾಯ್ದುಕೊಂಡಿದೆ. ತನ್ನ ರಾಜಕೀಯ ಹೋರಾಟದಲ್ಲಿ ವಿದೇಶಿ ಶಕ್ತಿಗಳಿಗೆ ಯಾವುದೇ ಪಾತ್ರವಿಲ್ಲ ಎಂದು ಅದು ಹೇಳಿದೆ.

ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಆಡಳಿತದಲ್ಲಿರುವ ಖೈಬರ್ ಪಖ್ತುನಖ್ವಾ ಪ್ರಾಂತ್ಯದ ಮುಖ್ಯಮಂತ್ರಿಗಳ ಮಾಹಿತಿ ಸಲಹೆಗಾರ ಮುಹಮ್ಮದ್ ಅಲಿ ಸೈಫ್ ಅವರ ಹೇಳಿಕೆಯನ್ನು ವಿಪರೀತವಾಗಿ ಅರ್ಥೈಸಲಾಗಿದೆ ಎಂದು ಪಕ್ಷದ ಅಧ್ಯಕ್ಷ ಬ್ಯಾರಿಸ್ಟರ್ ಗೋಹರ್ ಅಲಿ ಖಾನ್ ಶನಿವಾರ ಹೇಳಿದ್ದಾರೆ.

ಪಿಟಿಐನ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಜೈಶಂಕರ್ ಅವರಿಗೆ ಆಹ್ವಾನ ನೀಡಲು ಪಕ್ಷ ಯೋಜಿಸಿದೆ ಎಂದು ಸೈಫ್ ಹೇಳಿದ್ದರು. ಇದಕ್ಕೆ ದೇಶಾದ್ಯಂತ ಭಾರಿ ವಿರೋಧ ವ್ಯಕ್ತವಾಗಿದೆ.

ನಮ್ಮ ಜನರೊಂದಿಗೆ ಮಾತನಾಡುವಂತೆ ಮತ್ತು ಪಾಕಿಸ್ತಾನವು ಶಕ್ತಿಶಾಲಿ ಪ್ರಜಾಪ್ರಭುತ್ವವಾಗಿದ್ದು, ಇಲ್ಲಿ ಪ್ರತಿಯೊಬ್ಬರಿಗೂ ಪ್ರತಿಭಟಿಸುವ ಹಕ್ಕಿದೆ ಎಂಬುದನ್ನು ಪ್ರತಿಪಾದಿಸಲು ಪಿಟಿಐ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ಪಿಟಿಐನ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸುತ್ತದೆ ಎಂದು ಸೈಫ್ ಶನಿವಾರ ಪ್ರಶ್ನೆಯೊಂದಕ್ಕೆ ವ್ಯಂಗ್ಯವಾಗಿ ಉತ್ತರಿಸಿದ್ದರು.

ಸೈಫ್ ಅವರ ಹೇಳಿಕೆಗೆ ಸ್ಪಷ್ಟೀಕರಣ ನೀಡಿದ ಬ್ಯಾರಿಸ್ಟರ್ ಗೋಹರ್ ಖಾನ್, "ಭಾರತದ ಬಗ್ಗೆ ಪಾಕಿಸ್ತಾನವು 70 ವರ್ಷಗಳಿಂದ ಅಳವಡಿಸಿಕೊಂಡು ಬಂದಿರುವ ನೀತಿಯು ಪಿಟಿಐ ಪಕ್ಷದ ಬೆನ್ನೆಲುಬಾಗಿದೆ. ಶಾಂತಿಯುತ ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು. ಪ್ರತಿಭಟನೆಯಲ್ಲಿ ಭಾಗವಹಿಸಲು ಭಾರತ ಸೇರಿದಂತೆ ಯಾವುದೇ ವಿದೇಶಿ ಗಣ್ಯರಿಗೆ ಪಿಟಿಐಗೆ ಆಹ್ವಾನ ನೀಡಿಲ್ಲ. ನಮ್ಮ ಆಂತರಿಕ ವಿಷಯಗಳ ಬಗ್ಗೆ ಯಾವುದೇ ವಿದೇಶಿ ಗಣ್ಯರು ಹಸ್ತಕ್ಷೇಪ ಮಾಡಲು ಅವಕಾಶವಿಲ್ಲ. ಪಿಟಿಐನ ರಾಜಕೀಯ ಹೋರಾಟದಲ್ಲಿ ಭಾರತ ಸೇರಿದಂತೆ ಯಾವುದೇ ದೇಶಕ್ಕೆ ಯಾವುದೇ ಅವಕಾಶವಿಲ್ಲ" ಎಂದು ಹೇಳಿದರು.

"ಪಕ್ಷದ ಹೋರಾಟವು ಆಂತರಿಕ ವಿಷಯವಾಗಿದ್ದು, ಇದರಲ್ಲಿ ಜೈಶಂಕರ್ ಭಾಗಿಯಾಗುತ್ತಿಲ್ಲ. ಸೈಫ್ ಅವರ ಹೇಳಿಕೆಯು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸುವಂತೆ ಪಕ್ಷವು ಭಾರತೀಯ ಸಚಿವರನ್ನು ಆಹ್ವಾನಿಸಿದೆ ಎಂಬ ತಪ್ಪು ಅಭಿಪ್ರಾಯವನ್ನು ಸೃಷ್ಟಿಸಿದೆ" ಎಂದು ಅವರು ತಿಳಿಸಿದರು. ಸರ್ಕಾರವು ಸಂವಿಧಾನಕ್ಕೆ ಬದ್ಧವಾಗಿರಬೇಕು, ನ್ಯಾಯಾಂಗದ ಸ್ವಾತಂತ್ರ್ಯವನ್ನು ರಕ್ಷಿಸಬೇಕು, ಹಣದುಬ್ಬರ ನಿಯಂತ್ರಿಸಬೇಕು ಮತ್ತು ಪಕ್ಷದ ಸಂಸ್ಥಾಪಕ ಇಮ್ರಾನ್ ಖಾನ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಪಿಟಿಐ ಪ್ರತಿಭಟನೆ ನಡೆಸುತ್ತಿದೆ.

ಏತನ್ಮಧ್ಯೆ ಅಕ್ಟೋಬರ್ 15 ಮತ್ತು 16 ರಂದು ಪಾಕಿಸ್ತಾನದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ ಸರ್ಕಾರಗಳ ಮುಖ್ಯಸ್ಥರ ಮಂಡಳಿ (ಎಸ್​ಸಿಒ-ಸಿಎಚ್​ಜಿ) ಸಭೆಯಲ್ಲಿ ಭಾಗವಹಿಸಲು ಜೈಶಂಕರ್ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದ್ದಾರೆ.

ಇದನ್ನೂ ಓದಿ : 'ಅಮೆರಿಕದಲ್ಲಿ ಪ್ರಜಾಪ್ರಭುತ್ವ ಕಾಪಾಡಬಲ್ಲ ಏಕೈಕ ಅಭ್ಯರ್ಥಿ ಟ್ರಂಪ್': ಎಲೋನ್ ಮಸ್ಕ್ ಪ್ರತಿಪಾದನೆ - 2024 US Presidential election

ABOUT THE AUTHOR

...view details