ಕರ್ನಾಟಕ

karnataka

'ಗಂಭೀರ ಪರಿಣಾಮ ಎದುರಾಗಲಿದೆ': ಸಮುದ್ರ ಮಟ್ಟದ ಏರಿಕೆ ಬಗ್ಗೆ ವಿಶ್ವಸಂಸ್ಥೆ ಮುಖ್ಯಸ್ಥರ ಎಚ್ಚರಿಕೆ - UN chief issues climate SOS

By ETV Bharat Karnataka Team

Published : Aug 28, 2024, 2:25 PM IST

ಸಮುದ್ರ ಮಟ್ಟ ಏರಿಕೆಯಿಂದ ವಿಶ್ವಕ್ಕೆ ಗಂಡಾಂತರ ಎದುರಾಗಲಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಎಚ್ಚರಿಕೆ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)

ನುಕು ಅಲೋಫಾ,ಟೋಂಗಾ: ಸಮುದ್ರದ ಮಟ್ಟದ ಏರುವಿಕೆ ಮತ್ತು ಹಸಿರು ಮನೆ ಅನಿಲಗಳ ಪರಿಣಾಮದಿಂದ ಊಹಿಸಲಾಗದಷ್ಟು ಗಂಭೀರ ಪ್ರಮಾಣದ ಹವಾಮಾನ ಬಿಕ್ಕಟ್ಟು ಎದುರಾಗುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆ ನೀಡಿರುವ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ತಕ್ಷಣವೇ ಸಮುದ್ರಗಳನ್ನು ರಕ್ಷಿಸಲು ಮುಂದಾಗಿ ಎಂದು ವಿಶ್ವದ ರಾಷ್ಟ್ರಗಳಿಗೆ ತುರ್ತು ಕರೆ ನಿಡಿದ್ದಾರೆ.

ಟೋಂಗಾದ ರಾಜಧಾನಿ ನುಕುಅಲೋಫಾದಲ್ಲಿ ಮಂಗಳವಾರ ನಡೆದ ಪೆಸಿಫಿಕ್ ದ್ವೀಪಗಳ ಪ್ರಾದೇಶಿಕ ನಾಯಕರ ಸಭೆಯಲ್ಲಿ ಮಾತನಾಡಿದ ಅವರು, "ಒಂದು ಬಾರಿ ಅಪಾಯ ಎದುರಾದ ನಂತರ ಮತ್ತೆ ಸುರಕ್ಷಿತವಾಗಿ ಹಿಂದೆ ಹೋಗುವ ಯಾವುದೇ ಅವಕಾಶಗಳಿಲ್ಲ" ಎಂದು ಇದೇ ವೇಳೆ ಎಚ್ಚರಿಕೆ ನೀಡಿದರು.

"ಇದೊಂದು ಗಂಭೀರ ಪರಿಸ್ಥಿತಿಯಾಗಿದೆ. ಸಮುದ್ರಗಳ ಮಟ್ಟ ಏರಿಕೆಯಾಗಲು ಸಂಪೂರ್ಣವಾಗಿ ಮಾನವನೇ ಕಾರಣಕರ್ತ. ಈ ಬಿಕ್ಕಟ್ಟು ಶೀಘ್ರದಲ್ಲೇ ಊಹಿಸಲಾಗದಷ್ಟು ದೊಡ್ಡ ಮಟ್ಟಕ್ಕೇರಲಿದೆ. ಈ ಬಿಕ್ಕಟ್ಟಿಗೆ ಕಾರಣ ಸ್ಪಷ್ಟವಾಗಿದೆ. ಪಳೆಯುಳಿಕೆ ಇಂಧನಗಳನ್ನು ಸುಡುವುದರಿಂದ ಉತ್ಪತ್ತಿಯಾಗುವ ಹಸಿರುಮನೆ ಅನಿಲಗಳು ಬೂಮಿಯನ್ನು ಬಿಸಿ ಮಾಡುತ್ತಿವೆ. ಈ ಬಿಸಿಯನ್ನು ಸಮುದ್ರಗಳು ಹೀರಿಕೊಳ್ಳುತ್ತಿವೆ." ಎಂದು ಗುಟೆರಸ್​ ಕಳವಳ ವ್ಯಕ್ತಪಡಿಸಿದರು.

"ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ತೀವ್ರವಾಗಿ ಕಡಿಮೆ ಮಾಡದಿದ್ದಲ್ಲಿ ಪೆಸಿಫಿಕ್ ದ್ವೀಪಗಳು ಶತಮಾನದ ಮಧ್ಯದ ವೇಳೆಗೆ ಕನಿಷ್ಠ 15 ಸೆಂಟಿಮೀಟರ್ [6 ಇಂಚು] ಹೆಚ್ಚುವರಿ ಸಮುದ್ರ ಮಟ್ಟ ಏರಿಕೆಯಿಂದ ಮುಳುಗಬಹುದು ಮತ್ತು ಕೆಲ ಸ್ಥಳಗಳಲ್ಲಿ ವರ್ಷಕ್ಕೆ 30 ದಿನಗಳಿಗಿಂತ ಹೆಚ್ಚು ಕರಾವಳಿ ಪ್ರವಾಹ ಉಂಟಾಗಬಹುದು" ಎಂದು ಅವರು ಹೇಳಿದರು. "ಆದರೆ, ನಾವು ಪೆಸಿಫಿಕ್ ಅನ್ನು ಉಳಿಸಿದರೆ, ನಾವು ನಮ್ಮನ್ನು ಸಹ ಉಳಿಸುತ್ತೇವೆ. ತುಂಬಾ ತಡವಾಗುವ ಮೊದಲು ಜಗತ್ತು ಕಾರ್ಯೋನ್ಮುಖವಾಗಬೇಕಿದೆ ಮತ್ತು ತುರ್ತು ಅಗತ್ಯಕ್ಕೆ ಸ್ಪಂದಿಸಬೇಕಿದೆ." ಎಂದು ಅವರು ತಿಳಿಸಿದರು.

ಈ ಹಿಂದೆ 2019 ರಲ್ಲಿ ಪೆಸಿಫಿಕ್ ದ್ವೀಪಗಳ ಪ್ರಾದೇಶಿಕ ನಾಯಕರ ಸಭೆಯಲ್ಲಿ ಭಾಗವಹಿಸಿದ್ದ ಗುಟೆರೆಸ್, ಸಮುದ್ರ ಮಟ್ಟ ಏರಿಕೆಯಿಂದ ಕರಾವಳಿಯ 5 ಕಿ.ಮೀ (3 ಮೈಲಿ) ಒಳಗೆ ಸುಮಾರು 90 ಪ್ರತಿಶತದಷ್ಟು ಜನರು ವಾಸಿಸುವ ಮತ್ತು ಸಮುದ್ರ ಮಟ್ಟದಿಂದ ಕೇವಲ ಒಂದರಿಂದ 1 ರಿಂದ 2 ಮೀಟರ್ (3.2-6.5 ಅಡಿ) ಎತ್ತರದಲ್ಲಿರುವ ಪೆಸಿಫಿಕ್ ದ್ವೀಪಗಳಿಗೆ ಅತ್ಯಧಿಕ ಅಪಾಯ ಉಂಟಾಗಲಿದೆ ಎಂದು ಎಚ್ಚರಿಸಿದ್ದರು.

ವಿಶ್ವದ ಅತ್ಯಂತ ಹವಾಮಾನ-ದುರ್ಬಲ ದೇಶಗಳಿಗೆ ಆರ್ಥಿಕವಾಗಿ ಬೆಂಬಲ ನೀಡುವಂತೆ ಗುಟೆರೆಸ್ ಅತಿದೊಡ್ಡ ಹಸಿರು ಮನೆ ಅನಿಲ ಉತ್ಪಾದಕ ಗ್ರೂಪ್ ಆಫ್ 20 (ಜಿ 20) ರಾಷ್ಟ್ರಗಳಿಗೆ ಮತ್ತೆ ಮನವಿ ಮಾಡಿದರು. "ಸಮುದ್ರ ಮಟ್ಟ ಏರಿಕೆಯಾಗುತ್ತಿರುವುದನ್ನು ಎದುರಿಸಲು ನಮಗೆ ಹೆಚ್ಚಿನ ಹಣದ ಅಗತ್ಯವಿದೆ" ಎಂದು ಅವರು ಹೇಳಿದರು.

ಇದನ್ನೂ ಓದಿ : ವೆಸ್ಟ್​ಬ್ಯಾಂಕ್​ನ 4 ನಗರಗಳ ಮೇಲೆ ಇಸ್ರೇಲ್ ಏಕಕಾಲಕ್ಕೆ ದಾಳಿ: 11 ಪ್ಯಾಲೆಸ್ಟೈನಿಯರ ಸಾವು - Israel attacks West Bank

ABOUT THE AUTHOR

...view details