ಸಿಡ್ನಿ,ಆಸ್ಟ್ರೇಲಿಯಾ:ವನವಾಟುದಲ್ಲಿ ಮಂಗಳವಾರ ಸಂಭವಿಸಿದ ಪ್ರಬಲ ಭೂಕಂಪನದಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದು,ನೂರಾರು ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಏರಿಕೆ ಆಗುವ ಸಾಧ್ಯತೆಗಳಿವೆ.
ಭಾರಿ ಭೂಕಂಪದಿಂದಾಗಿ ರಸ್ತೆಗಳಿಗೆ ಹಾನಿಯಾಗಿದ್ದು, ವಿದ್ಯುತ್ ಮತ್ತು ಫೋನ್ ಲೈನ್‌ಗಳ ಸಂಪರ್ಕ ಕಡಿತಗೊಂಡಿವೆ. ಇದರಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ತಿಳಿದು ಬಂದಿದೆ. ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ರೆಡ್‌ಕ್ರಾಸ್ ಸಾವಿನ ಸಂಖ್ಯೆಯನ್ನು ವರದಿ ಮಾಡಿದೆ. ಸ್ಥಳೀಯ ಮಾಧ್ಯಮಗಳು ಈ ಹಿಂದೆ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದವು ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿತ್ತು.
ಇನ್ನೂ ನಡುಗುತ್ತಲೇ ಇದೆ ಭೂಮಿ:ಮಂಗಳವಾರ ವನವಾಟುವಿನ ರಾಜಧಾನಿ ಪೋರ್ಟ್ ವಿಲಾದಲ್ಲಿ 7.3 ತೀವ್ರತೆಯ ಭೂಕಂಪ ಸಂಭವಿಸಿದ್ದು ಭಾರಿ ಪ್ರಮಾಣದ ಹಾನಿ ಸಂಭವಿಸಿದೆ. ಬುಧವಾರ ಮುಂಜಾನೆ ಸಹ 5.5 ರ ತೀವ್ರತೆಯ ಹಲವಾರು ಪುನರಾವರ್ತಿತ ಭೂಕಂಪಗಳು ಸಂಭವಿಸಿವೆ ಎಂದು ಅಮೆರಿಕದ ಜಿಯೋಲಾಜಿಕಲ್ ಸರ್ವೆ ಹೇಳಿದೆ. ಫಿಜಿ ಮೂಲದ ಪೆಸಿಫಿಕ್‌ನ ರೆಡ್‌ಕ್ರಾಸ್‌ನ ಮುಖ್ಯಸ್ಥ ಕೇಟೀ ಗ್ರೀನ್‌ವುಡ್ ಸಾಮಾಜಿಕ ಮಾಧ್ಯಮದಲ್ಲಿ 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾದ ವಿದೇಶಾಂಗ ವ್ಯವಹಾರಗಳು ಮತ್ತು ವ್ಯಾಪಾರ ಇಲಾಖೆ (DFAT) ಈ ಪ್ರದೇಶದಲ್ಲಿ ಹಲವಾರು ಆಸ್ಟ್ರೇಲಿಯನ್ನರು ಇದ್ದರೆ ಎಂದು ಹೇಳಿದ್ದರು. ಆದರೆ, ಅಲ್ಲಿನ ಉಪ ಪ್ರಧಾನ ಮಂತ್ರಿ ರಿಚರ್ಡ್ ಮಾರ್ಲ್ಸ್ ಭೂಕಂಪದಲ್ಲಿ ಆಸ್ಟ್ರೇಲಿಯನ್ನರು ಯಾರೂ ಗಾಯಗೊಂಡಿಲ್ಲ ಎಂದು ಹೇಳಿದ್ದಾರೆ. ಮಂಗಳವಾರ ರಾತ್ರಿ ಹೇಳಿಕೆಯೊಂದನ್ನು ನೀಡಿರುವ ಆಸ್ಟ್ರೇಲಿಯಾ ವಿದೇಶಾಂಗ ವ್ಯವಹಾರಗಳ ಸಚಿವ ಪೆನ್ನಿ ವಾಂಗ್ , ಭೂಕಂಪವು ಗಮನಾರ್ಹ ಹಾನಿಯನ್ನುಂಟುಮಾಡಿದೆ ಎಂದು ತಿಳಿಸಿದ್ದಾರೆ. ಆಸ್ಟ್ರೇಲಿಯಾ ವನವಾಟುದಲ್ಲಿ ಭೂಕಂಪದಿಂದ ಸಂಕಷ್ಟಕ್ಕೆ ಒಳಗಾಗಿರುವವ ನೆರವಿಗೆ ನಿಲ್ಲುವುದಾಗಿ ಹೇಳಿದ್ದಾರೆ.