ಕರ್ನಾಟಕ

karnataka

ETV Bharat / international

ತೀವ್ರಗೊಂಡ ಉಕ್ರೇನ್ ದಾಳಿ: ರಷ್ಯಾದ ಕುರ್ಸ್ಕ್​ನಿಂದ 1 ಲಕ್ಷ 21 ಸಾವಿರ ಜನರ ಸ್ಥಳಾಂತರ - Russia Ukraine War - RUSSIA UKRAINE WAR

ರಷ್ಯಾದ ಮೇಲೆ ಉಕ್ರೇನ್ ದಾಳಿ ತೀವ್ರಗೊಂಡಿದ್ದು, ಕುರ್ಸ್ಕ್ ಪ್ರದೇಶದ ಒಂಬತ್ತು ಗಡಿ ಜಿಲ್ಲೆಗಳಿಂದ 1,21,000 ಕ್ಕೂ ಹೆಚ್ಚು ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

ಕುರ್ಸ್ಕ್ ಪ್ರದೇಶದಲ್ಲಿ ಸ್ಥಳಾಂತರಕ್ಕೆ ಕಾಯುತ್ತಿರುವ ರಷ್ಯಾ ನಾಗರಿಕರು
ಕುರ್ಸ್ಕ್ ಪ್ರದೇಶದಲ್ಲಿ ಸ್ಥಳಾಂತರಕ್ಕೆ ಕಾಯುತ್ತಿರುವ ರಷ್ಯಾ ನಾಗರಿಕರು (IANS)

By ETV Bharat Karnataka Team

Published : Aug 20, 2024, 12:31 PM IST

ಮಾಸ್ಕೋ : ಕುರ್ಸ್ಕ್ ಪ್ರದೇಶದ ಒಂಬತ್ತು ಗಡಿ ಜಿಲ್ಲೆಗಳಿಂದ 1,21,000 ಕ್ಕೂ ಹೆಚ್ಚು ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ರಷ್ಯಾ ತುರ್ತು ಸಚಿವಾಲಯದ ಉಪ ವಕ್ತಾರ ಅರ್ತ್ಯೋಮ್ ಶರೋವ್ ಹೇಳಿದ್ದಾರೆ. ಕಳೆದ 24 ಗಂಟೆಗಳಲ್ಲಿ, 650 ಕ್ಕಿಂತ ಹೆಚ್ಚು ಜನ ಸ್ವಯಂಪ್ರೇರಿತವಾಗಿ ಸ್ಥಳವನ್ನು ತೊರೆದಿದ್ದಾರೆ ಅಥವಾ ಸಂಘಟಿತ ಗುಂಪುಗಳಲ್ಲಿ ಸುರಕ್ಷತೆಯೊಂದಿಗೆ ಪ್ರದೇಶದಿಂದ ಹೊರಗೆ ಬಂದಿದ್ದಾರೆ. ಜನರ ಸ್ಥಳಾಂತರ ಕಾರ್ಯಾಚರಣೆ ಈಗಲೂ ಮುಂದುವರೆದಿದೆ ಎಂದು ಶರೋವ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಸ್ಥಳಾಂತರಗೊಂಡ ವ್ಯಕ್ತಿಗಳನ್ನು ಅವರ ಸಂಬಂಧಿಕರ ಮನೆಗಳಿಗೆ ಅಥವಾ ತಾತ್ಕಾಲಿಕ ಆಶ್ರಯ ತಾಣಗಳಿಗೆ ಕಳುಹಿಸಲಾಗುತ್ತಿದೆ. ಕುರ್ಸ್ಕ್ ಪ್ರದೇಶದಲ್ಲಿ 84 ತಾತ್ಕಾಲಿಕ ಆಶ್ರಯಗಳನ್ನು ಸ್ಥಾಪಿಸಲಾಗಿದ್ದು, ಇವುಗಳಲ್ಲಿ ಸದ್ಯ 6,500 ಕ್ಕೂ ಹೆಚ್ಚು ಜನ ಆಶ್ರಯ ಪಡೆದಿದ್ದಾರೆ ಎಂದು ಅವರು ಹೇಳಿದರು. ರಷ್ಯಾದ 23 ಪ್ರದೇಶಗಳಲ್ಲಿ ಒಟ್ಟು 120 ತಾತ್ಕಾಲಿಕ ಆಶ್ರಯ ಶಿಬಿರಗಳನ್ನು ಸ್ಥಾಪಿಸಲಾಗಿದ್ದು, ಇವುಗಳಲ್ಲಿ ಸುಮಾರು 3,000 ಜನರು ವಾಸಿಸುತ್ತಿದ್ದಾರೆ ಎಂದು ಶರೋವ್ ಮಾಹಿತಿ ನೀಡಿದರು.

ಏತನ್ಮಧ್ಯೆ, ರಷ್ಯಾದಾದ್ಯಂತ 57 ವಿವಿಧ ಪ್ರದೇಶಗಳಲ್ಲಿ ಕುರ್ಸ್ಕ್ ಪ್ರದೇಶದಿಂದ ಸ್ಥಳಾಂತರಗೊಂಡವರಿಗೆ ಆಶ್ರಯ ನೀಡಲು 19,000 ಕ್ಕೂ ಹೆಚ್ಚು ಜನರಿಗೆ ಸ್ಥಳಾವಕಾಶ ಸಾಮರ್ಥ್ಯದ ಇನ್ನೂ 390 ತಾತ್ಕಾಲಿಕ ಆಶ್ರಯ ಶಿಬಿರಗಳು ಸಿದ್ಧವಾಗಿವೆ ಎಂದು ಅವರು ಹೇಳಿದರು.

ಉಕ್ರೇನ್ ಪಡೆಗಳು ಆಕ್ರಮಣಕಾರಿಯಾಗಿ ದಾಳಿ ನಡೆಸುವುದನ್ನು ಮುಂದುವರೆಸಿದ್ದು, ಎಲ್ಲಾ ದಾಳಿಗಳನ್ನು ಹಿಮ್ಮೆಟ್ಟಿಸಲಾಗಿದೆ ರಷ್ಯಾದ ರಕ್ಷಣಾ ಸಚಿವಾಲಯ ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿದೆ.

ರಷ್ಯಾದ ವಾಯುಯಾನ ಮತ್ತು ಫಿರಂಗಿ ದಳಗಳು ಉಕ್ರೇನ್ ಯೋಧರು ಮತ್ತು ಮೀಸಲು ಯೋಧರನ್ನು ಹುಡುಕಿ ಅವರ ಮೇಲೆ ದಾಳಿ ನಡೆಸುತ್ತಿದ್ದರೆ, ವಿಚಕ್ಷಣಾ ಘಟಕಗಳು ಅರಣ್ಯದ ಮೂಲಕ ರಷ್ಯಾದ ಭೂಪ್ರದೇಶದ ಒಳಗೆ ನುಗ್ಗಲು ಯತ್ನಿಸುತ್ತಿರುವ ಉಕ್ರೇನ್ ಸೇನಾ ತಂಡಗಳಿಗಾಗಿ ಹುಡುಕಾಟ ನಡೆಸುತ್ತಿವೆ ಎಂದು ಅದು ಹೇಳಿದೆ. ಗಮನಾರ್ಹ ಸಂಖ್ಯೆಯ ಯುದ್ಧ ಕೈದಿಗಳನ್ನು ಸೆರೆಹಿಡಿಯಲಾಗಿದೆ ಮತ್ತು ಸುಧಾರಿತ ಹಿಮಾರ್ಸ್ (HIMARS) ಬಹು ರಾಕೆಟ್ ಲಾಂಚರ್​ಗಳು ಸೇರಿದಂತೆ ಕೆಲ ಮಿಲಿಟರಿ ಉಪಕರಣಗಳನ್ನು ವಶಪಡಿಸಿಕೊಂಡು ನಾಶಪಡಿಸಲಾಗಿದೆ ಎಂದು ಸಚಿವಾಲಯ ವರದಿ ಮಾಡಿದೆ.

ಏತನ್ಮಧ್ಯೆ, ಕುರ್ಸ್ಕ್ ಪ್ರದೇಶದಲ್ಲಿ ನಡೆಸಲಾದ ಕಾರ್ಯಾಚರಣೆಯು ಯಶಸ್ಸಿನತ್ತ ಸಾಗುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ ಸ್ಕಿ ಸೋಮವಾರ ಟೆಲಿಗ್ರಾಮ್​ನಲ್ಲಿ ಉಕ್ರೇನ್ ಕಮಾಂಡರ್-ಇನ್-ಚೀಫ್ ಒಲೆಕ್ಸಾಂಡರ್ ಸಿರ್ಸ್ಕಿ ಅವರನ್ನು ಉಲ್ಲೇಖಿಸಿ ಹೇಳಿದರು. ಭವಿಷ್ಯದಲ್ಲಿ ತಮ್ಮ ಯೋಧರನ್ನು ಬಿಡಿಸಿಕೊಳ್ಳುವುದಕ್ಕಾಗಿ ರಷ್ಯಾದ ಅನೇಕ ಯೋಧರನ್ನು ಯುದ್ಧಬಂದಿಗಳನ್ನಾಗಿ ಸೆರೆಹಿಡಿಯಲಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : 2013ರ ಗೋಲಿಬಾರ್ ಪ್ರಕರಣ: ಶೇಖ್ ಹಸೀನಾ ವಿರುದ್ಧ 'ಸಾಮೂಹಿಕ ಕೊಲೆ' ದೂರು ದಾಖಲು - Sheikh Hasina

ABOUT THE AUTHOR

...view details