ನವದೆಹಲಿ:ಇಂದು ನೆಲ್ಸನ್ ಮಂಡೇಲಾ ಜನ್ಮದಿನ.2009ರಲ್ಲಿ ಈ ದಿನವನ್ನು ಅಂತಾರಾಷ್ಟ್ರೀಯ ದಿನವನ್ನಾಗಿ ವಿಶ್ವಸಂಸ್ಥೆ ಘೋಷಿಸಿತು. 2010 ಜುಲೈ 18ರಂದು ಮೊದಲ ಬಾರಿಗೆ ಮಂಡೇಲಾ ದಿನ ಜಾರಿಗೆ ಬಂತು. ಮಂಡೇಲಾ ಅವರ ಪರಂಪರೆಯನ್ನು ಗೌರವಿಸುವುದು, ಅವರನ್ನು ಸ್ಪೂರ್ತಿಯಾಗಿರಿಸಿಕೊಂಡು ಮಾನವೀಯ ಸೇವೆಯ ಮೂಲಕ ಜಗತ್ತನ್ನು ಉತ್ತಮವಾಗಿಸುವತ್ತ ಪ್ರೇರೇಪಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.
67 ವರ್ಷಗಳ ಕಾಲ ವರ್ಣಭೇದ ನೀತಿಯ ವಿರುದ್ಧ, ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಮಾನವ ಹಕ್ಕುಗಳಿಗಾಗಿ ಹೋರಾಡಿದವರು ನೆಲ್ಸನ್ ಮಂಡೇಲಾ. ಇದರ ಸಂಕೇತವಾಗಿ ಜನರನ್ನು ಈ ದಿನದಂದು 67 ನಿಮಿಷ ಬೇರೆಯವರಿಗೆ ಸಹಾಯ ಮಾಡಲು ಪ್ರೋತ್ಸಾಹಿಸಲಾಗುತ್ತದೆ. ಸಮುದಾಯ ಸೇವೆ, ಸ್ವಯಂಸೇವಕ ಕೆಲಸ ಸೇರಿದಂತೆ ಜನರ ಜೀವನ ಸುಧಾರಣೆಗೆ ಸಹಾಯ ಮಾಡುವ ಕಾರ್ಯವನ್ನು ಈ ದಿನ ಆಯೋಜಿಸಲಾಗುತ್ತದೆ.
ದಿನದ ಇತಿಹಾಸ: ನೆಲ್ಸನ್ ಮಂಡೇಲಾ ಅಂತಾರಾಷ್ಟ್ರೀಯ ದಿನ ಅಥವಾ ಮಂಡೇಲಾ ದಿನವನ್ನು ಅಧಿಕೃತವಾಗಿ 2009ರ ನವೆಂಬರ್ನಲ್ಲಿ ವಿಶ್ವಸಂಸ್ಥೆ ಘೋಷಿಸಿತ್ತು. ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧದ ಹೋರಾಟದ ನೇತಾರ ಮತ್ತು ಶಾಂತಿ, ಸಮನ್ವಯ ಮತ್ತು ಸಾಮಾಜಿಕ ನ್ಯಾಯದ ಜಾಗತಿಕ ಸಂಕೇತವಾದ ನೆಲ್ಸನ್ ಮಂಡೇಲಾ ಅವರನ್ನು ಗೌರವಿಸುವ ಹಿನ್ನೆಲೆಯಲ್ಲಿ ಈ ದಿನವನ್ನು ಸ್ಥಾಪಿಸಲಾಗಿದೆ.
ಮಂಡೇಲಾ ದಿನದ ಪ್ರಮುಖ ಮೈಲಿಗಲ್ಲುಗಳು:
ಸಮರ್ಥನೆ:ವಿಶ್ವಸಂಸ್ಥೆ ಅಧಿಕೃತ ದಿನವಾಗಿ ಘೋಷಿಸುವ ಮುನ್ನ ನೆಲ್ಸನ್ ಮಂಡೇಲಾ ಅವರ ಗೌರವಾರ್ಥ ದಿನವನ್ನು ಸ್ಥಾಪಿಸುವ ಪ್ರಯತ್ನಗಳು ನಡೆಯಿತು. ಶಾಂತಿ ಮತ್ತು ಸ್ವಾತಂತ್ರ್ಯಕ್ಕೆ ಮಂಡೇಲಾ ಅವರ ಕೊಡುಗೆಗಳ ಸ್ಮರಣೆಗೆ ವಿವಿಧ ಸಂಸ್ಥೆಗಳು ಮತ್ತು ವ್ಯಕ್ತಿಗಳು ಒಂದು ದಿನವನ್ನು ಮೀಸಲಾಗಿರಿಸುವ ಕುರಿತು ತಿಳಿಸಿದರು.