ವಾಷಿಂಗ್ಟನ್, ಅಮೆರಿಕ: ಅಮೆರಿಕದಲ್ಲಿ ಕುಟುಂಬ ಆಧಾರಿತ ವಲಸೆ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಎರಡು ಡೆಮಾಕ್ರಟಿಕ್ ಪಕ್ಷದ ಸೆನೆಟರ್‌ಗಳಾದ ಮ್ಯಾಜಿ ಹಿರೊನೊ ಮತ್ತು ಟಮ್ಮಿ ಡಕ್‌ವರ್ತ್ ಬುಧವಾರ "ಕುಟುಂಬಗಳನ್ನು ಒಟ್ಟುಗೂಡಿಸುವ ಕಾಯಿದೆ"ಯನ್ನು ಪರಿಚಯಿಸಿದ್ದಾರೆ.
ವಲಸಿಗ ಕುಟುಂಬಗಳನ್ನು ಮತ್ತೆ ಒಗ್ಗೂಡಿಸುವ ಮತ್ತು ಪ್ರತಿ-ದೇಶದ ಕುಟುಂಬ ಆಧಾರಿತ ವಲಸೆ ಮಿತಿಗಳನ್ನು ಹೆಚ್ಚಿಸುವ ಉದ್ದೇಶದಿಂದ ಈ ಮಸೂದೆಯನ್ನು ಪರಿಚಯಿಸಲಾಗಿದೆ. ಈ ಮಸೂದೆ ಬ್ಯಾಕ್ಲಾಗ್ಗಳನ್ನು ಕಡಿಮೆ ಮಾಡುವ ಮೂಲಕ ಮತ್ತು ಭಾರತ ಮತ್ತು ಚೀನಾದಂತಹ ದೇಶಗಳಿಗೆ ಅನುಕೂಲವಾಗುವಂತೆ ವಲಸೆ ಮಿತಿಗಳನ್ನು ಹೆಚ್ಚಿಸುವ ಮೂಲಕ ವ್ಯವಸ್ಥೆಯೊಳಗಿನ ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತದೆ. ಈ ಮಸೂದೆ, ದೇಶದ ವಲಸೆ ವ್ಯವಸ್ಥೆಯಲ್ಲಿ ಕುಟಂಬದ ಐಕ್ಯತೆಯನ್ನು ಉತ್ತೇಜಿಸಲಿದೆ.
ನಿಬಂಧನೆಗಳನ್ನು ಸರಳಗೊಳಿಸುವ ಉದ್ದೇಶದಿಂದ ಮಸೂದೆ:'ಫಿಲಿಪಿನೋ ವೆಟರನ್ಸ್ ಫ್ಯಾಮಿಲಿ ರಿಯೂನಿಫಿಕೇಶನ್ ಆ್ಯಕ್ಟ್' ಸೇರಿದಂತೆ ವಿವಿಧ ಕಾರ್ಯಕ್ರಮಗಳ ಅಡಿ ನಿರ್ಬಂಧಗಳನ್ನು ಸಡಿಲಗೊಳಿಸುವ ಮತ್ತು ವೀಸಾ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಮೂಲಕ ಕುಟುಂಬ ಐಕ್ಯತೆ ಉತ್ತೇಜಿಸುವುದು ಮಸೂದೆಯ ಪ್ರಮುಖ ಉದ್ದೇಶವಾಗಿದೆ. ಬಳಕೆಯಾಗದ ವೀಸಾಗಳನ್ನು ಹಿಂಪಡೆಯಲು ಮತ್ತು ವೀಸಾ ಮಿತಿಗಳಿಂದ ನಿಕಟ ಸಂಬಂಧಿಗಳಿಗೆ ವಿನಾಯಿತಿ ನೀಡುವುದು ಮಸೂದೆಯ ಗುರಿಯಾಗಿದೆ.
"ಪ್ರಸ್ತುತ ಅಮೆರಿಕದ ಸೆನೆಟ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಏಕೈಕ ವಲಸಿಗನಾಗಿ, ನಮ್ಮ ದೇಶದ ಕುಟುಂಬ ವಲಸೆ ವ್ಯವಸ್ಥೆಯನ್ನು ನವೀಕರಿಸಲು ಮತ್ತು ಕುಟುಂಬ ಐಕ್ಯತೆಯನ್ನು ಉತ್ತೇಜಿಸಲು ಕುಟುಂಬಗಳನ್ನು ಮರು ಸೇರಿಸುವ ಕಾಯಿದೆಯನ್ನು ಪರಿಚಯಿಸಲು ನಾನು ಹೆಮ್ಮೆಪಡುತ್ತೇನೆ" ಎಂದು ಹಿರೊನೊ ಹೇಳಿದರು.